ಕೆರೆಗಳ ಕಣ್ಮರೆ ಹಾಗೂ ಕೆರೆ ಅಂಗಳಗಳ ಅತಿಕ್ರಮಣದಿಂದಾಗಿ ಬೆಂಗಳೂರಿನಲ್ಲಿ ಅಂತರ್ಜಲ ಪ್ರಮಾಣ ವೇಗವಾಗಿ ಕುಸಿಯುತ್ತಿದೆ. ಇದೇ ರೀತಿ ಅಂತರ್ಜಲ ಮಟ್ಟ ಕುಸಿಯುತ್ತಾ ಹೋದರೆ ರಾಜಧಾನಿ ಬರಡು ಭೂಮಿ ಆಗಲಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ನಗರದಲ್ಲಿ ಜಲಕ್ಷಾಮ ಎದುರಾಗಿದೆ.
ಒಂದೆಡೆ ಅಂತರ್ಜಲ ಮಟ್ಟ ಕುಸಿತದಿಂದ ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿದ್ದರೇ, ಇನ್ನೊಂದೆಡೆ ಕಾವೇರಿ ನೀರಿನ ಕೊರತೆಯಿಂದಾಗಿ ಬೆಂಗಳೂರು ಜಲಮಂಡಳಿಯಿಂದ ನಗರದಲ್ಲಿರುವ ಮನೆಗಳಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಹಾಗಾಗಿ, ಜನರು ಟ್ಯಾಂಕರ್ ನೀರು ಬಳಸಲು ಮುಂದಾಗಿದ್ದಾರೆ. ಆದರೆ, ಒಂದು ಟ್ಯಾಂಕರ್ ಬೆಲೆ ಇದೀಗ ₹800-₹1,000 ಇದೆ. ಈ ಹಿಂದೆ ₹400-₹500 ಇತ್ತು. ಜನರು ಇತ್ತಕಡೆ ಜಲಮಂಡಳಿಗೂ ನೀರಿನ ತೆರಿಗೆ ಕಟ್ಟಬೇಕು. ಟ್ಯಾಂಕರ್‌ಗೂ ಹಣ ನೀಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನ ಜನಸಂಖ್ಯೆ ಅಂದಾಜು 1.30 ಕೋಟಿ ದಾಟಿದೆ. ಇಲ್ಲಿ ನೆಲೆಸಿರುವ ಜನರಿಗೆ ಮೂಲಭೂತ ಸೌಕರ್ಯ ಒದಗಿಸುವುದೇ ಸವಾಲಾಗಿ ಪರಿಣಮಿಸಿದೆ. ನೀರಿನ ಪೂರೈಕೆಯ ಮಹತ್ವದ ಜವಾಬ್ದಾರಿ ಹೊತ್ತಿರುವ ಬೆಂಗಳೂರು ಜಲಮಂಡಳಿ ಕಾವೇರಿ ನೀರನ್ನೇ ಪ್ರಧಾನವಾಗಿ ಅವಲಂಬಿಸಿದೆ. ಬೇಸಿಗೆಕಾಲ ಆರಂಭಕ್ಕೆ ಇನ್ನು ಒಂದು ತಿಂಗಳು ಬಾಕಿ ಇದೆ. ಆದರೆ, ಇದಿಗ ಚಳಿಗಾಲದ ಸಮಯದಲ್ಲಿಯೇ ನೀರಿಗೆ ಹಾಹಾಕಾರ ಆರಂಭವಾಗಿದ್ದು, ಜನರು ನೀರಿಗಾಗಿ ಪರಿತಪಿಸುವಂತಾಗಿದೆ. ಇದೇ ಪರಿಸ್ಥಿತಿ ಬೇಸಿಗೆ ಆರಂಭವಾದ ಬಳಿಕವೂ ಮುಂದುವರೆದರೇ ಜಲಕ್ಷಾಮ ಉಂಟಾಗುವ ಸಾಧ್ಯತೆಯಿದೆ.
ನಗರದಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಒಂದು ಸಾವಿರ ಅಡಿ ಆಳದವರೆಗೂ ಕೊಳವೆ ಬಾವಿ ಕೊರೆದರೂ ನೀರು ಸಿಗದಂತಹ ಪರಿಸ್ಥಿತಿ ಉಂಟಾಗಿದೆ. ಬೆಂಗಳೂರಿನಲ್ಲಿ ಬಹುತೇಕ ಇದೇ ಪರಿಸ್ಥಿತಿ ಇದ್ದು, ಅಂತರ್ಜಲದ ಶೋಷಣೆಯಾಗುತ್ತಿದೆ. ಕರ್ನಾಟಕದಲ್ಲಿ ಅಂತರ್ಜಲ ಶೋಷಣೆ ಅವ್ಯಾಹತವಾಗಿ ನಡೆಯುತ್ತಿದ್ದು, ರಾಷ್ಟ್ರದ ಭೂಪದಲ್ಲಿ ಪರಿಸ್ಥಿತಿ ಅತಿ ಗಂಭೀರ ಎಂಬ ಸ್ಥಾನ ಪಡೆದಿದೆ. ಅಂತರ್ಜಲ ಸಂಪನ್ಮೂಲಗಳನ್ನು ಶೇ. 70ರಷ್ಟು ಶೋಷಣೆ ಮಾಡಲಾಗಿದೆ.
ರಾಜ್ಯದಲ್ಲಿ ಮಳೆಯ ಎಲ್‌ನಿನೋ ಸ್ವರೂಪವನ್ನೇ ಬದಲಿಸಿದ್ದು, ಕಳೆದ ವರ್ಷ ವಾಡಿಕೆಗಿಂತ ಮಳೆ ಸಾಕಷ್ಟು ಕಡಿಮೆಯಾದ ಹಿನ್ನೆಲೆ ತೀವ್ರ ಬರಗಾಲ ಎದುರಾಯಿತು. ಇದರಿಂದ ಜಲಾಶಯಗಳು ಬರಿದಾಗುತ್ತಿವೆ.
ಬೆಂಗಳೂರಿನಲ್ಲಿ ಎಲ್ಲೆಲ್ಲಿ ನೀರಿನ ಸಮಸ್ಯೆ
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಇಟ್ಟಮಡುವಿನ ಕುವೆಂಪುನಗರ ಮತ್ತು ದಾಸರಹಳ್ಳಿ ವಿಧಾನಸಭಾ ವ್ಯಾಪ್ತಿಯ ಮಲ್ಲಸಂದ್ರ ವಾರ್ಡ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಒಂದು ವಾರ ಅಥವಾ ಹದಿನೈದು ದಿನಕ್ಕೊಮ್ಮೆ ಕಾವೇರಿ ನೀರು ಬರುತ್ತಿದೆ.
ಮಹದೇವಪುರ ವಲಯ ವ್ಯಾಪ್ತಿಯ ನಲ್ಲೂರು ಹಳ್ಳಿ ಸೇರಿದಂತೆ ನಗರದ ಹಲವೆಡೆ ಕಾವೇರಿ ನೀರಿಗೆ ಹಾಹಾಕಾರ ಉಂಟಾಗಿದೆ. ನಗರದ ಹಲವೆಡೆ ಅಂತರ್ಜಲ ಮಟ್ಟ ಕುಸಿದ ಹಿನ್ನೆಲೆ, ನೀರಿನ ಸಮಸ್ಯೆ ಎದುರಾಗಿದೆ.
ನಗರದ ಹಲವು ಪ್ರದೇಶಗಳು ನೀರಿನ ಸಮಸ್ಯೆಯಿಂದ ಬಳಲುತ್ತಿವೆ. ಅಂಕಿ-ಅಂಶಗಳ ಪ್ರಕಾರ, ಆನೇಕಲ್‌ನಲ್ಲಿ ಸುಮಾರು 7.42 ಮೀಟರ್, ಯಲಹಂಕದಲ್ಲಿ 7.31 ಮೀಟರ್, ಬೆಂಗಳೂರು ಪೂರ್ವದಲ್ಲಿ 5.81 ಮೀಟರ್ ಮತ್ತು ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರದಲ್ಲಿ ಒಂದು ಮೀಟರ್‌ಗಿಂತ ಕಡಿಮೆ ಅಂತರ್ಜಲ ಕುಸಿದಿದೆ.
110 ಹಳ್ಳಿಗಳಿಗೆ ಕುಡಿಯುವ ನೀರು
ಬೆಂಗಳೂರಿನ ಮಹದೇವಪುರ, ಕೆ.ಆರ್.ಪುರ, ಯಶವಂತಪುರ, ಯಲಹಂಕ, ದಾಸರಹಳ್ಳಿ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ ವಿಧಾನಸಭಾ ವ್ಯಾಪ್ತಿಯ 110 ಹಳ್ಳಿಗಳು 2007ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಗಿ ಸರಿ ಸುಮಾರು 16 ವರ್ಷಗಳೇ ಕಳೆದಿವೆ. ಇಲ್ಲಿ ವಾಸಿಸುವ ನಿವಾಸಿಗಳಿಗೆ ಬೆಂಗಳೂರು ಜಲ ಮಂಡಳಿಯಿಂದ ನೀರು ಪೂರೈಕೆ ಮಾಡಬೇಕು. ಆದರೆ, ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ.
ಇನ್ನು ಶೀಘ್ರದಲ್ಲಿಯೇ ಕಾವೇರಿ 5ನೇ ಹಂತದ ಯೋಜನೆ ಮೂಲಕ ಹೆಚ್ಚುವರಿ 110 ಹಳ್ಳಿಗಳಿಗೆ ಕುಡಿಯುವ ನೀರನ್ನು ನೀಡುವುದಾಗಿ ಹೇಳಿರುವ ಜಲಮಂಡಳಿ ಪ್ರತಿ ತಿಂಗಳು 2.42 ಟಿಎಂಸಿ ನೀರು ಅಂದರೆ ವಾರ್ಷಿಕವಾಗಿ 29 ಟಿಎಂಸಿ ನೀರನ್ನ ಕಾಯ್ದಿರಿಸುವಂತೆ ಕಾವೇರಿ ನೀರಾವರಿ ನಿಗಮಕ್ಕೆ ಪತ್ರ ಬರೆದು ಮನವಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ವಿಶ್ವ ಕ್ಯಾನ್ಸರ್ ದಿನ | ಜಾಗೃತಿ ಅರಿವು ಮೂಡಿಸಲು ಬೆಂಗಳೂರಲ್ಲಿ ಬೃಹತ್ ವಾಕಥಾನ್
ಸದ್ಯ ಕೆಆರ್‌ಎಸ್ ಜಲಾಶಯದಲ್ಲಿ 18 ಟಿಎಂಸಿ ಸಂಗ್ರಹ ಇದ್ದು, 5 ಟಿಎಂಸಿ ಡೆಡ್ ಸ್ಟೋರೇಜ್ ಇರಲಿದೆ. ಉಳಿದ ನೀರನ್ನ ಎತ್ತಿಟ್ಟರೂ 6 ತಿಂಗಳಿಗೆ ಮಾತ್ರ ಸರಿಹೋಗಲಿದ್ದು, ನಿರೀಕ್ಷಿತ ಮಳೆಯಾಗದಿದ್ದಲ್ಲಿ ಬೆಂಗಳೂರಿನ ಸ್ಥಿತಿ ಏನಾಗಲಿದೆ ಎಂಬ ಆತಂಕ ಮೂಡಿದೆ.
ಕೆಆರ್‌ಎಸ್‌ನಿಂದ ಬೆಂಗಳೂರಿಗೆ ನೀರು ಸರಬರಾಜು ಆಗುತ್ತದೆ. ಪ್ರತಿ ತಿಂಗಳಿಗೆ 1.5 ಟಿಎಂಸಿ ನೀರು ಬೇಕು. ಈಗಾಗಲೇ ಬೆಂಗಳೂರು ಜಲಮಂಡಳಿ ಕಾವೇರಿ ನಿಗಮಕ್ಕೆ 2.4 ರಿಂದ 2.5 ಟಿಎಂಸಿ ನೀರು ಬೇಡಿಕೆಗೆ ಪತ್ರ ಬರೆದಿದೆ. ಆದರೆ, ಮಳೆಯ ಪ್ರಮಾಣ ಕಡಿಮೆಯಾದ್ದರಿಂದ ಕೆಆರ್‌ಎಸ್‌ನಲ್ಲಿ ಸದ್ಯ 18 ಟಿಎಂಸಿ ನೀರು ಇದೆ. ಜಲಾಶಯದಲ್ಲಿ 5 ಟಿಎಂಸಿ ಡೆಡ್ ಸ್ಟೋರೆಜ್ ನೀರು ಕಾಯ್ದಿರಿಸಲೇಬೇಕು. ಇನ್ನುಳಿದ 10 ಟಿಎಂಸಿ ನೀರಿನಲ್ಲಿ ಬೆಂಗಳೂರು ಮತ್ತು ತಮಿಳುನಾಡಿಗೂ ತಲುಪಬೇಕಿದೆ.
ಹೀಗಾಗಿ, ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನೀರಿಗಾಗಿ ತೀವ್ರ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು, ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಳ್ಳಬೇಕು. ಬೇಸಿಗೆಯ ಸಮಯದಲ್ಲಿ ನೀರಿನ ಕಂಟಕ ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ.
ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣ
- ಕಳೆದ ವರ್ಷ ನಿರೀಕ್ಷೆಯಂತೆ ಮಳೆಯಾಗದ ಕಾರಣ ಬೆಂಗಳೂರು ನಗರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದೆ.
- ಅತಿಯಾದ ನಗರೀಕರಣ, ಅಂತರ್ಜಲದ ಮಿತಿ ಮೀರಿದ ಬಳಕೆ, ಸರಿಯಾದ ನಗರ ಯೋಜನೆ ಮತ್ತು ಅನುಷ್ಠಾನ ಇಲ್ಲದಿರುವುದು.
- ಸರಿಯಾಗಿ ಮಳೆ ಆಗುತ್ತಿಲ್ಲ. ಇದರಿಂದ ಪ್ರತಿ ವರ್ಷ ಅಂತರ್ಜಲಮಟ್ಟ ಕುಸಿತ ಕಾಣುತ್ತಿದೆ.
- ಕಾಂಕ್ರೀಟ್ ರಸ್ತೆಗಳು, ಕೆರೆಗಳ ಒತ್ತುವರಿ ಹಾಗೂ ಕೊಳಚೆ ನೀರು ಹೆಚ್ಚಾಗುತ್ತಿರುವುದರಿಂದ ನೀರಿನಲ್ಲಿ ಕೆಮಿಕಲ್ ಅಂಶ ಹೆಚ್ಚಾಗುತ್ತಿದೆ.
- ಹೆಚ್ಚಾಗಿ ಬೋರ್‌ವೆಲ್‌ಗಳು ಕೊರೆದಿರುವುದು ಕೂಡ ನೀರಿನ ಅಂತರ್ಜಲಮಟ್ಟ ಕುಸಿತಕ್ಕೆ ಕಾರಣವಾಗಿದೆ.
- ಒಂದೆಡೆ ನೀರಿನ ಬಳಕೆ ಹೆಚ್ಚಾಗಿದ್ದರೆ, ಮತ್ತೊಂದೆಡೆ ಅಂತರ್ಜಲ ವೃದ್ಧಿ ಆಗುತ್ತಿಲ್ಲ.
- ಹವಾಮಾನ ವೈಪರೀತ್ಯದಿಂದ ಮಳೆ ಪ್ರಮಾಣದ ಹಂಚಿಕೆಯಲ್ಲಿ ವ್ಯತ್ಯಾಸವಾಗುತ್ತಿದೆ.
- ಮಿತಿ ಮೀರಿ ಕೊಳವೆ ಬಾವಿಗಳನ್ನು ಕೊರೆದು ಅಂತರ್ಜಲವನ್ನು ಬೇಕಾಬಿಟ್ಟಿಯಾಗಿ ಬಳಸುತ್ತಿರುವುದರಿಂದ ಭೂಮಿಯೊಳಗಿನ ನೀರು ಒಂದೆಡೆ ನಿಲ್ಲದೆ ವರ್ಗೀಕರಣವಾಗುತ್ತಿದೆ.
- ಭೂಮಿಯೊಳಗೆ ನೀರು ಸರಿಯಾಗಿ ಇಂಗುತ್ತಿಲ್ಲ. ಇಂಗಿದ ನೀರು ನಿಲ್ಲುತ್ತಿಲ್ಲ.
- ನಗರದಲ್ಲಿ ಭೂಮಿಯನ್ನು ಕಾಂಕ್ರೀಟೀಕರಣಗೊಳಿಸುವ ಕೆಲಸ ಎಗ್ಗಿಲ್ಲದೆ ಸಾಗಿದೆ.
- ಮಳೆಯ ನೀರನ್ನು ಭೂಮಿಯ ಅಂತರಾಳಕ್ಕೆ ಹಿಡಿದು ಕಳಿಸುವ ಮರಳಿನ ಪದರ ನಾಶವಾಗುತ್ತಿದೆ.
- ಮೋಡಗಳನ್ನು ತಡೆದು ನಿಲ್ಲಿಸಿ ಮಳೆ ಸುರಿಸುವಂತೆ ಮಾಡುವ ಮರಗಳನ್ನು ನಾಶ ಮಾಡಲಾಗುತ್ತಿದೆ.
- ಬೆಂಗಳೂರಿನಲ್ಲಿ ಅಂತರ್ಜಲ ವೃದ್ಧಿಗೆ ಮತ್ತು ಮಳೆ ನೀರಿನ ವ್ಯರ್ಥ ಹರಿವಿನ ತಡೆಗೆ ಪರಿಣಾಮಕಾರಿ ಪ್ರಯತ್ನಗಳು ಆಗುತ್ತಿಲ್ಲ.
- ಒಂದು ಸಾವಿರ ಅಡಿ ಬೋರ್‌ವೆಲ್ ಕೊರೆದರೂ ನೀರು ಸಿಗುತ್ತಿಲ್ಲ. ಇನ್ನೂ ಸಾವಿರ ಅಡಿಗಳಲ್ಲಿ ಸಿಗುವ ನೀರು ಅತ್ಯಂತ ಗಡಸು. ಇದರಲ್ಲಿ ಕ್ಯಾಲ್ಸಿಯಂ, ಮ್ಯಾಗ್ನೆಶೀಯಂ, ಆರ್ಸೆನಿಕ್, ಫ್ಲೋರೈಡ್ ಸೇರಿ ವಿವಿಧ ಖನಿಜಾಂಶಗಳ ಪ್ರಮಾಣ ಹೆಚ್ಚಾಗಿರುವುದರಿಂದ ನೀರು ಕುಡಿಯೋದಕ್ಕೆ ಸೂಕ್ತವಲ್ಲ.
ಹಾಗಿದ್ದರೇ ಪರಿಹಾರದ ಮಾರ್ಗಗಳೇನು?
- ನಗರದಲ್ಲಿ ಹಸಿರು ವಲಯ ಹೆಚ್ಚಿಸುವುದು, ಸೃಷ್ಟಿಸುವುದು.
- ಸಂಸ್ಕರಿಸಿದ ತ್ಯಾಜ್ಯ ನೀರಿನ ಸಮರ್ಪಕ ಬಳಕೆ ಮಾಡುವುದು.
- ಮಳೆ ನೀರು ಕೊಯ್ಲು ಪದ್ಧತಿಯ ಕಟ್ಟುನಿಟ್ಟಿನ ಅನುಷ್ಠಾನ.
- ಜಲಮಂಡಳಿಯ ವ್ಯಾಪ್ತಿಯ ನೀರಿನ ಸೋರಿಕೆಗೆ ಕಡಿವಾಣ ಹಾಕಬೇಕು.