ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜಲಮಂಡಳಿ ನೀರಿನ ಸಮಸ್ಯೆ ನಿವಾರಿಸಲು ಹಲವು ಕ್ರಮ ಕೈಗೊಳ್ಳುತ್ತಿದೆ. ಇದೀಗ, ಮೊದಲ ಬಾರಿಗೆ ಕಾವೇರಿ 5ನೇ ಹಂತದ ಯೋಜನೆಯಡಿ ಪಂಪಿಂಗ್ ಸ್ಟೇಷನ್‌ಗಳಿಂದ ಟ್ಯಾಂಕರ್‌ಗಳಲ್ಲಿ ನೀರನ್ನು ಪಡೆದು, ಜನರಿಗೆ ಪೂರೈಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಬಿಡಬ್ಲೂಎಸ್‌ಎಸ್‌ಬಿ) ಯೋಜಿಸುತ್ತಿದೆ.
ಈ ಯೋಜನೆಯು ಮೇ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಿದೆ. ಮೇ ತಿಂಗಳಿನಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಪಂಪಿಂಗ್ ಸ್ಟೇಷನ್‌ಗಳಿಂದ ನೀರನ್ನು ಬಳಸಿಕೊಳ್ಳಲು ಜಲಮಂಡಳಿ ಯೋಜಿಸಿದೆ.
ತಾತಗುಣಿ ಅಥವಾ ಹಾರೋಹಳ್ಳಿ ಪಂಪಿಂಗ್ ಸ್ಟೇಷನ್‌ಗಳಿಗೆ ನೀರನ್ನು ಪಂಪ್ ಮಾಡಲು ಸಾಧ್ಯವಾದರೆ ನಗರಕ್ಕೆ ನೀರು ಬರುವುದು ಸುಲಭ ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ವಿ ಹೇಳಿದರು.
“ನೀರು ಸಂಸ್ಕರಣಾ ಘಟಕಗಳು ಏಪ್ರಿಲ್ ಅಂತ್ಯದ ವೇಳೆಗೆ ಸಿದ್ಧವಾಗುತ್ತವೆ. ಆಗ ನಾವು ನೀರನ್ನು ಪಂಪ್ ಮಾಡಲು ಸಾಧ್ಯವಾಗುತ್ತದೆ. ಕೊನೆಯ ಮೈಲಿ ಪೈಪ್‌ಲೈನ್ ಸಂಪರ್ಕದ ಸಮಸ್ಯೆಗಳಿಂದಾಗಿ, ಮನೆಗಳಿಗೆ ನೀರು ಸರಬರಾಜು ಮಾಡಲು ಸಾಧ್ಯವಾಗದಿರಬಹುದು. ತಾತಗುಣಿ ಅಥವಾ ಹಾರೋಹಳ್ಳಿ ನಿಲ್ದಾಣದವರೆಗೆ ನೀರು ಸಿಕ್ಕಿದರೆ, ಟ್ಯಾಂಕರ್‌ಗಳನ್ನು ಬಳಸಿ ನಗರಕ್ಕೆ ಸುಲಭವಾಗಿ ಕೊಂಡೊಯ್ಯಬಹುದು. ಮೇ ತಿಂಗಳಲ್ಲಿ ಪರಿಸ್ಥಿತಿ ಹದಗೆಟ್ಟರೆ ಜಾರಿಗೆ ತರಲು ಹೊರಟಿರುವ ಹಲವು ಯೋಜನೆಗಳಲ್ಲಿ ಇದು” ಎಂದು ತಿಳಿಸಿದರು.
“ನಗರದಲ್ಲಿ ತಾಪಮಾನ ಹೆಚ್ಚಳವಾಗುತ್ತಿರುವ ಕಾರಣ ಇನ್ನು ಶುಷ್ಕ ವಾತಾವರಣ ಕಂಡುಬರುವ ಸಾಧ್ಯತೆ ಇದೆ. ಮೇ ತಿಂಗಳಲ್ಲಿ ಹೆಚ್ಚಿನ ಬೋರ್‌ವೆಲ್‌ಗಳು ನಿಷ್ಕ್ರಿಯವಾಗಬಹುದು. ಇದು ಕಾವೇರಿ ನೀರಿನ ಮೇಲಿನ ಅವಲಂಬನೆ ಮತ್ತು ಬೇಡಿಕೆಯನ್ನು ಹೆಚ್ಚಿಸಬಹುದು. ಹೀಗಾಗಿ, ಯಾವುದೇ ಕೊರತೆಯಾಗದಂತೆ ಯೋಜನೆಗಳನ್ನು ರೂಪಿಸುತ್ತಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಏ.18 ರಿಂದ ಸಿಇಟಿ ಪರೀಕ್ಷೆ ಆರಂಭ : ಮಾರ್ಗಸೂಚಿಗಳೇನು?
“ನಗರದ ಅಗತ್ಯಗಳಿಗೆ ಅನುಗುಣವಾಗಿ, ಜಲಮಂಡಳಿ ಪಂಪಿಂಗ್ ಸ್ಟೇಷನ್‌ಗಳಿಂದ 30-40 ಎಮ್‌ಎಲ್‌ಡಿ ನೀರನ್ನು ಹೊರತೆಗೆಯಬಹುದು. ನೀರು ಉಳಿಸುವ ಕ್ರಮಗಳನ್ನು ಉತ್ತೇಜಿಸುವ ಮೂಲಕ ಮತ್ತು ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಿಸುವ ಮೂಲಕ ನೀರಿನ ಬಿಕ್ಕಟ್ಟನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಯಿತು. ಆದರೆ, ಇಷ್ಟೆಲ್ಲ ಕ್ರಮಗಳ ನಂತರವೂ ಮೇ ತಿಂಗಳಿನಲ್ಲಿ ಕೊರತೆಯಾದರೆ ಇತರ ಜಲಮೂಲಗಳನ್ನು ಅನ್ವೇಷಿಸಬೇಕಾಗಿದ್ದು, ಕಾವೇರಿ 5ನೇ ಹಂತದ ಯೋಜನೆ ಬಹುತೇಕ ಪೂರ್ಣಗೊಂಡಿರುವುದರಿಂದ ಅಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು” ಎಂದರು.
ಇದಲ್ಲದೆ, ಪ್ರಸ್ತುತ 0.3 ಟಿಎಂಸಿ ನೀರಿರುವ ಹೆಸರಘಟ್ಟ ಕೆರೆಯಿಂದ ಕನಿಷ್ಠ 10 ಎಂಎಲ್‌ಡಿ ನೀರನ್ನು ಪಡೆಯಲು ಬಿಡಬ್ಲ್ಯೂಎಸ್‌ಎಸ್‌ಬಿ ಯೋಜಿಸುತ್ತಿದೆ. ಜಲಮಂಡಳಿಯೂ 20% ರಷ್ಟು ಬೃಹತ್ ಗ್ರಾಹಕರಿಗೆ ನೀರಿನ ಸರಬರಾಜನ್ನು ಕಡಿತಗೊಳಿಸಿ, ನೀರನ್ನು ಉಳಿಸಲು ಸಮರ್ಥವಾಗಿದೆ. ಸಂಸ್ಕರಿಸಿದ ನೀರು ಮತ್ತು ಟ್ಯಾಪ್‌ಗಳಿಗೆ ಏರೇಟರ್‌ಗಳ ಬಳಕೆಯಂತಹ ನೀರು ಉಳಿಸುವ ಕ್ರಮಗಳನ್ನು ಅನುಷ್ಠಾನಗೊಳಿಸುವುದು. ಇಲ್ಲಿಯವರೆಗೆ, ಈ ಕ್ರಮಗಳು ಮಂಡಳಿಯು ಕನಿಷ್ಟ 300 ಎಮ್‌ಎಲ್‌ಡಿ ನೀರನ್ನು ಉಳಿಸಲು ಮತ್ತು ಕೊರತೆಯಿರುವ ಪ್ರದೇಶಗಳಿಗೆ ಮರುಹಂಚಿಕೆ ಮಾಡಲು ಸಹಾಯ ಮಾಡಿದೆ.
