ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ತಿಂಗಳಿನಲ್ಲಿ ನಾಲ್ಕು ಕಡೆಗಳಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿ ಅವಘಡಗಳು ಪದೇಪದೆ ಸಂಭವಿಸುತ್ತಿರುವ ಹಿನ್ನೆಲೆ, ನಗರದಲ್ಲಿರುವ ಪಬ್, ಹೋಟೆಲ್, ರೆಸ್ಟೋರೆಂಟ್, ಬೃಹತ್ ಮಳಿಗೆಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಕಳೆದ ನಾಲ್ಕು ದಿನಗಳಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಅ.23ರಂದು 5 ರೆಸ್ಟೋರೆಂಟ್‌ಗಳನ್ನು ಮುಚ್ಚಿಸಿದ್ದು, ಇಲ್ಲಿಯವರೆಗೆ ಪರವಾನಗಿ ನಿಯಮಾವಳಿ ಪಾಲಿಸದ 48 ಉದ್ದಿಮೆಗಳನ್ನು ಬಂದ್ ಮಾಡಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿರುವ ವಲಯವಾರು ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಸಂಬಂಧಿಸಿದಂತೆ ಪಾಲಿಕೆಯ 8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಅ.23ರಂದು ತಪಾಸಣೆ ನಡೆಸಿದ್ದಾರೆ. ನ್ಯೂನತೆಗಳು ಕಂಡುಬಂದಿರುವಂತಹ ಉದ್ದಿಮೆಗಳಿಗೆ ನೋಟಿಸ್ ಜಾರಿಮಾಡಲಾಗಿದೆ. ಜತೆಗೆ ಪರವಾನಿಗೆ ನಿಯಮಾವಳಿ ಪಾಲಿಸದ ಉದ್ದಿಮೆಗಳನ್ನು ಸ್ಥಳದಲ್ಲೇ ಮುಚ್ಚಿಸಲಾಗಿದೆ ಎಂದು ಪಾಲಿಕೆ ಮಾಹಿತಿ ನೀಡಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಾಲು ಸಾಲು ಅಗ್ನಿ ದುರಂತ; ಪಬ್, ಹೋಟೆಲ್, ರೆಸ್ಟೋರೆಂಟ್ ಪರಿಶೀಲನೆಗೆ ಸೂಚನೆ
- ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,118 ಉದ್ದಿಮೆಗಳಿಗೆ ಪರವಾನಿಗೆ ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಅ.23 ರಂದು 79 ಉದ್ದಿಮೆಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ 26 ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಿ, 5 ಉದ್ದಿಮೆಗಳನ್ನು ಮುಚ್ಚಲಾಗಿದೆ ಎಂದು ತಿಳಿಸಿದೆ.
- ಅ.20ರಂದು 232 ಉದ್ದಿಮೆಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ 86 ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಿ, ಪರವಾನಗಿ ನಿಯಮಾವಳಿ ಪಾಲಿಸದ 12 ಉದ್ದಿಮೆಗಳನ್ನು ಮುಚ್ಚಲಾಗಿದೆ. ನ್ಯೂನತೆಗಳು ಕಂಡುಬಂದಿರುವಂತಹ ಉದ್ದಿಮೆಗಳಿಗೆ ನೋಟಿಸ್ ಜಾರಿಮಾಡಲಾಗಿದೆ.
- ಅ.21 ರಂದು 280 ಉದ್ದಿಮೆಗಳನ್ನು ಪರಿಶೀಲಿಸಲಾಗಿದ್ದು, ಅದರಲ್ಲಿ 167 ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಿ 21 ಉದ್ದಿಮೆಗಳನ್ನು ಮುಚ್ಚಲಾಗಿದೆ.
- ಅ.22 ರಂದು 157 ಉದ್ದಿಮೆಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ 74 ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಿ, 10 ಉದ್ದಿಮೆಗಳನ್ನು ಮುಚ್ಚಲಾಗಿದೆ.
- ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,118 ಉದ್ದಿಮೆಗಳಿಗೆ ಪರವಾನಿಗೆ ನೀಡಲಾಗಿದೆ. ಈ ಪೈಕಿ 748 ಉದ್ದಿಮೆಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ 353 ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಿ 48 ಉದ್ದಿಮೆಗಳನ್ನು ಮುಚ್ಚಲಾಗಿದೆ.
ಅಗ್ನಿ ಅವಘಡ
ನಗರದಲ್ಲಿ ನಡೆದ ಸಾಲು ಸಾಲು ಅಗ್ನಿ ದುರಂತಗಳಲ್ಲಿ ಅತ್ತಿಬೆಲೆ ಪಟಾಕಿ ಅಗ್ನಿ ಅವಘಡದಲ್ಲಿ 17 ಜನ ಸಾವನ್ನಪ್ಪಿದ್ದರೆ, ರಾಸಾಯನಿಕ ಸೋರಿಕೆಯಿಂದ ನಗರದ ಚೋಳರಪಾಳ್ಯದಲ್ಲಿರುವ ಅಗರಬತ್ತಿ ಗೋದಾಮಿಗೆ ಬೆಂಕಿ ಹೊತ್ತಿ, ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ. ಜತೆಗೆ 5ಕ್ಕೂ ಹೆಚ್ಚು ಬೈಕ್‌ಗಳು ಬೆಂಕಿಯ ಕೆನ್ನಾಲಿಗೆ ಸುಟ್ಟು ಕರಕಲಾಗಿವೆ. ಇನ್ನು ಲಗ್ಗೆರೆಯಲ್ಲಿ ಗುಜರಿ ಅಂಗಡಿಗೆ ಬೆಂಕಿ ಹೊತ್ತಿ ಅಪಾರ ಹಾನಿ ಉಂಟುಮಾಡಿದೆ. ಅ.18ರಂದು ಕೋರಮಂಗಲದಲ್ಲಿರುವ ಪಬ್‌ವೊಂದಕ್ಕೆ ಬೆಂಕಿ ಹೊತ್ತಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಈ ವೇಳೆ, ಪ್ರಾಣ ಉಳಿಸಿಕೊಳ್ಳಲು ಪ್ರೇಮ್ ಸಿಂಗ್ ಎಂಬುವರು ಆರನೇ ಮಹಡಿಯಿಂದ ಕೆಳಗೆ ಜಿಗಿದಿದ್ದು, ಬಲಗೈ ಮೂಳೆ ಮುರಿದಿತ್ತು.