ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ವಾಹನ ಸವಾರರಿಗೆ ಸಂಚಾರ ದಟ್ಟಣೆ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ, ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ ನಗರದ ಮೇಲ್ಸೇತುವೆಗಳು ಕಸ ಸುರಿಯುವ ಜಾಗಗಳಾಗಿ ಮಾರ್ಪಟ್ಟಿವೆ. ಇದು ಮೇಲ್ಸೇತುವೆ ಮೇಲೆ ಸಂಚಾರ ಮಾಡುವ ಪ್ರಯಾಣಿಕರಿಗೆ ಅಪಾಯ ತಂದೊಡ್ಡುತ್ತದೆ.
“ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ ಮೇಲ್ಸೇತುವೆಗಳು ಡಂಪಿಂಗ್ ಯಾರ್ಡ್‌ಗಳಾಗಿ ಮಾರ್ಪಟ್ಟಿವೆ. ನಗರದ ಮೇಲ್ಸೇತುವೆಗಳಲ್ಲಿ ತ್ಯಾಜ್ಯದ ಚೀಲಗಳನ್ನು ಎಸೆಯಲಾಗುತ್ತಿದ್ದು, ಇದು ವಾಹನ ಸವಾರರ ಸಂಕಷ್ಟಕ್ಕೆ ಕಾರಣವಾಗಿದೆ. ಹೀಗೆ, ತ್ಯಾಜ್ಯ ಎಸೆಯುವುದರಿಂದ ರಸ್ತೆಗಳು ಹಾಳಾಗುವುದರ ಜತೆಗೆ, ಕಸದ ಚೀಲಗಳು ದ್ವಿಚಕ್ರ ಸವಾರರ ಗಮನವನ್ನು ಬೇರೆಡೆಗೆ ಸೆಳೆಯುತ್ತವೆ. ಈ ಕಸವನ್ನು ತೆಗೆದು ಹಾಕದಿದ್ದರೆ, ಅಪಘಾತಗಳಿಗೆ ಕಾರಣವಾಗಬಹುದು” ಎಂದು ನಗರದ ನಾನಾ ಪ್ರದೇಶದ ವಾಹನ ಸವಾರರು ಹೇಳುತ್ತಾರೆ.
“ನಗರದ ದಾಲ್ಮಿಯಾ ಸರ್ಕಲ್ ಮೇಲ್ಸೇತುವೆ ಬಳಿ ಮರವೊಂದು ಬೆಳೆದು ನಿಂತಿದೆ. ಇದು ವಾಹನ ಸವಾರರಿಗೆ ಅಡ್ಡಿಯಾಗಿದೆ. ಮರ ಇಷ್ಟೊಂದು ಬೆಳೆದು ನಿಂತು ಒಂದು ತಿಂಗಳಾದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಬನಶಂಕರಿ ನಿವಾಸಿ ನಾಗರಾಜನ್ ಆರ್ ಹೇಳಿದರು.
“ಮರದ ಕೊಂಬೆ ಮೇಲ್ಸೇತುವೆ ಕಾರ್ನರ್ ಲೇನ್ ಅನ್ನು ಅತಿಕ್ರಮಣ ಮಾಡುವುದರಿಂದ ಅನಿವಾರ್ಯವಾಗಿ ದ್ವಿಚಕ್ರ ವಾಹನ ಸವಾರರು ಕಾರುಗಳು ಬಳಸುವ ಮಧ್ಯದ ಲೇನ್ ಅನ್ನು ಬಳಸಬೇಕಾಗುತ್ತದೆ. ಇದು ಅಪಘಾತಗಳಿಗೆ ಕಾರಣವಾಗಬಹುದು. ಇನ್ನು ಕೊಂಬೆಗಳು ವ್ಯಾಪಿಸಿರುವ ಪ್ರದೇಶವನ್ನು ತ್ಯಾಜ್ಯ ತುಂಬಿದ ಪ್ಲಾಸ್ಟಿಕ್ ಚೀಲವನ್ನು ಬಿಸಾಡುವ ತಾಣವಾಗಿ ಮಾಡಲಾಗಿದೆ” ಎಂದು ಅವರು ದೂರಿದರು.
“ಕೆಲ ದಿನಗಳಿಂದ ಹೆಣ್ಣೂರು ಮೇಲ್ಸೇತುವೆಯಿಂದಲೂ ಇದೇ ರೀತಿಯ ದೂರುಗಳು ಕೇಳಿ ಬರುತ್ತಿವೆ. ಕಳೆದ ಎರಡು ವರ್ಷಗಳಿಂದ ಕಸದ ಸ್ಥಳಗಳನ್ನು ಸಂಪೂರ್ಣ ತೆಗೆದು ಹಾಕಲು ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ. ಈ ಸಮಸ್ಯೆ ಇನ್ನು ಮುಂದುವರಿದಿದೆ. ಆದರೆ, ಈಗ ಅದರ ಪ್ರಮಾಣ ಕಡಿಮೆಯಾಗಿದೆ” ಎಂದು ಹೇಳಿದರು.
“ಎರಡು ವರ್ಷಗಳ ಹಿಂದೆ ಸಾಂಕ್ರಾಮಿಕ ಸಮಯದಲ್ಲಿ ಜನರು ಮೇಲ್ಸೇತುವೆ ಮೇಲೆ ಕಸದ ಚೀಲಗಳನ್ನು ಎಸೆಯಲು ಪ್ರಾರಂಭಿಸಿದ್ದರು. ಆಗ ಇದು ತೀವ್ರ ಸಮಸ್ಯೆಯಾಗಿ ಹೊರಹೊಮ್ಮಿತು. ಫ್ಲೈಓವರ್‌ನಲ್ಲಿ ರಾತ್ರಿ ಸಮಯದಲ್ಲಿ ಬಹುತೇಕ ಖಾಲಿ ಇರುವುದರಿಂದ ಕಸ ಎಸೆಯುವುದು ಸುಲಭವಾಗಿದೆ. ರಾತ್ರಿಯಲ್ಲಿ ಕಡಿಮೆ ಬೆಳಕು ಮತ್ತು ಕಡಿಮೆ ಸಂಚಾರ ಹೊಂದಿರುವುದರಿಂದ ಕಸ ಎಸೆಯುವವರಿಗೆ ಸುಲಭವಾಗುತ್ತಿದೆ” ಎಂದು ಸಿಟಿಜನ್ ಗ್ರೂಪ್ ಹೆಣ್ಣೂರು ಟಾಸ್ಕರ್ಸ್ ಸಂಸ್ಥಾಪಕ ಸುಬ್ರಮಣಿಯನ್ ಕೆ ಹೇಳಿದರು.
ಹೆಣ್ಣೂರು ಟಾಸ್ಕರ್ಸ್‌ನ ಮತ್ತೊಬ್ಬ ಸ್ವಯಂಸೇವಕ ರಾಕೇಶ್ ಮಲ್ಹೋತ್ರಾ ಮಾತನಾಡಿ, “ನಾಗರಿಕರ ನಿರ್ಲಕ್ಷ್ಯದಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಪೊಲೀಸ್ ಗಸ್ತು ತಿರುಗುವುದರಿಂದ ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಆ್ಯಂಬುಲೆನ್ಸ್ ಚಾಲಕನ ಅಚಾತುರ್ಯ: ಸರಣಿ ಅಪಘಾತ
“ಅಪೂರ್ಣಗೊಂಡಿರುವ ಈಜಿಪುರದ ಮೇಲ್ಸೇತುವೆಯೂ ಮತ್ತೊಂದು ಕಸದ ಡಂಪಿಂಗ್ ಯಾರ್ಡ್ ಆಗಿದ್ದು, ಅತೀ ಬೇಗನೆ ಕಸ ಎಸೆಯುವ ಸ್ಥಳವಾಗಿ ಮಾರ್ಪಟ್ಟಿದೆ. 2.5 ಕಿಲೋಮೀಟರ್ ಉದ್ದದ ಚತುಷ್ಪಥದ ಮೇಲ್ಸೇತುವೆಯು ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇದು ಕಸ ಎಸೆಯುವ ಸ್ಥಳವಾಗಿ ಹೊರಹೊಮ್ಮಿದೆ. ಇದು ನೇರವಾಗಿ ಸಂಚಾರಕ್ಕೆ ಅಡ್ಡಿಯಾಗದಿದ್ದರೂ, ವಿಪರೀತ ದುರ್ನಾತ ಬೀರುತ್ತದೆ. ನೋಡಲು ಕೂಡ ಸ್ಥಳಗಳು ಅಸಹ್ಯವಾಗಿದೆ” ಎಂದು ಮಲ್ಹೋತ್ರಾ ಹೇಳಿದರು.
ಬಿಬಿಎಂಪಿಯ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಮಾತನಾಡಿ, “ಬಹುತೇಕ ಫ್ಲೈಓವರ್‌ಗಳನ್ನು ಮೆಕ್ಯಾನಿಕಲ್ ಸ್ವೀಪರ್‌ಗಳನ್ನು ಬಳಸಿ ನಿರ್ವಹಣೆ ಮಾಡಲಾಗುತ್ತಿದೆ. ಪೌರಕಾರ್ಮಿಕರಿಗೆ ವಾಕಿಂಗ್ ಲೇನ್‌ಗಳಿಲ್ಲ. ಹಾಗಾಗಿ, ಮೇಲ್ಸೇತುವೆ ಸ್ವಚ್ಛಗೊಳಿಸಲು ಪೌರಕಾರ್ಮಿಕರನ್ನು ನಿಯೋಜಿಸಲು ಸಾಧ್ಯವಿಲ್ಲ. ಆದ್ದರಿಂದ ನಾವು ಮೆಕ್ಯಾನಿಕಲ್ ಸ್ವೀಪರ್‌ಗಳನ್ನು ಬಳಸುತ್ತೇವೆ. ನೂರು ಸ್ವೀಪಿಂಗ್ ಯಂತ್ರಗಳನ್ನು ನಿಯೋಜಿಸಲಾಗಿದೆ. ಆದರೆ, ಸದ್ಯಕ್ಕೆ 25 ಸ್ವೀಪಿಂಗ್ ಯಂತ್ರಗಳನ್ನು ಬಳಸುತ್ತಿದ್ದೇವೆ” ಎಂದು ಅವರು ತಿಳಿಸಿದರು.
“ಮೇಲ್ಸೇತುವೆಗಳ ಮೇಲೆ ಕಸ ಎಸೆಯುವುದನ್ನು ನಿಲ್ಲಿಸಬೇಕು. ಸಾಮಾನ್ಯವಾಗಿ ರಾತ್ರಿಯಲ್ಲಿ ಕಸ ಎಸೆಯುತ್ತಾರೆ. ಹೆಚ್ಚಿನ ಕಸ ಎಸೆಯುವವರು ಸುತ್ತಮುತ್ತಲಿನ ಅಂಗಡಿಗಳಿಂದ ಬಂದವರು” ಎಂದರು.
ಮೂಲ : ಡೆಕ್ಕನ್ ಹೆರಾಲ್ಡ್