ಬೀದರ್ ಜಿಲ್ಲೆಯ ವಿವಿಧ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 444 ಪದವೀಧರ ಶಿಕ್ಷಕರಿಗೆ ನಾಲ್ಕು ತಿಂಗಳ ಹಿಂಬಾಕಿ ವೇತನ ಪಾವತಿಯಾಗಿಲ್ಲ. ಇದರಿಂದಾಗಿ ಶಿಕ್ಷಕರು ತೊಂದರೆ ಅನುಭವಿಸುವಂತಾಗಿದ್ದು, ನಿತ್ಯ ಶಿಕ್ಷಣ ಇಲಾಖೆ ಕಚೇರಿಗೆ ಎಡತಾಕುವಂತಾಗಿದೆ.
ಜಿಲ್ಲೆಯಲ್ಲಿ 2023ರ ನವೆಂಬರ್ 5 ರಂದು ಕೌನ್ಸೆಲಿಂಗ್ ನಡೆಸಿ, ನವೆಂಬರ್ 6ರಂದು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಸರ್ಕಾರ ಪದವೀಧರ ಶಿಕ್ಷಕರನ್ನು ನೇಮಕ ಮಾಡಿದೆ. ಆದರೆ, ನೇಮಕವಾದ ಶಿಕ್ಷಕರಿಗೆ ಮೊದಲ ನಾಲ್ಕು ತಿಂಗಳ ವೇತನ ಈವರೆಗೆ ಶಿಕ್ಷಕರ ಕೈಸೇರಿಲ್ಲ. ಇದು ಬೀದರ್ ಅಷ್ಟೇ ಅಲ್ಲದೆ, ಕಲ್ಯಾಣ ಕರ್ನಾಟಕ ಭಾಗದ ಇತರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರಿಗೂ ಇದೇ ರೀತಿ ಮೊದಲ ನಾಲ್ಕೈದು ತಿಂಗಳ ಸಂಬಳ ಜಮೆಯಾಗಿಲ್ಲ ಎಂದು ಶಿಕ್ಷಕರು ಹೇಳುತ್ತಾರೆ.
2023ರ ಮಾರ್ಚ್‌ನಿಂದ ನಿರಂತರವಾಗಿ ವೇತನ ಪಾವತಿಯಾಗಿದೆ. ಆದರೆ ಅವರು ನೇಮಕವಾಗಿದ್ದು, 2023ರ ನವೆಂಬರ್‌ನಲ್ಲಿ. ಹೀಗಾಗಿ ಜಿಲ್ಲೆಯಲ್ಲಿ ನವೆಂಬರ್‌ನಲ್ಲಿ ನೇಮಕವಾದ 430 ನೂತನ ಪದವಿ ಶಿಕ್ಷಕರಿಗೆ 2023ರ ನವೆಂಬರ್, ಡಿಸೆಂಬರ್ ಹಾಗೂ 2024ರ ಜನವರಿ, ಫೆಬ್ರವರಿಯ ನಾಲ್ಕು ತಿಂಗಳ ವೇತನ ಬಾಕಿಯಿದೆ. ನಂತರ ನೇಮಕವಾದ ಉಳಿದ ಕೆಲ ಶಿಕ್ಷಕರದ್ದು ಮೂರು ತಿಂಗಳ ವೇತನ ಬಾಕಿ ಇದೆ. ಹೀಗೆ ನಾಲ್ಕು ತಿಂಗಳ ವೇತನ 15 ತಿಂಗಳಾದರೂ ಬಂದಿಲ್ಲ. ಇದು ಬಾಕಿ ಇರಿಸಿಕೊಳ್ಳಲಾಗಿದೆ ಎಂಬುದು ಶಿಕ್ಷಕರ ಆರೋಪ.
ಯಾವ ತಾಲ್ಲೂಕಿನಲ್ಲಿ ಎಷ್ಟು ಜನ ಪದವೀಧರ ಶಿಕ್ಷಕರು?
ಬೀದರ್ ಜಿಲ್ಲೆಯಲ್ಲಿ ವಿವಿಧ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ (6 ರಿಂದ 8ನೇ ತರಗತಿ) ಖಾಲಿ ಇರುವ ಹುದ್ದೆ ಭರ್ತಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮೊದಲ ಆದ್ಯತೆ ನೀಡಿ, ಅದರಂತೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಆಂಗ್ಲ ಭಾಷಾ ಹುದ್ದೆಗಳ ಭರ್ತಿ ಮಾಡಲಾಯಿತು. ಜಿಲ್ಲೆಯಲ್ಲಿ ಔರಾದ್ 89, ಬಸವಕಲ್ಯಾಣ 128, ಭಾಲ್ಕಿ 72, ಬೀದರ್ 39, ಹುಮನಾಬಾದ್ 116 ಸೇರಿ ಒಟ್ಟು 444 ಶಿಕ್ಷಕರನ್ನು ನೇಮಕ ಮಾಡಲಾಗಿದೆ.
ಕಲ್ಯಾಣ ಕರ್ನಾಟಕ, ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲೆಗಳ 371(ಜೆ) ಹುದ್ದೆಗಳ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಇದ್ದುದರಿಂದ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲು ಕಾನೂನಾತ್ಮಕ ತೊಡಕು ಎದುರಾಗಿತ್ತು. ನ್ಯಾಯಾಲಯದಲ್ಲಿನ ಕೆಲ ಪ್ರಕರಣಗಳನ್ನು ಇತ್ಯರ್ಥಗೊಳಿಸಿದ ನಂತರ ಜಿಲ್ಲೆಯಲ್ಲಿ 444 ಪ್ರಾಥಮಿಕ ಶಾಲೆಗಳಿಗೆ ಪದವೀಧರ ಶಿಕ್ಷಕರನ್ನು 2023ರ ನವೆಂಬರ್‌ನಲ್ಲಿ ನೇಮಕ ಮಾಡಲಾಯಿತು.
ಒಂದು ವರ್ಷಕ್ಕೂ ಅಧಿಕ ದಿನ ಕಳೆದರೂ ಕಳೆದ ವರ್ಷದಲ್ಲಿನ 4 ತಿಂಗಳ ಸಂಬಳ ದೊರೆಯದಂತಾಗಿದೆ. ಆರ್ಥಿಕ ಇಲಾಖೆ ಅನುಮೋದನೆ ನೀಡದೇ ಇರುವುದರಿಂದ ಈ ಸಮಸ್ಯೆ ಉಂಟಾಗಿದ್ದು, ವೇತನಕ್ಕಾಗಿ ನೂತನ ಶಿಕ್ಷಕರು ಅಲೆದಾಡುವಂತಾಗಿದೆ. ಎಲ್ಲ 444 ಶಿಕ್ಷಕರಿಗೆ ನಾಲ್ಕು ತಿಂಗಳ ವೇತನ ಅಂದಾಜು ₹8 ಕೋಟಿಗೂ ಅಧಿಕ ಬಿಡುಗಡೆಯಾಗಬೇಕಿದೆ.
ʼಜಿಲ್ಲೆಯಲ್ಲಿ ಪದವೀಧರ ಶಿಕ್ಷಕರ ವೇತನ ಬಾಕಿ ಉಳಿದಿರುವ ಬಗ್ಗೆ ಗಮನಕ್ಕಿದೆ. ಆರ್ಥಿಕ ಇಲಾಖೆ ಆದೇಶದ ಬಳಿಕ ಬಾಕಿ ವೇತನ ಪಾವತಿ ಮಾಡಲಾಗುವುದುʼ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಲೀಂ ಪಾಷ ʼಈದಿನ.ಕಾಮ್ʼ ಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | 12ನೇ ಶತಮಾನದಲ್ಲೇ ಸರ್ವೋದಯ ಪರಿಕಲ್ಪನೆ ನೀಡಿದ ಬಸವಣ್ಣ : ಸಚಿವ ಎಚ್.ಸಿ.ಮಹಾದೇವಪ್ಪ
ʼ2022-23ನೇ ಸಾಲಿನಲ್ಲಿ ನೇಮಕವಾದ ಪದವೀಧರ ಶಿಕ್ಷಕರ (ಜಿಪಿಟಿ) ಹಿಂಬಾಕಿ ವೇತನ ಬಿಡುಗಡೆ ಮಾಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಗಿದ್ದು, ಕೂಡಲೇ ಕ್ರಮವಹಿಸುವುದಾಗಿ ಅವರು ಭರವಸೆ ನೀಡಿದ್ದಾರೆʼ ಎಂದು ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘದ ಸಂಸ್ಥಾಪಕ ಅಧ್ಯಕ್ಷ ರವಿ ಡೋಳೆ ಹೇಳಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.