ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ವಜ್ರ ಬಸ್‌ಗಳಲ್ಲಿ ಪ್ರಯಾಣಿಸಲು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಮಾಸಿಕ ಬಸ್ ಪಾಸ್ ವಿತರಿಸುತ್ತಿದೆ. ವಜ್ರ ಮಾಸಿಕ ಬಸ್ ಪಾಸ್ ದರ ₹1,800 ಇದ್ದು, ವಿದ್ಯಾರ್ಥಿಗಳಿಗೆ ₹1,200ಗೆ ಪಾಸ್ ವಿತರಿಸಲು ಸಂಸ್ಥೆ ನಿರ್ಧರಿಸಿದೆ.
ವಿದ್ಯಾರ್ಥಿ ಸಮುದಾಯದ ಹಿತವನ್ನು ಗಮನದಲ್ಲಿಟ್ಟುಕೊಂಡು ರಿಯಾಯಿತಿ ದರದಲ್ಲಿ ವಿದ್ಯಾರ್ಥಿ ಪಾಸ್‌ಗಳನ್ನು ವಾಸಸ್ಥಳದಿಂದ ಕಾಲೇಜಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿ ವಿತರಣೆ ಮಾಡುತ್ತಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಮಾಸಿಕ ಬಸ್ ಪಾಸ್ ಪಡೆಯುವ ವಿದ್ಯಾರ್ಥಿಗಳು ವಜ್ರ ಸೇರಿದಂತೆ ಸಾಮಾನ್ಯ ಬಸ್‌ಗಳಲ್ಲಿ ಅನಿಯಮಿತವಾಗಿ ಪ್ರಯಾಣಿಸಬಹುದು ಎಂದು ಹೇಳಿದೆ.
ವಜ್ರ ವಿದ್ಯಾರ್ಥಿ ಪಾಸ್ ಪಡೆಯುವ ವಿಧಾನ
ಸಂಸ್ಥೆಯ ವೆಬ್‌ಸೈಟ್ www.mybmtc.karnataka.gov.in ನಲ್ಲಿ ವಿದ್ಯಾರ್ಥಿ ಬಸ್ ಪಾಸ್ ಅರ್ಜಿಯು ಲಭ್ಯವಿದೆ. ಸದರಿ ಅರ್ಜಿಯನ್ನು ಭರ್ತಿ ಮಾಡಿ, ಸಂಬಂಧಿಸಿದ ಶಾಲಾ/ಕಾಲೇಜಿನ ಮುಖ್ಯಸ್ಥರಿಂದ ದೃಢೀಕರಿಸಬೇಕು. ನಂತರ ದೃಢೀಕರಿಸಿದ ಅರ್ಜಿಯನ್ನು ಸಂಸ್ಥೆಯ ಕೆಳಕಂಡ ಬಸ್ ನಿಲ್ದಾಣದಲ್ಲಿ ಸಲ್ಲಿಸಿ, ಪಾಸಿನ ಮೊತ್ತವನ್ನು ಪಾವತಿಸಿ, ವಜ್ರ ವಿದ್ಯಾರ್ಥಿ ಪಾಸ್ ಅನ್ನು ಪಡೆಯಬಹುದು ಎಂದು ಸಂಸ್ಥೆ ಮಾಹಿತಿ ನೀಡಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಎಲ್ಲ ಆಸ್ತಿಗಳನ್ನು ಡಿಜಿಟಲೀಕರಣ ಮಾಡಿ; ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಎಲ್ಲೆಲ್ಲಿ ಬಸ್ ಪಾಸ್ ಪಡೆಯಬಹುದು?
ಕೆಂಪೇಗೌಡ ಬಸ್ ನಿಲ್ದಾಣ, ಬನಶಂಕರಿ ಟಿಟಿಎಂಸಿ, ವೈಟ್ ಫೀಲ್ಡ್ ಟಿಟಿಎಂಸಿ, ದೊಮ್ಮಲೂರು ಟಿಟಿಎಂಸಿ, ಹೆಬ್ಬಾಳ, ಕೆಂಗೇರಿ ಟಿಟಿಎಂಸಿ, ಶಿವಾಜಿನಗರ ಬಸ್ ನಿಲ್ದಾಣ, ಕಾಡುಗೋಡಿ ಬಸ್ ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿ, ಯಲಹಂಕ ಹಳೆ ಬಸ್ ನಿಲ್ದಾಣ, ಶಾಂತಿನಗರ ಟಿಟಿಎಂಸಿ, ಸರ್ಜಾಪುರ ಬಸ್ ನಿಲ್ದಾಣಗಳಲ್ಲಿ ಬಸ್ ಪಾಸ್ ಪಡೆಯಬಹುದಾಗಿದೆ ಎಂದು ಬಿಎಂಟಿಸಿ ಪ್ರಕಟಣೆ ಮೂಲಕ ತಿಳಿಸಿದೆ.