“ಬಿಜೆಪಿಗರ ಪೂರ್ವಜರು ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್‌ನವರಾಗಿದ್ದಾರೆ. ಅವರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರಲ್ಲ. ಮನುವಾದಿ, ಸರ್ವಾಧಿಕಾರಿ ಧೋರಣೆಯಲ್ಲಿ ನಂಬಿಕೆ ಇಟ್ಟವರಾಗಿದ್ದಾರೆ. ಸಂವಿಧಾನ ವಿರೋಧಿಗಳಾಗಿದ್ದಾರೆ. ಭಾರತದಲ್ಲಿ ಈಗ ಸರ್ವಾಧಿಕಾರ ಚಾಲ್ತಿಯಲ್ಲಿದೆ. ಸಂವಿಧಾನ ಬದಲಾದರೆ, ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶ ಹೇಗಿತ್ತೋ ಆ ಪರಿಸ್ಥಿತಿಗೆ ಕೊಂಡೊಯ್ಯುತ್ತಾರೆ” ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಕಳವಳ ವ್ಯಕ್ತಪಡಿಸಿದರು.
‘ಇಂಡಿಯಾ’ ಒಕ್ಕೂಟದ ಭಾಗವಾಗಿ ಕಾಂಗ್ರೆಸ್ ಪ್ರತಿನಿಧಿಯಾಗಿ ಎಎಪಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರಾಮಲಿಂಗಾರೆಡ್ಡಿ ಅವರು ಮಾತನಾಡಿ ಬಿಜೆಪಿ ವಿರುದ್ಧ ಹರಿಹಾಯ್ದರು. ಈ ವೇಳೆ ಮಾತನಾಡಿದ ಅವರು, “2ಜಿ ಹಗರಣದಲ್ಲಿ, ಕಲ್ಲಿದ್ದಲು ಹಗರಣದಲ್ಲಿ ಅಕ್ರಮ ನಡೆದಿರುವುದನ್ನು ಸಾಬೀತು ಪಡಿಸಲಾಗಲಿಲ್ಲ. ಆದರೂ ಅವುಗಳು ಭಾರತದ ಅತಿದೊಡ್ಡ ಹಗರಣಗಳೆಂದು ಸುಳ್ಳು ಬಿತ್ತಿದರು. ಅಬಕಾರಿ ನೀತಿ ಹಗರಣದಲ್ಲಿಯೂ ಎಎಪಿ ಪಾತ್ರದ ಬಗ್ಗೆ ನಿರಂತರವಾಗಿ ಸುಳ್ಳು ಹಬ್ಬಿಸಲಾಗುತ್ತಿದೆ” ಎಂದರು.
“ಆದರೆ, ಎರಡು ವರ್ಷಗಳೇ ಕಳೆದರೂ ಒಂದು ರೂಪಾಯಿ ಅಕ್ರಮ ಹಣವನ್ನು ವಶಪಡಿಸಿಕೊಳ್ಳಲಾಗಿಲ್ಲ. ಚುನಾವಣೆ ಬಾಂಡ್ ಮೂಲಕ ಸಾವಿರಾರು ಕೋಟಿ ಅಕ್ರಮ ಎಸಗಿರುವುದು ಕಣ್ಮುಂದೆ ಇದ್ದರೂ ಬಿಜೆಪಿ ವಿರುದ್ಧ ತನಿಖಾ ಸಂಸ್ಥೆಗಳು ಕ್ರಮ ಕೈಗೊಳ್ಳುತ್ತಿಲ್ಲ. ಮುಂದೆ ಒಳ್ಳೆಯ ದಿನಗಳು ಬರಲಿವೆ. ಕೇಜ್ರಿವಾಲ್ ಆರೋಪ ಮುಕ್ತರಾಗಲಿದ್ದಾರೆ. ಬಿಜೆಪಿಯ ಎಲ್ಲ ಭ್ರಷ್ಟರು ಜೈಲು ಸೇರಲಿದ್ದಾರೆ” ಎಂದು ಆಶಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಒಂದೇ ವಾರದಲ್ಲಿ ಸರ್ಕಾರದ ಹೆಸರಿನಲ್ಲಿ ಎರಡು ನಕಲಿ ಆದೇಶ; ₹4 ಕೋಟಿ ಗುತ್ತಿಗೆ ವಂಚನೆ
“ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಅವರು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿರುವುದನ್ನು ನೋಡಿ ಸ್ಫೂರ್ತಿಗೊಂಡು ನಮ್ಮ ಕ್ಷೇತ್ರದ 22 ಶಾಲೆಗಳನ್ನು ಅಭಿವೃದ್ಧಿಪಡಿಸಿದೆವು. ಮೊದಲು 4,000 ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳು ಇದ್ದವರು 5,500 ಮಕ್ಕಳಾಗಿದ್ದಾರೆ” ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಸಂತಸ ವ್ಯಕ್ತಪಡಿಸಿದರು.