2024ರ ನೂತನ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಎಲ್ಲೆಡೆ ಸಜ್ಜಾಗುತ್ತಿದ್ದು, ಸಂಭ್ರಮಾಚರಣೆಯಲ್ಲಿ ವಿದ್ಯುತ್ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ಬೆಸ್ಕಾಂ) ಸಾರ್ವಜನಿಕರಿಗೆ ಮನವಿ ಮಾಡಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಹೊಸವರ್ಷದ ಸಂಭ್ರಮಚಾರಣೆಯಲ್ಲಿ ಹೆಚ್ಚಾಗಿ ಜನ ಸೇರುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ವೈಟ್‌ಫಿಲ್ಡ್ ಸೇರಿದಂತೆ ನಗರದ ಹಲವೆಡೆ ಪಬ್, ಕ್ಲಬ್‌ಗಳು, ಹೋಟೆಲ್‌ಗಳು, ರೆಸ್ಟೊರೆಂಟ್‌ಗಳಲ್ಲಿ ಪಾರ್ಟಿಗಳಿಗೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ.
ಇದರ ಬೆನ್ನಲ್ಲೇ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬೆಸ್ಕಾಂ ಹಲವು ಮುಂಜಾಗ್ರತ ಕ್ರಮಗಳನ್ನು ವಹಿಸಿದ್ದು, ಸಾರ್ವಜನಿಕರಿಗೆ ವಿದ್ಯುತ್ ಸುರಕ್ಷತೆಯ ನಿಯಮಾವಳಿಗಳನ್ನು ಪಾಲಿಸಲು ವಿನಂತಿಸಿದೆ.
ವಿದ್ಯುತ್ ಕಂಬಗಳ ಮೇಲೆ ಬ್ಯಾನರ್ ಅಥವಾ ಬಂಟಿಂಗ್‌ಗಳನ್ನು ಕಟ್ಟಬಾರದು ಹಾಗೂ ಬೆಸ್ಕಾಂನ ಯಾವುದೇ ಮೂಲಸೌಕರ್ಯಗಳಿಗೆ ಹಾನಿ ಮಾಡಬಾರದು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯುತ್ ಕಂಬಗಳಿರುವ ಪಾದಾಚಾರಿ ಮಾರ್ಗಗಳಲ್ಲಿ ವಾಹನಗಳನ್ನು ಚಲಾಯಿಸಬಾರದು, ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ ಫಾರ್ಮರ್‌ಗಳಿರುವ ಸ್ಥಳಗಳಲ್ಲಿ ಕಸಕಡ್ಡಿಗಳನ್ನು ಎಸೆಯಬಾರದು, ವಿದ್ಯುತ್ ಮೂಲಸೌಕರ್ಯಗಳ ಬಳಿ ಸಿಡಿಮದ್ದುಗಳನ್ನು ಸುಡಬಾರದು ಎಂದು ಬೆಸ್ಕಾಂ ತಿಳಿಸಿದೆ.
ವಿದ್ಯುತ್ ಸ್ವಿಚ್‌ಗಳು ಮತ್ತು ಅಲಂಕಾರಿಕ ವಿದ್ಯುತ್ ಬಲ್ಬ್‌ಗಳು ಮತ್ತು ಲೈಟ್‌ಗಳು ದುರಸ್ತಿಯಾದ ಸಂದರ್ಭದಲ್ಲಿ ಸಾರ್ವಜನಿಕರೆ, ಖುದ್ದಾಗಿ ಅವುಗಳನ್ನು ದುರಸ್ತಿ ಮಾಡಲು ಪ್ರಯತ್ನಿಸದೇ, ಪರಿಣಿತ ಇಲೆಕ್ಟ್ರಿಷಿಯನ್‌ಗಳ ಸಹಾಯವನ್ನು ಪಡೆಯಬೇಕು.
ಯಾವುದೇ ಹೆಚ್.ಟಿ ಅಥವಾ ಎಲ್.ಟಿ ವಿದ್ಯುತ್ ಜಾಲಗಳ ಅಡಿಯಲ್ಲಿ ಹೊಸವರ್ಷದ ಪೆಂಡಲ್‌ಗಳನ್ನು ನಿರ್ಮಿಸಕೂಡದು ಎಂದು ತಿಳಿಸಿದೆ.
ಯಾವುದಾದರು ವಿದ್ಯುತ್ ಮಾರ್ಗವು ತುಂಡಾಗಿದ್ದರೆ ಅಥವಾ ಹಾನಿಗೀಡಾಗಿದ್ದರೆ ತಕ್ಷಣ ಬೆಸ್ಕಾಂ ಸಹಾಯವಾಣಿ 1912ಗೆ ಕರೆಮಾಡಿ ತಿಳಿಸಬೇಕು ಎಂದು ಬೆಸ್ಕಾಂ ಕೋರಿದೆ.
ಈ ಸುದ್ದಿ ಓದಿದ್ದೀರಾ? ಹೊಸ ವರ್ಷಾಚರಣೆ | ಮಧ್ಯರಾತ್ರಿ 2 ಗಂಟೆವರೆಗೂ ಬಿಎಂಟಿಸಿ, ಮೆಟ್ರೋ ಸಂಚಾರ
ಹೊಸ ವರ್ಷ ಆಚರಣೆಗೆ ಸಜ್ಜಾಗಿರುವ ನಗರದ ಮುಖ್ಯ ಪ್ರದೇಶಗಳಾದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಕೋರಮಂಗಲ 60 ಅಡಿ ರಸ್ತೆಯು ಎರಡೂ ಬದಿಗಳಲ್ಲಿರುವ ಬೆಸ್ಕಾಂ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ ಫಾರ್ಮರ್‌ಗಳ ಕಾರ್ಯದಕ್ಷತೆಯನ್ನು ಬೆಸ್ಕಾಂ ಹಿರಿಯ ಅಧಿಕಾರಿಗಳು ಶನಿವಾರ ಪರಿಶೀಲಿಶಿದರು. ಜೋತು ಬಿದ್ದಿರುವ ವಿದ್ಯುತ್ ತಂತಿಗಳನ್ನು ಸರಿ ಪಡಿಸಲಾಯಿತು. ಈ ಮೂರು ಸ್ಥಳಗಳಲ್ಲಿರುವ ಟ್ರಾನ್ಸ್ ಫಾರ್ಮರ್‌ಗಳ ನಿರ್ವಹಣೆಯನ್ನು ಇನ್ನೊಮ್ಮೆ ಮಾಡಲಾಯಿತು.
ಹಾಗೆಯೇ, ಹೊಸ ವರ್ಷ ಆಚರಣೆ ನಡೆಯುವ ಪ್ರದೇಶಗಳಲ್ಲಿ ಯಾವುದೇ ವಿದ್ಯುತ್ ಸಂಬಂದಿತ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಕಾವಲಿಗೆ ಬೆಸ್ಕಾಂ ಸಿಬ್ಬಂದಿಯನ್ನು ಭಾನುವಾರ ನಿಯೋಜಿಸಲಾಗುವುದು ಎಂದು ಹೇಳಿದೆ.
ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ರೆಸಿಡೆನ್ಸಿ ರಸ್ತೆಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ.