ಕುಂದಾನಗರಿ ಬೆಳಗಾವಿಯಲ್ಲಿ ಟಿಪ್ಪರ್ ಮತ್ತು ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 12 ವರ್ಷದ ಬಾಲಕಿ ಸೇರಿ ಇಬ್ಬರು ಸಜೀವ ದಹನವಾಗಿರುವ ಘಟನೆ ನಡೆದಿದೆ.
ಬೆಳಗಾವಿ ತಾಲೂಕಿನ ದೇವಗಿರಿ ಬಂಬರಗಾ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಬಂಬರಗಾ ಗ್ರಾಮದ ಮೋಹನ್ ಮಾರುತಿ ಬೆಳಗಾಂವಕರ್ (24) ಹಾಗೂ ಮಚ್ಚೆ ಗ್ರಾಮದ ಬಾಲಕಿ ಸಮಿಕ್ಷಾ ಡಿಯೇಕರ್(12) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಒಂದೇ ಕುಟುಂಬದ ನಾಲ್ವರು ರಾತ್ರಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಬಂಬರಗಾ ಗ್ರಾಮಕ್ಕೆ ಕಾರಿನಲ್ಲಿ ವಾಪಸಾಗುತ್ತಿದ್ದರು. ರಾತ್ರಿ 10:30ಕ್ಕೆ ಬಂಬರಗಾ ಕ್ರಾಸ್ ಬಳಿ ಅಡ್ಡ ಬಂದ ಟಿಪ್ಪರ್‌ಗೆ ಕಾರು ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಟಿಪ್ಪರ್ನ ಡಿಸೇಲ್ ಟ್ಯಾಂಕ್ ಒಡೆದು ಬೆಂಕಿ ಹೊತ್ತಿದೆ. ಈ ವೇಳೆ ಕಾರಿನಲ್ಲಿದ್ದ ನಾಲ್ವರ ಪೈಕಿ ಇಬ್ಬರು ಸಜೀವ ದಹನವಾಗಿದ್ದಾರೆ.
ಕಾರಿನಲ್ಲಿದ್ದ ಇನ್ನಿಬ್ಬರು ಮಹೇಶ್ ಬೆಳಗಾಂವಕರ್ ಮತ್ತು ಸ್ನೇಹಾ ಬೆಳಗಾಂವಕರ್ ಎನ್ನುವರನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಪಘಾತಕ್ಕೆ ಎರಡೂ ವಾಹನಗಳು ಹೊತ್ತಿ ಉರಿದಿದ್ದು, ಸಂಪೂರ್ಣ ಸುಟ್ಟು ಕರಕಲಾಗಿವೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ದೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸೈಟ್ ಕೊಡಿಸುವುದಾಗಿ ಎನ್ಆರ್ಐಗೆ ₹30 ಲಕ್ಷ ವಂಚನೆ: ಟ್ವೀಟ್ ಮೂಲಕ ನಗರ ಪೊಲೀಸ್ ಕಮೀಷನರ್ಗೆ ದೂರು
ಸ್ಥಳಕ್ಕೆ ಡಿಸಿಪಿ ಸ್ನೇಹಾ, ಎಸಿಪಿ ಮತ್ತು ಕಾಕತಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಇಬ್ಬರ ಶವವನ್ನು ಮರಣೋತ್ತರ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ.
ಅಪಘಾತವಾಗುತ್ತಿದ್ದಂತೆಯೇ ಟಿಪ್ಪರ್ ಚಾಲಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.