ರಾಜ್ಯದ ಕರಾವಳಿ, ಮಳೆನಾಡು ಹಾಗೂ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಚದುರಿಕೊಂಡಿರುವ ‘ಮನ್ಸ’ ಜಾತಿಯು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿದ ಪ್ರತ್ಯೇಕ ಜಾತಿಯಾಗಿದ್ದು, ಒಳ ಮೀಸಲಾತಿ ಸಮೀಕ್ಷೆಯಲ್ಲಿ ನಮ್ಮನ್ನು ಪ್ರತ್ಯೇಕ ‘ಮನ್ಸ’ ಜಾತಿ ಎಂದು ನೋಂದಣಿಗೆ ಅವಕಾಶ ಮಾಡಿಕೊಡಬೇಕು ಎಂದು ತುಳುನಾಡ್ ಮನ್ಸ ಸಮಾಜ ಸೇವಾ ಸಂಘದ ನಾಯಕರು ಆಗ್ರಹಿಸಿದರು.
ಬೆಂಗಳೂರು ಪ್ರೆಸ್ಕ್ಲಬ್ ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ʼತುಳುನಾಡ್ ಮನ್ಸ ಸಮಾಜ ಸೇವಾ ಸಂಘʼದ ಗೌರವ ಸಲಹೆಗಾರ ಅಚ್ಯುತ್ ಎಸ್ ಅವರು, ಮನ್ಸ ಎಂಬುದು ಪರಿಶಿಷ್ಟ ಜಾತಿಗೆ ಸೇರಿದ ಸ್ವತಂತ್ರ ಜಾತಿಯಾಗಿದೆ. ನಾವು ಯಾವುದೇ ಜಾತಿಯ ಉಪ ಜಾತಿ ಅಲ್ಲ. ನಮಗೆ ಯಾವುದೇ ಉಪ ಜಾತಿಯೂ ಇಲ್ಲ. ಹಾಗಾಗಿ ರಾಜ್ಯ ಸರಕಾರ ನಮ್ಮನ್ನು ಪ್ರತ್ಯೇಕ ಮನ್ಸ ಜಾತಿ ಎಂದು ಘೋಷಿಸಬೇಕು. ಆ ವರೆಗೆ ರಾಜ್ಯದಲ್ಲಿ ನಡೆಯುತ್ತಿರುವ ಒಳ ಮೀಸಲಾತಿ ಸಮೀಕ್ಷೆಯನ್ನು ನಾವು ಬಹಿಷ್ಕರಿಸಿದ್ದೇವೆ ಎಂದು ಹೇಳಿದರು.
ಉದ್ಯೋಗ ಹರಸಿಕೊಂಡು ವಲಸೆ ಹೋಗಿರುವ ನಮ್ಮ ಜಾತಿಯ ಜನರು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಹಾಗೂ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ನೆಲೆಸಿಕೊಂಡಿದ್ದಾರೆ. ರಾಜ್ಯದಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಮನ್ಸ ಜಾತಿಯ ಜನಸಂಖ್ಯೆ ಇದೆ. ನಮ್ಮನ್ನು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಪ್ರತ್ಯೇಕ ಮನ್ಸ ಜಾತಿ ಎಂದು ಘೋಷಿಸಿ ನ್ಯಾಯ ಒದಗಿಸಿ ಎಂದು ಕಳೆದ 30 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಯಾವುದೇ ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸಿಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದರು.
ಮನ್ಸ ಜಾತಿಯವರು ಪ್ರತ್ಯೇಕ ಅಸ್ಮಿತೆ ಹೊಂದಿರುವ ಜನಾಂಗದವರಾಗಿದ್ದಾರೆ. ಕಾನದ – ಕಟದ ಎಂಬ ಸಾಂಸ್ಕೃತಿಕ ಅವಳಿ ವೀರರನ್ನು ತಮ್ಮ ಕುಲ ದೈವಗಳು ಎಂದು ಆರಾಧಿಸಿಕೊಂಡು ಬರುತ್ತಿದ್ದೇವೆ. ಮನ್ಸ ಜಾತಿಯನ್ನು ಪ್ರತ್ಯೇಕ ಜಾತಿಯಾಗಿ ಘೋಷಿಸದ ಕಾರಣ ಬೇರೆ ದಾರಿಯಿಲ್ಲದೆ ಅನಿವಾರ್ಯವಾಗಿ ನಮ್ಮ ಹಿರಿಯರು ಪರಿಶಿಷ್ಟ ಜಾತಿಯಲ್ಲಿರುವ ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಎಂಬ ಹೆಸರಿನಲ್ಲಿ ಗುರುತಿಸಿಕೊಂಡು ಅದೇ ಹೆಸರಿನಲ್ಲಿ ನಾವು ಜಾತಿ ದೃಢೀಕರಣ ಪತ್ರ ಪಡೆಯುತ್ತಿದ್ದೇವೆ ಎಂದು ಅವರು ತಿಳಿಸಿದರು.
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಕೃಷಿ ಕಾರ್ಮಿಕರಾಗಿ ಬದುಕುತ್ತಿರುವ ನಮ್ಮ ಸಮುದಾಯದ ಜನರನ್ನು ಈ ಆಧುನಿಕ ಯುಗದಲ್ಲೂ ಅಸ್ಪೃಶ್ಯರಲ್ಲಿ ಅಸ್ಪೃಶ್ಯರಂತೆ ಕಾಣಲಾಗುತ್ತಿದೆ. ಕಾಂತರಾಜು ಮತ್ತು ಸದಾಶಿವ ಆಯೋಗದಲ್ಲಿಯೂ ನಮ್ಮ ಜಾತಿಯನ್ನು ಮನ್ಸ ಎಂದು ಉಲ್ಲೇಖ ಮಾಡಲಾಗಿದೆ. ಹೀಗಾಗಿ ನಮ್ಮನ್ನು ಪ್ರತ್ಯೇಕ ಜಾತಿ ಎಂದು ಘೋಷಿಸಲು ಸರಕಾರ ಕುಲಶಾಸ್ತ್ರ ಅಧ್ಯಾಯನ ಮಾಡಬೇಕು. ಆ ಬಳಿಕ ನಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿದ ಪ್ರತ್ಯೇಕ ಮನ್ಸ ಜಾತಿ ಘೋಷಿಸಬೇಕು ಎಂದು ಅವರು ಆಗ್ರಹಿಸಿದರು.
ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಒದಗಿಸಲು ರಾಜ್ಯ ಸರಕಾರ ನಡೆಸುತ್ತಿರುವ ಸಮೀಕ್ಷೆಯನ್ನು ಸ್ಥಗಿತಗೊಳಿಸಬೇಕು. ನಮ್ಮನ್ನು ಪ್ರತ್ಯೇಕ ಮನ್ಸ ಜಾತಿ ಎಂದು ಸಮೀಕ್ಷಾ ನಮೂನೆಯಲ್ಲಿ ಸೇರ್ಪಡೆಗೊಳಿಸಿದ ಬಳಿಕ ಸಮೀಕ್ಷೆ ನಡೆಸಬೇಕು. ಆ ಮೂಲಕ ತಲ ತಲಾಂತರದಿಂದ ಶೋಷಣೆಗೆ ಒಳಗಾದ ನಮಗೆ ನ್ಯಾಯ ದೊರಕಲಿದೆ ಎಂದು ಅವರು ತಿಳಿಸಿದರು.
ಒಳ ಮೀಸಲಾತಿಗಾಗಿ ನಡೆಯುತ್ತಿರುವ ಸಮೀಕ್ಷೆಯಲ್ಲಿ ನಮ್ಮನ್ನು ಮನ್ಸ ಜಾತಿಗೆ ಸೇರಿಸುವಂತೆ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಆದರೆ ನಮ್ಮ ಮನವಿಗೆ ಸ್ಪಂದನೆ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಸದ್ಯ ನಡೆಯುತ್ತಿರುವ ಸಮೀಕ್ಷೆಯನ್ನು ನಾವು ಬಹಿಷ್ಕರಿಸಿದ್ದೇವೆ. ಮನ್ಸ ಪ್ರತ್ಯೇಕ ಜಾತಿ ಎಂದು ಘೋಷಿಸಿ ಜಾತಿ ಕಾಲಂನಲ್ಲಿ ನಮ್ಮನ್ನು ಪ್ರತ್ಯೇಕ ಜಾತಿ ಎಂದು ಸೇರಿಸಿದ ಬಳಿಕವಷ್ಟೇ ನಾವು ಸಮೀಕ್ಷೆಯಲ್ಲಿ ಭಾಗವಹಿಸುತ್ತೇವೆ ಎಂದರು.
ಸಂಘದ ಗೌರದ ಅಧ್ಯಕ್ಷ ಎಂ ಶಾಂತಾರಾಂ, ಅಧ್ಯಕ್ಷ ವೆಂಕಣ್ಣ ಕೊಯ್ಯೂರು, ಉಪಾಧ್ಯಕ್ಷ ಸಂಜೀವ, ಪ್ರಧಾನ ಕಾರ್ಯದರ್ಶಿ ಉದಯ, ಸಂಘಟನಾ ಕಾರ್ಯದರ್ಶಿ ಎಂ.ರಮೇಶ್ ಬೋಧಿ, ಸಮಿತಿ ಸದಸ್ಯ ಬಿ.ಕೆ.ವಸಂತ ಉಪಸ್ಥಿತರಿದ್ದರು.