ಬಿಬಿಎಂಪಿ ವ್ಯಾಪ್ತಿಯಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಎದುರಾಗಬಾರದು. ಈ ನಿಟ್ಟಿನಲ್ಲಿ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಂಡು ಎಲ್ಲಿಯೂ ನೀರಿನ ಅಭಾವ ಬಾರದಂತೆ ನೋಡಿಕೊಳ್ಳಬೇಕು. ಪಾಲಿಕೆಯ ಮಹದೇವಪುರ, ಆರ್.ಆರ್.ನಗರ, ಬೊಮ್ಮನಹಳ್ಳಿ, ದಾಸರಹಳ್ಳಿ ಹಾಗೂ ಯಲಹಂಕ ವಲಯಗಳಿಗೆ (110 ಹಳ್ಳಿಗಳು ಸೇರಿದಂತೆ) ಬೋರ್‌ವೆಲ್‌ಗಳನ್ನು ಕೊರೆಯಲು ₹131 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ಅವಶ್ಯಕತೆಯಿರುವ ಕಡೆ ಕೊಳವೆ ಬಾವಿಗಳನ್ನು ಕೊರೆಯಬೇಕು” ಎಂದು ಅಧಿಕಾರಿಗಳಿಗೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನೀರಿನ ಅಭಾವ ಕುರಿತು ಶನಿವಾರ ನಡೆದ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು. “ಎಲ್ಲ ವಲಯ ಆಯುಕ್ತರು ನಿಮ್ಮ ಪ್ರದೇಶದಲ್ಲಿ ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ. ಎಷ್ಟು ಅನುದಾನದ ಅಗತ್ಯವಿದೆ ಎಂಬುದರ ಮಾಹಿಯನ್ನು ಕೊಡಿ, ಕೂಡಲೇ ಅಗತ್ಯ ಅನುದಾನ ಒದಗಿಸಲಾಗುವುದು. 110 ಹಳ್ಳಿಗಳಿಗೆ ನಿರಿನ ಸಮಸ್ಯೆ ಬಗೆಹರಿಸಲು ಜಲಮಂಡಳಿಯ ಅಧಿಕಾರಿ ಮತ್ತು ಸಿಬ್ಬಂದಿ ವಲಯ ಆಯುಕ್ತರ ಅಧೀನದಲ್ಲಿ ಕಾರ್ಯನಿರ್ವಹಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
“ನಗರದಲ್ಲಿ 58 ಕಡೆ ನೀರಿನ ಸಮಸ್ಯೆಯಿದ್ದು, ಮಹದೇವಪುರ 16, ಆರ್.ಆರ್ ನಗರ 25, ಬೊಮ್ಮನಹಲ್ಳಿ 5 ಕಡೆ, ಯಲಹಂಕ ಹಾಗೂ ದಾಸರಹಳ್ಳಿ ತಲಾ 3 ಕಡೆ ನೀರಿನ ಅಭಾವ ಹೆಚ್ಚಿದ್ದು, ಈ ಸಂಬಂಧ ಕೂಡಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಕಾರ್ಯಾದೇಶ ನೀಡಿ ಬೋರ್‌ವೆಲ್‌ಗಳನ್ನು ಕೊರೆದು ನೀರಿನ ಅಭಾವವನ್ನು ಕಡಿಮೆ ಮಾಡಿ” ಎಂದು ಹೇಳಿದರು.
“ನಗರದಲ್ಲಿ ಎಲ್ಲೆಲ್ಲಿ ಕುಡಿಯುವ ನೀರಿನ ಘಟಕಗಳು ನಿಂತಿವೆ. ಅಲ್ಲಿ ಕೂಡಲೇ ಬೋರ್‌ವೆಲ್‌ಗಳನ್ನು ಹಾಕಿ ಆರ್.ಒ ಫ್ಲಾಂಟ್ ಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು. ಆರ್.ಒ ಫ್ಲಾಂಟ್‌ಗಳಿಗೆ ನೀರಿನ ವ್ಯವಸ್ಥೆ ಮಾಡುವವರೆಗೆ ತಾತ್ಕಾಲಿಕವಾಗಿ ನೀರಿನ ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
“ನಗರದ ಸಿಎಂಸಿ, ಟಿಎಂಸಿ ಹಾಗೂ ಕೋರ್ ಏರಿಯಾಗಳಲ್ಲಿ ಈಗಾಗಲೇ ಪಾಲಿಕೆ ವತಿಯಿಂದ ಕೊರೆದಿರುವ ಕೊಳವೆ ಬಾವಿಗಳು ಪಾಲಿಕೆಯಿಂದ ಜಲಮಂಡಳಿಗೆ ಹಸ್ತಾಂತರಿಸಲಾಗಿದೆ. ಮುಂದೆ ಕೊಳವೆಬಾವಿಗಳ ಅವಶ್ಯಕತೆಯಿದ್ದಲ್ಲಿ ಜಲಮಂಡಳಿಯಿಂದಲೇ ಕೊಳವೆ ಬಾವಿ ಕೊರೆಯಲಿದ್ದು, ಪಾಲಿಕೆಯಿಂದ ಜಲಮಂಡಳಿಗೆ ಹಣ ನೀಡಲಾಗುತ್ತದೆ” ಎಂದು ಹೇಳಿದರು.
“ಬೆಂಗಳೂರಿನಲ್ಲಿ ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ ಪಟ್ಟಿ ಮಾಡಿಕೊಂಡು ಅಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ನೀರಿನ ಅಭಾವ ಹೆಚ್ಚಿರುವ ಕಡೆ ಜಲಮಂಡಳಿ ಅಧಿಕಾರಿಗಳ ಜತೆಗೆ ಸಮನ್ವಯ ಮಾಡಿಕೊಂಡು ನಾಗರಿಕರಿಗೆ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು” ಎಂದು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾದ ರಾಕೇಶ್ ಸಿಂಗ್ ತಿಳಿಸಿದರು.
ಜಲಮಂಡಳಿಯ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್ ರವರು ಮಾತನಾಡಿ, “ಬೆಂಗಳೂರು ವ್ಯಾಪ್ತಿಯಲ್ಲಿ ವಾರ್ಷಿಕವಾಗಿ 19 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗುತ್ತಿದ್ದು, ಪ್ರತಿನಿತ್ಯ ಸುಮಾರು 1472 ಎಂ.ಎಲ್.ಡಿ ನಿರನ್ನು ಸರಬರಾಜು ಮಾಡಲಾಗುತ್ತಿದೆ. ಫೆಬ್ರವರಿಯಿಂದ ಜುಲೈ 2024 ರವರೆಗೆ ಅಂದಾಜು 9.48 ಟಿಎಂಸಿ ನೀರು ಅವಶ್ಯಕತೆಯಿದೆ” ಎಂದು ಹೇಳಿದರು.
“ನಗರದಲ್ಲಿ ಜಳಮಂಡಳಿಯಿಂದ 10.84 ಲಕ್ಷ ನೀರಿನ ಸಂಪರ್ಕ ಹೊಂದಿವೆ. ನಗರದಲ್ಲಿ 10,955 ಕೊಳವೆ ಬಾವಿಗಳಲ್ಲಿ 1,214 ಕೊಳವೆ ಬಾವಿಗಳು ಬತ್ತಿದ್ದು, 3,700 ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಈ ಸಂಬಂಧ ಸರಿಪಡಿಸಬಹುದಾದ ಕೊಳವೆ ಬಾವಿಗಳನ್ನು ಗುರುತಿಸಿ ಅಂತಹವುಗಳನ್ನು ಫ್ಲಷಿಂಗ್ ಹಾಗೂ ರೀಡ್ರಿಲ್ ಮಾಡಲು ಕ್ರಮವಹಿಸಲಾಗುತ್ತಿದೆ” ಎಂದರು.
“ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಿರುವ 257 ಸ್ಥಳಗಳನ್ನು ಗುರುತಿಸಿದ್ದು, ಆ ಪ್ರದೇಶಗಳಿಗೆ ನೀರಿನ ಸರಬರಾಜು ಮಾಡಲು 68 ಟ್ಯಾಂಕರ್‌ಗಳ ಜತೆಗೆ 18 ಹೊಸ ಟ್ಯಾಂಕರ್‌ಗಳನ್ನು ಖರೀದಿಸಲು ಮತ್ತು 200 ಖಾಸಗಿ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯಲು ಕ್ರಮವಹಿಸಲಾಗಿದೆ. ಜತೆಗೆ ಕಾವೇರಿ 5ನೇ ಹಂತ ಏಪ್ರಿಲ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ‘ನೆಮ್ಮದಿಯಾಗಿ ಕರ್ತವ್ಯ ನಿರ್ವಹಣೆ ಸಾಧ್ಯವಾಗುತ್ತಿಲ್ಲ’; ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಪೊಲೀಸ್ ಸಿಬ್ಬಂದಿ
ಸಿಂಟೆಕ್ಸ್ ಟ್ಯಾಂಕ್‌ಗಳ ಮೂಲಕ ನೀರಿನ ವ್ಯವಸ್ಥೆ
“ನಗರದ ಆರ್.ಆರ್ ನಗರ ವಲಯದಲ್ಲಿ ಈಗಾಗಲೇ ಪ್ರಮುಖ ಸ್ಥಳದಲ್ಲಿ ಸಿಂಟೆಕ್ಸ್ ಟ್ಯಾಂಕ್‌ಗಳನ್ನು ಅಳವಡಿಸಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಎಲ್ಲ ವಲಯಗಳಲ್ಲಿಯೂ ಪ್ರಮುಖ ಸ್ಥಳ, ಕೊಳಗೇರಿ ಪ್ರದೇಶ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಸಿಂಟೆಕ್ಸ್ ಟ್ಯಾಂಕ್‌ಗಳನ್ನು ಅಳವಡಿಸಿ ಜಲಮಂಡಳಿಯಿಂದ ನೀರಿನ ವ್ಯವಸ್ಥೆ ಮಾಡಲಾಗುವುದು” ಎಂದರು.
110 ಹಳ್ಳಿಗಳಲ್ಲಿ ನೀರಿನ ಸಮಸ್ಯೆಗೆ ಸಮಗ್ರ ವ್ಯವಸ್ಥೆ
ಬಿಬಿಎಂಪಿ ವ್ಯಾಪ್ತಿಗೆ ಬರುವ 110 ಹಳ್ಳಿಗಳಲ್ಲಿ ಹೆಚ್ಚು ಸಮಸ್ಯೆ ಇದ್ದು, ಹಳ್ಳಿಗಳಿಗೆ ಹೆಚ್ಚು ಒತ್ತು ನೀಡಿ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಅಗತ್ಯವಿರುವ ಕಡೆ ಆದ್ಯತೆ ಮೇರೆಗೆ ಬೋರ್‌ವೆಲ್‌ಗಳನ್ನು ಕೊರೆಯಬೇಕು. ಜತೆಗೆ ನೀರಿನ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಿಕೊಂಡು ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು. 110 ಹಳ್ಳಿಗಳಿಗೆ ಜಲಮಂಡಳಿಯಿಂದ 40,000 ಸಂಪರ್ಕ ನೀಡಲಾಗಿದ್ದು, 110 ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುವ ಜಲಮಂಡಳಿಯ ಅಧಿಕಾರಿ, ಸಿಬ್ಬಂದಿ ಪಾಲಿಕೆ ವಲಯ ಆಯುಕ್ತರ ಅಧೀನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಸಭೆಯಲ್ಲಿ ಯೋಜನಾ ವಿಭಾಗದ ವಿಶೇಷ ಆಯುಕ್ತ ಡಾ. ಕೆ. ಹರೀಶ್ ಕುಮಾರ್, ಎಲ್ಲ ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು, ಪಾಲಿಕೆ/ಜಲಮಂಡಳಿ ಅಧಿಕಾರಿಗಳು ಹಾಜರಿದ್ದರು.