ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಪ್ರತಿ ಗಂಟೆಗೆ 80 ಕಿ.ಮೀಗಿಂತ ವೇಗವಾಗಿ ಚಲಿಸುವ ವಾಹನಗಳ ವಿರುದ್ಧ ಅತಿವೇಗದ ಚಾಲನೆಯ ಪ್ರಕರಣ ದಾಖಲಿಸಿ ದಂಡ ವಿಧಿಸಲು ಬೆಂಗಳೂರು ಸಂಚಾರ ಪೊಲೀಸ್ ಮುಂದಾಗಿದೆ.
ಹೌದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಅದರಲ್ಲೂ ಮುಖ್ಯವಾಗಿ ವಾಹನ ಸವಾರರ ಅತಿವೇಗದ ಚಾಲನೆ ಈ ಅಪಘಾತಗಳು ಉಂಟಾಗುವಲ್ಲಿ ಅತ್ಯಂತ ಪ್ರಮುಖವಾದ ಪಾತ್ರ ವಹಿಸಿದೆ.
ಪತ್ರಿಕಾ ಪ್ರಕಟಣೆ /PRESS NOTE pic.twitter.com/m9mfpGKK3L
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) May 14, 2024
ಈ ಹಿನ್ನೆಲೆ, ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಅತಿವೇಗದ ಚಾಲನೆಯನ್ನು ಪತ್ತೆ ಹಚ್ಚುವ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಸಂಚಾರ ಪೊಲೀಸ್ ಪ್ರಕಟಣೆ ಮೂಲಕ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೆಂಪಾಪುರದ ಜೈನ್ ಹೆರಿಟೇಜ್ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ
“ಈ ಕ್ಯಾಮೆರಾಗಳು ಸ್ವಯಂ ಚಾಲಿತವಾಗಿ ಅತಿವೇಗದ ಚಾಲನೆಯನ್ನು ಕಂಡು ಹಿಡಿಯುವ ಸಾಮರ್ಥ್ಯವನ್ನು ಹೊಂದಿವೆ. ಕಾನೂನಾತ್ಮಕವಾಗಿ ನಿಗದಿಪಡಿಸಲಾಗಿರುವ ಪ್ರತಿ ಗಂಟೆಗೆ 80 ಕಿ.ಮೀಗಿಂತ ವೇಗವಾಗಿ ಚಲಿಸುವ ವಾಹನಗಳ ವಿರುದ್ಧ ಅತಿವೇಗದ ಚಾಲನೆಯ ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಲಾಗುವುದು” ಎಂದು ಹೇಳಿದೆ.