ಬೀದರ್ ಜಿಲ್ಲೆಯ ರಾಜಕೀಯ ಜಿದ್ದಾಜಿದ್ದಿಗೆ ಹೆಸರಾದ ಭಾಲ್ಕಿ ವಿಧಾನಸಭಾ ಕ್ಷೇತ್ರವೀಗ ಅಧಿಕಾರದ ಗದ್ದುಗೆಯಾಗಿ ಬದಲಾಗಿದೆ. ಈ ಬಾರಿಯ ಬೀದರ್ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಅವರ ಗೆಲುವಿನೊಂದಿಗೆ ಭಾಲ್ಕಿ ರಾಜಕೀಯ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ.
ಕಳೆದ 6 ದಶಕದಿಂದ ಭಾಲ್ಕಿ ಕ್ಷೇತ್ರದಲ್ಲಿ ಶತಾಯುಷಿ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ರಾಜಕೀಯ ಹಿಡಿತದಿಂದ ಪ್ರಾಬಲ್ಯ ಮೆರೆದ ಖಂಡ್ರೆ ಕುಟುಂಬ ಇದೀಗ ಜಿಲ್ಲೆ ಹಾಗೂ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ವರ್ಚಸ್ಸು ಹೆಚ್ಚಿಕೊಂಡಿದೆ.
ಭಾಲ್ಕಿ ಕ್ಷೇತ್ರದಲ್ಲಿ ಈಶ್ವರ ಖಂಡ್ರೆಯವರು ಅರಣ್ಯ ಪರಿಸರ ಮತ್ತು ಜೈವಿಕ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಅವರ ಪುತ್ರ ಸಾಗರ್ ಖಂಡ್ರೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇನ್ನು ಸಚಿವ ಈಶ್ವರ ಖಂಡ್ರೆ ಅವರ ಸಹೋದರ ಅಮರ ಖಂಡ್ರೆ ಅವರು ಮಹಾತ್ಮ ಗಾಂಧಿ ಸಕ್ಕರೆ ಕಾರ್ಖಾನೆ ಹಾಗೂ ಬೀದರ್ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಭಾಲ್ಕಿ ಕ್ಷೇತ್ರ ಅಧಿಕಾರದ ಕೇಂದ್ರವಾಗಿ ಬದಲಾಗಿದ್ದು, ಜಿಲ್ಲೆಯ ಜನತೆ ಕೆಲಸ ಕಾರ್ಯಗಳಿಗಾಗಿ ಭಾಲ್ಕಿಯತ್ತ ಮುಖ ಮಾಡಬೇಕಾಗಿದೆ. ರಾಜ್ಯ ಮತ್ತು ರಾಷ್ಟ್ರೀಯ ಅಧಿಕಾರ ಅಲ್ಲದೇ ಜಿಲ್ಲೆಯ ರಾಜಕೀಯ ಹಿಡಿತ ಸಾಧಿಸುವಲ್ಲಿ ಖಂಡ್ರೆ ಕುಟುಂಬ ಬಹುಶಃ ಯಶಸ್ಸು ಕಂಡಿದೆ ಎನ್ನಬಹುದು.
ಭೌಗೋಳಿಕ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದರೂ ಈ ಹಿಂದೆ ಔರಾದ ತಾಲೂಕು ರಾಜಕೀಯ ಶಕ್ತಿ ಕೇಂದ್ರವಾಗಿತ್ತು. ಔರಾದ ತಾಲೂಕಿನ ಹಾಲಿ ಶಾಸಕ ಪ್ರಭು ಚವ್ಹಾಣ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಪಶು ಸಂಗೋಪನಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಅದೇ ಅವಧಿಯಲ್ಲಿ ಔರಾದ ಮೂಲದವರಾದ ಭಗವಂತ ಖೂಬಾ ಅವರು ಸಂಸದರಾಗಿ, ಕೇಂದ್ರದಲ್ಲಿ ರಾಜ್ಯ ಖಾತೆ ಮಂತ್ರಿಯಾಗಿದ್ದರು. ಗಡಿ ತಾಲೂಕಿನ ಇಬ್ಬರು ನಾಯಕರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅವಧಿಯಲ್ಲಿ ಸಚಿವರಾಗಿ ಆಡಳಿತ ಯಂತ್ರ ಮುನ್ನಡೆಸಿದರು. ಅಲ್ಲದೇ ಆಗ ಔರಾದ ತಾಲೂಕಿನವರೇ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿದ್ದರು. ಹೀಗಾಗಿ ಎಲ್ಲದಕ್ಕೂ ಔರಾದ ಕ್ಷೇತ್ರ ಮುಂಚೂಣಿಯಲಿತ್ತು.
ಔರಾದ ಕ್ಷೇತ್ರದವರೇ ಆದ ದಿವಗಂತ ಗುರುಪಾದಪ್ಪಾ ನಾಗಮಾರಪಳ್ಳಿ ಅವರು ಶಾಸಕ, ಸಚಿವರಾಗಿ ಜಿಲ್ಲೆ ಹಾಗೂ ರಾಜ್ಯ ರಾಜಕೀಯ ಕ್ಷೇತ್ರದಲ್ಲಿ ಪಾರಮ್ಯ ಮೆರೆದಿದ್ದರು. ಅಲ್ಲದೆ ಡಿಸಿಸಿ ಬ್ಯಾಂಕ್ ಮೂಲಕ ಸಹಕಾರ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದು ನಾಗಮಾರಪಳ್ಳಿ ಪರಿವಾರ ಜಿಲ್ಲೆಯಲ್ಲಿ ವರ್ಚಸ್ಸು ಹೆಚ್ಚಿಸಿಕೊಂಡಿತ್ತು.
ಹೀಗೆ ಔರಾದ ತಾಲೂಕಿನಲ್ಲೇ ಸುತ್ತುತ್ತಿದ್ದ ಎಲ್ಲ ಅಧಿಕಾರ ಯಂತ್ರ ಇದೀಗ, ಭಾಲ್ಕಿಗೆ ಹಸ್ತಾಂತರಗೊಂಡಿದೆ. ಇಲ್ಲಿಯ ತನಕ ಭಾಲ್ಕಿ ಕ್ಷೇತ್ರದಲ್ಲಿ ಅಧಿಕಾರದ ಬುನಾದಿ ಭದ್ರಪಡಿಸಿಕೊಂಡು ರಾಜ್ಯ ರಾಜಕಾರಣದಲ್ಲಿ ಪಾರುಪತ್ಯ ಮೆರೆದ ಖಂಡ್ರೆ ಕುಟುಂಬ ಇದೀಗ ಕುಟುಂಬದ ಮೂರನೇ ತಲೆಮಾರು ಸಾಗರ್ ಖಂಡ್ರೆ ಲೋಕಸಭಾ ಚುನಾವಣೆಯ ಗೆಲುವಿನೊಂದಿಗೆ ರಾಷ್ಟ್ರ ರಾಜಕಾರಣಕ್ಕೂ ಕಾಲಿಡುವ ಮೂಲಕ ದೇಶದ ಗಮನ ಸೆಳೆದಿದೆ.
ಔರಾದ, ಹುಮನಾಬಾದ್ ಕ್ಷೇತ್ರಕ್ಕೆ ಸಿಂಹಪಾಲು :
ಬೀದರ್ ಲೋಕಸಭಾ ಕ್ಷೇತ್ರವನ್ನು ಈವರೆಗೆ ಪ್ರತಿನಿಧಿಸಿರುವವರಲ್ಲಿ ಹುಮನಾಬಾದ್ ಮತ್ತು ಔರಾದ ತಾಲೂಕಿನವರಿಗೆ ಸಿಂಹಪಾಲು ದೊರೆತಿದೆ.
ಹುಮನಾಬಾದ್ ತಾಲೂಕಿನ ರಾಮಚಂದ್ರ ವೀರಪ್ಪ (7 ಬಾರಿ), ಔರಾದ ತಾಲೂಕಿನ ನರಸಿಂಗ್ರಾವ್ ಸೂರ್ಯವಂಶಿ (4 ಬಾರಿ), ಭಗವಂತ ಖೂಬಾ (2 ಬಾರಿ) ಸಂಸದರಾಗಿದ್ದರು. ಇವರಲ್ಲಿ ರಾಮಚಂದ್ರ ವೀರಪ್ಪ ಹಾಗೂ ನರಸಿಂಗ್ರಾವ್ ಸೂರ್ಯವಂಶಿ ಇಬ್ಬರೂ ಹ್ಯಾಟ್ರಿಕ್ ಗೆಲುವು ಕಂಡಿದ್ದು ವಿಶೇಷ. ರಾಷ್ಟ್ರ ರಾಜಕಾರಣದ ಮುಖ ಮಾಡದ ಭಾಲ್ಕಿ ತಾಲೂಕಿನವವರಿಗೆ ಈ ಬಾರಿಗೆ ಮೊದಲ ಸಲ ಎಂಪಿ ಸ್ಥಾನ ಸಿಕ್ಕಿದೆ.
ಎರಡನೇ ಲಿಂಗಾಯತ ಸಂಸದ ಸಾಗರ್ ಖಂಡ್ರೆ :
ಬೀದರ್ ಲೋಕಸಭಾ ರಚನೆಯಾದ ಒಂದು ದಶಕದ ಬಳಿಕ ಕ್ಷೇತ್ರ 1962ರಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿತ್ತು. ಮೀಸಲು ಕ್ಷೇತ್ರವಾದ ಬಳಿಕ 1962 ರಿಂದ 2004ರವರೆಗೆ ಒಂದು ಉಪ ಚುನಾವಣೆ ಸೇರಿ ಒಟ್ಟು 13 ಚುನಾವಣೆ ನಡೆದಿವೆ. ಆದರೆ ಬರೋಬ್ಬರಿ ನಾಲ್ಕು ದಶಕಗಳ ಕಾಲ ಕ್ಷೇತ್ರ ಪ್ರತಿನಿಧಿಸಿದವರು ಮಾತ್ರ ಕೇವಲ 3 ಅಭ್ಯರ್ಥಿಗಳು ಎಂಬುದು ಗಮನಾರ್ಹ ಸಂಗತಿ.
2009ರಲ್ಲಿ ಬೀದರ್ ಲೋಕಸಭಾ ಸಾಮಾನ್ಯ ಕ್ಷೇತ್ರವಾಗಿ ಮಾರ್ಪಟ್ಟ ಬಳಿಕ ನಡೆದ ಚುನಾವಣೆ 2014 ಹಾಗೂ 2019ರಲ್ಲಿ ಎರಡು ಬಾರಿ ಜಯಶಾಲಿಯಾಗಿದ್ದ ಭಗವಂತ ಖೂಬಾ ಕ್ಷೇತ್ರದ ಮೊದಲ ಲಿಂಗಾಯತ ಸಂಸದ ಹಾಗೂ ಮಂತ್ರಿಯಾದರೆ, 2024ರಲ್ಲಿ ಲೋಕಸಭೆಗೆ ಆಯ್ಕೆಯಾದ ಸಾಗರ್ ಖಂಡ್ರೆ ಎರಡನೇ ಲಿಂಗಾಯತ ಸಂಸದರಾಗಿದ್ದಾರೆ.
ನನಸಾಗದ ಹ್ಯಾಟ್ರಿಕ್ ಜಯದ ಕನಸು :
ಕ್ಷೇತ್ರದಲ್ಲಿ 1980-89 ತನಕ ನಡೆದ ಮೂರು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ ನರಸಿಂಗರಾವ್ ಹುಲ್ಲಾ ಸೂರ್ಯವಂಶಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿ ದಾಖಲೆ ಬರೆದಿದ್ದರು. ಬಳಿಕ ನಡೆದ 1991ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಸ್ಪರ್ಧಿಸಿದ ರಾಮಚಂದ್ರ ವೀರಪ್ಪ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ ಕೀರ್ತಿಗೆ ಪಾತ್ರರಾದರು. ತರುವಾಯ 1996, 1998, 1999 ಹಾಗೂ 2004ರ ಲೋಕಸಭಾ ಚುನಾವಣೆಗಳಲ್ಲಿ ಸತತವಾಗಿ ಗೆದ್ದು ದಿಗ್ವಿಜಯ ಸಾಧಿಸಿದರು.
ಈ ಸುದ್ದಿ ಓದಿದ್ದೀರಾ? ಭೋವಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ, ಕೋಟ ಶ್ರೀನಿವಾಸ ಪೂಜಾರಿಗೆ ಕೋಟಿ ಕೋಟಿ ಲಂಚ: ಗೂಳಿಹಟ್ಟಿ ಶೇಖರ್ ಗಂಭೀರ ಆರೋಪ
2014 ಹಾಗೂ 2019ರಲ್ಲಿ ಎರಡು ಬಾರಿ ಗೆದ್ದು, ಕೇಂದ್ರದಲ್ಲಿ ರಾಜ್ಯ ಖಾತೆ ಸಚಿವರೂ ಆಗಿದ್ದ ಭಗವಂತ ಖೂಬಾ ಅವರು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ ಪ್ರತಿಸ್ಪರ್ಧಿ ಸಾಗರ್ ಖಂಡ್ರೆ ಖೂಬಾ ಅವರ ಹ್ಯಾಟ್ರಿಕ್ ಗೆಲುವಿನ ಓಟಕ್ಕೆ ಲಗಾಮು ಹಾಕುವ ಮೂಲಕ ಖೂಬಾರವರ ಕನಸು ನುಚ್ಚು ನೂರು ಮಾಡಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.