2024ರ ಲೋಕಸಭಾ ಚುನಾವಣೆಯ ಫಲಿತಾಂಶ ಈ ಬಾರಿ ನಿರ್ಣಾಯಕವಾಗಲಿದೆ. ಮತಎಣಿಕೆ ಆರಂಭವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಕಳೆದ 32 ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಜನತೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಒಲವು ತೋರುತ್ತಾರಾ ಕಾದು ನೋಡಬೇಕಿದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು ಗೋವಿಂದರಾಜನಗರ, ವಿಜಯನಗರ, ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. 1977ರಿಂದ ಕ್ಷೇತ್ರ ವಿಂಗಡಣೆಯಾದಾಗ ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ. ಇಲ್ಲಿಯವರೆಗೂ 12 ಚುನಾವಣೆಗಳಲ್ಲಿ 3 ಬಾರಿ ಜನತಾ ಪಕ್ಷ, ಒಂದು ಬಾರಿ ಕಾಂಗ್ರೆಸ್ ಪಕ್ಷ ಮತ್ತು 8 ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. 1991ರಿಂದ ಕ್ಷೇತ್ರವನ್ನು ಬಿಜೆಪಿ ತನ್ನ ಭದ್ರಕೋಟೆ ಮಾಡಿಕೊಂಡಿದೆ.
2019ರಲ್ಲಿ ತೇಜಸ್ವಿ ಸೂರ್ಯ ಅವರು ಈ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದರು. ಇದೀಗ 2024ರ ಲೋಕಸಭಾ ಚುನಾವಣೆಯಲ್ಲಿಯೂ ಅವರೇ ಕಣದಲ್ಲಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಈ ಬಾರಿ ಬಿಜೆಪಿ ಹಾಲಿ ಸಂಸದ ತೇಜಸ್ವಿ ಸೂರ್ಯ ಮತ್ತೊಮ್ಮೆ ಜಯ ಸಾಧಿಸುತ್ತಾರಾ ಅಥವಾ ಮೊದಲ ಮಹಿಳಾ ಸಂಸದರಾಗಿ ಸೌಮ್ಯ ರೆಡ್ಡಿ ಅವರು ಗೆದ್ದು ದಾಖಲೆ ಮಾಡುತ್ತಾರಾ ಎಂಬುದು ಕುತೂಹಲ ಕೆರಳಿಸಿದೆ.
‘ಗೋ ಬ್ಯಾಕ್ ಶೋಭಕ್ಕ’ ಗೆಲುವು-ಸೋಲು ಪ್ರಶ್ನೆ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಉಡುಪಿ-ಚಿಕ್ಕಮಗಳೂರು ಹಾಲಿ ಸಂಸದೆ ಆಗಿರುವ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಿದೆ. ಇತ್ತ ಕಾಂಗ್ರೆಸ್ ಹೊಸ ಅಭ್ಯರ್ಥಿಗೆ ಮಣೆ ಹಾಕಿದ್ದು, ಎಂ ವಿ ರಾಜೀವ್ ಗೌಡ ಅವರು ಸ್ಪರ್ಧೆ ಮಾಡಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ 1951ರಿಂದ ಲೋಕಸಭಾ ಚುನಾವಣೆ ಆರಂಭವಾಗಿ 2004ರವರೆಗೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಕಳೆದ ಬಾರಿ ಒಲ್ಲದ ಮನಸ್ಸಿನಲ್ಲಿ ಕೃಷ್ಣಬೈರೇಗೌಡರು ನಿಂತು, ಸದಾನಂದಗೌಡರ ವಿರುದ್ದ ಸೋಲುಂಡಿದ್ದರು. ಈ ಕ್ಷೇತ್ರದಲ್ಲಿ 2004ರಿಂದ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದ ಎಚ್ಟಿ ಸಾಂಗ್ಲಿಯಾನ ಅವರು ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಗೆದ್ದರು. ಇದಾದ ಬಳಿಕ ಹಾಲಿ ಸಂಸದ ಸದಾನಂದ ಗೌಡರು ಎರಡು ಬಾರಿ ಗೆದ್ದಿದ್ದರು.
ಉಡುಪಿ-ಚಿಕ್ಕಮಗಳೂರು ಹಾಲಿ ಸಂಸದೆ ಆಗಿರುವ ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿ ಕಾರ್ಯಕರ್ತರೇ ಗೋ ಬ್ಯಾಕ್ ಘೋಷಣೆ ಕೂಗಿದ್ದರು. ಬಳಿಕ, ಅವರನ್ನು ಬೆಂಗಳೂರಿನ ಉತ್ತರ ವರ್ಗಾಯಿಸಲಾಗಿದೆ. ಇಲ್ಲಿಯೂ ಕೂಡ ಗೋ ಬ್ಯಾಕ್ ಶೋಭಕ್ಕ ಅಭಿಯಾನ ನಡೆದಿದ್ದು, ವಿರೋಧದ ನಡುವೆಯೂ ಶೋಭ ಸ್ಪರ್ಧೆಯಲ್ಲಿದ್ದಾರೆ. ಉಡುಪಿ-ಚಿಕ್ಕಮಗಳೂರಿನಲ್ಲಿ ಸಲ್ಲದವರು, ಬೆಂಗಳೂರು ಉತ್ತರದಲ್ಲಿ ಸಲ್ಲುವರೇ ಅಥವಾ ತಿರಸ್ಕೃತವಾಗುವರೇ ಇಂದು ಗೊತ್ತಾಗಲಿದೆ.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | ಮತ ಎಣಿಕೆಗೆ ಕ್ಷಣಗಣನೆ; ಮತ ಎಣಿಕೆ ಕೇಂದ್ರಗಳ ಬಾಗಿಲು ಓಪನ್
ಮತ್ತೆ ಗೆಲುವಿನ ನಗೆ ಬೀರಲಿದ್ದಾರಾ ಪಿ.ಸಿ.ಮೋಹನ್?
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಮತ್ತು ಕಾಂಗ್ರೆಸ್ನಿಂದ ಮನ್ಸೂರ್ ಅಲಿ ಖಾನ್ ಪ್ರಮುಖ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.
ಬಿಜೆಪಿಯ ಭದ್ರಕೋಟೆಯಾಗಿದ್ದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಈ ಬಾರಿ ಕಾಂಗ್ರೆಸ್‌ನ ಹಿಡಿತಕ್ಕೆ ಸಿಗಲಿದೆಯಾ ಕಾದು ನೋಡಬೇಕಿದೆ. ಈ ಕ್ಷೇತ್ರದಲ್ಲಿ ಏಪ್ರಿಲ್ 26ರಂದು ಶೇ.54.06 ಮತದಾನವಾಗಿತ್ತು.
2008ರಲ್ಲಿ ಈ ಕ್ಷೇತ್ರವನ್ನು ವಿಂಗಡಣೆ ಮಾಡಿ ರಚಿಸಲಾಯಿತು. ಅಂದಿನಿಂದ ಇಂದಿನವರೆಗೂ ಈ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಪಿಸಿ ಮೋಹನ್ ಗೆಲುವು ಸಾಧಿಸುತ್ತಾ ಬಂದಿದ್ದಾರೆ.