ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಕಾನೂನು ತಜ್ಞರ ಜತೆ ಚರ್ಚೆ ಮಾಡಲಾಗಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಪ್ರಾಧಿಕಾರದ ತೀರ್ಮಾನದ ವಿಚಾರವಾಗಿ ಮಾಧ್ಯಮಗಳು ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಬಳಿ ಶುಕ್ರವಾರ ಪ್ರಶ್ನಿಸಿದಾಗ ಉತ್ತರಿಸಿದರು.
“ಕಾವೇರಿ ನೀರಿನ ವಿಚಾರವಾಗಿ ಮುಂದೆ ಏನು ಮಾಡಬೇಕು ಎಂದು ಅನಿಲ್ ದಿವಾನ್, ಕಾತರಕಿ ಸೇರಿದಂತೆ ಕಾನೂನು ತಜ್ಞರ ತಂಡ ಜತೆ ಚರ್ಚೆ ಮಾಡಿದ್ದು, ನೀರಾವರಿ ಇಲಾಖೆ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತೇವೆ” ಎಂದರು.
ಮುಡಾ ವಿಚಾರದಲ್ಲಿ ರಾಜಕೀಯ
ಮೂಡಾ ಹಗರಣದ ಬಗ್ಗೆ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, “ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಹುರುಳಿಲ್ಲ. ಸಮಯ ಬಂದಾಗ ನಾವು ಏನು ಉತ್ತರ ನೀಡಬೇಕೋ ನೀಡುತ್ತೇವೆ. ಮುಡಾದಲ್ಲಿ ಏನೇ ಹಗರಣ ನಡೆದಿದ್ದರೂ ಅದು ಬಿಜೆಪಿ ಅವಧಿಯಲ್ಲಿ ನಡೆದಿದೆ. ಈ ರಾಜಕೀಯ ಆರೋಪಗಳನ್ನು ನಾವು ಸಮರ್ಥವಾಗಿ ಎದುರಿಸುತ್ತೇವೆ” ಎಂದು ತಿಳಿಸಿದರು.
ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಅವರನ್ನು ಇ.ಡಿ ವಿಚಾರಣೆ ನಡೆಸುತ್ತಿರುವ ಬಗ್ಗೆ ಕೇಳಿದಾಗ, “ವಾಲ್ಮೀಕಿ ನಿಗಮದ ಹಗರಣದ ಕುರಿತು ಎಸ್ಐಟಿ ವಿಚಾರಣೆ ನಡೆಸುತ್ತಿದೆ. ಇ.ಡಿ ವಿಚಾರಣೆ ಅವಶ್ಯಕತೆ ಇರಲಿಲ್ಲ. ಅವರ ತನಿಖೆ ಬಗ್ಗೆ ತಿಳಿದು ನಂತರ ಮಾತನಾಡುತ್ತೇನೆ” ಎಂದು ಹೇಳಿದರು.