ಬೆಂಗಳೂರಿನ ಸಾರಕ್ಕಿ ಪಾರ್ಕ್‌ನಲ್ಲಿ ನಡೆದಿದ್ದ ಜೋಡಿ ಕೊಲೆಗೆ ಸಂಬಂಧ ಕೆಲವು ಮಾಹಿತಿಗಳು ಹೊರಬಿದ್ದಿದ್ದು, ಮೃತ ಸುರೇಶ್ ಎಂಬಾತನೇ ಅನುಷಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಗುರುವಾರ ಸಾಯಂಕಾಲ 4:15ರ ಸುಮಾರಿಗೆ ಬೆಂಗಳೂರಿನ ಸಾರಕ್ಕಿ ಮಾರ್ಕೆಟ್ ಬಳಿಯ ಪಾರ್ಕ್‌ವೊಂದರಲ್ಲಿ ಈ ಘಟನೆ ನಡೆದಿದೆ. ಮೃತ ಅನುಷಾ (25) ಮತ್ತು ಸುರೇಶ್ (45) – ಇಬ್ಬರೂ ವಿವಾಹೇತರ ಸಂಬಂಧವಿತ್ತು. ಆದರೆ, ಅನುಷಾಗೆ ಸುರೇಶ್ ಜೊತೆ ಸಂಬಂಧ ಮುಂದುವರೆಸಲು ಇಷ್ಟವಿರಲಿಲ್ಲ. ಹೀಗಾಗಿ, ಸಂಬಂಧವನ್ನು ಕಡಿದುಕೊಳ್ಳಲು ಗುರುವಾರ ಭೇಟಿಯಾಗಿದ್ದರು. ಅನುಷಾ ನಿರ್ಧಾರದಿಂದ ಕೋಪಗೊಂಡ ಸುರೇಶ್ ಆಕೆಗೆ 5 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹಾಡಹಗಲೇ ಪಾರ್ಕ್‌ನಲ್ಲಿ ಕುಳಿತಿದ್ದ ಇಬ್ಬರ ಬರ್ಬರ ಹತ್ಯೆ
ಘಟನೆ ಸಮಯದಲ್ಲಿ ಅನುಷಾ ತಾಯಿ ಜೊತೆಯಲ್ಲಿಯೇ ಇದ್ದರು. ಮಗಳಿಗೆ ಚಾಕುವಿನಿಂದ ಇರಿಯುವುದನ್ನು ಕಣ್ಣಾರೆ ಕಂಡ ತಾಯಿ ಅಲ್ಲಿಯೇ ಇದ್ದ ಸಿಮೆಂಟ್ ಇಟ್ಟಿಗೆ ತೆಗೆದುಕೊಂಡು ಸುರೇಶ್ ತಲೆಗೆ ಜೋರಾಗಿ ಹೊಡೆದಿದ್ದಾರೆ. ಸುರೇಶ್ ತೀವ್ರ ರಕ್ತಸ್ರಾವದಿಂದ ಅಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಜೆ.ಪಿ.ನಗರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.