ಬಿಟ್ ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಇದೀಗ, ಎಸ್‌ಐಟಿ ಮೊದಲನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
ಕೆಜಿ ನಗರ ಡ್ರಗ್ಸ್ ಕೇಸ್ನಲ್ಲಿ ಶ್ರೀಕಿ, ರಾಬಿನ್ ಖಂಡೇವಾಲ ಹಾಗೂ ಸುನೀಶ್ ಹೆಗ್ಡೆ ಸೇರಿ ಒಟ್ಟು 6 ಜನರ ವಿರುದ್ಧ ಜೂ.6ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಎಸ್‌ಐಟಿ ಮೂರು ಎಫ್‌ಐಆರ್‌ಗಳನ್ನು ತನಿಖೆ ನಡೆಸುತ್ತಿತ್ತು. ಮೊದಲಿಗೆ ಡ್ರಗ್ಸ್ ಪ್ರಕರಣ ಬಂದಿತ್ತು. ಆ ಕುರಿತು ತನಿಖೆ ನಡೆಸಿದಾಗ ಬಿಟ್ ಕಾಯಿನ್ ಹಗರಣ ಬೆಳಕಿಗೆ ಬಂದಿತ್ತು.
2015ರಲ್ಲಿ ಬೆಂಗಳೂರಿನ ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ಡ್ರಗ್ಸ್ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಿಯನ್ನು ಪೊಲೀಸರು ಬಂಧನ ಮಾಡಿದ್ದರು. ಅದರಂತೆ 2020ರಲ್ಲಿ ಸುಮಾರು ಸಾವಿರ ಕೋಟಿ ಹಗರಣದ ಬಿಟ್ಕಾಯಿನ್ ಪ್ರಕರಣದಲ್ಲಿ ಶ್ರೀಕಿ ಬಂಧನವಾಗಿತ್ತು.
ಈ ಸುದ್ದಿ ಓದಿದ್ದೀರಾ? ಬಿಜೆಪಿಯಿಂದ ಮಾನನಷ್ಟ ಪ್ರಕರಣ: ನಾಳೆ ಬೆಂಗಳೂರಿನ ಸಿವಿಲ್ ಕೋರ್ಟ್‌ಗೆ ರಾಹುಲ್ ಗಾಂಧಿ ಹಾಜರು
ಕಳೆದ ಐದಾರು ವರ್ಷಗಳಿಂದ ನಾನಾ ಕ್ರಿಪ್ಟೋ ಕರೆನ್ಸಿ ಮಾರಾಟ ಪ್ಲಾಟ್‌ಫಾರ್ಮ್‌ಗಳನ್ನು ಆರೋಪಿ ಶ್ರೀಕಿ ಹ್ಯಾಕ್ ಮಾಡಿ ಅವುಗಳಿಂದ ಸಾವಿರಾರು ಬಿಟ್ ಕಾಯಿನ್‌ಗಳನ್ನು ಎಗರಿಸಿದ್ದನು. ರಾಜ್ಯ ಸರ್ಕಾರದ ಇ–ಸಂಗ್ರಹಣಾ ಪೋರ್ಟಲ್ ಜಾಲತಾಣವನ್ನು ಹ್ಯಾಕ್ ಮಾಡಿದ್ದನು. ಸಿಸಿಬಿ ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದರು.