”ಶಾಲೆಗಳಲ್ಲಿರುವ ಶೌಚಾಲಯಗಳನ್ನು ಒಂದು ಸಮುದಾಯ ಅಥವಾ ವರ್ಗ ಅಥವಾ ಜಾತಿಯ ಮಕ್ಕಳಿಂದ ಸ್ವಚ್ಛಗೊಳಿಸುವ ಅಥವಾ ಅವರಿಗೆ ಸ್ವಚ್ಛಗೊಳಿಸಲು ಒತ್ತಾಯಿಸುವ ಕೆಲಸವನ್ನು ಯಾರೇ ಮಾಡಿದರು ಅದು ಅಕ್ಷಮ್ಯ ಅಪರಾಧ. ಜತೆಗೆ ಸಂವಿಧಾನದ ಉಲ್ಲಂಘನೆಯಾಗಿದೆ. ಈ ನಿಟ್ಟಿನಲ್ಲಿ, ಶಾಲಾ ಹಂತದಲ್ಲಿ ಶಿಕ್ಷಕರು ಮತ್ತು ಎಸ್‌ಡಿಎಂಸಿ ಸಮಿತಿಗಳು ‘ಶಾಲೆಗೆ ಬನ್ನಿ ಶನಿವಾರ, ಸ್ವಚ್ಛಗೊಳಿಸೋಣ ಸರಸರ’ ಎಂಬ ಸ್ವಚ್ಛತಾ ಆಂದೋಲನವನ್ನು ಪ್ರಾರಂಭಿಸಲು ಇದು ಸಕಾಲ” ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ವೇದಿಕೆ, “ಇದೇ ಸಂದರ್ಭದಲ್ಲಿ ಶಿಕ್ಷಕರು-ಮಕ್ಕಳು ಬಳಸುವ ಶೌಚಾಲಯಗಳನ್ನು ಶಾಲೆಯ ಎಲ್ಲ ಶಿಕ್ಷಕರು ಹಾಗು ಮಕ್ಕಳು ಸೇರಿ ಸ್ವಚ್ಛಗೊಳಿಸುವುದು ಕರ್ತವ್ಯ ಎಂಬುದನ್ನು ಹಕ್ಕು-ಕರ್ತವ್ಯಗಳ ಜೊತೆ ಜೊತೆಗೆ ನೋಡಬೇಕು” ಎಂದರು.
“ನಮ್ಮ ಶಾಲೆಗಳಲ್ಲಿ ಪ್ರಾರಂಭವಾಗಬೇಕಿರುವುದು ‘ಸಾಮೂಹಿಕ – ಸಮುದಾಯ ಬೆಂಬಲಿತ ಸ್ವಚ್ಛತಾ ಪದ್ಧತಿ’. ಸರಿ ಸುಮಾರು 30-40 ವರ್ಷಗಳಿಂದ ನಾವು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಈ ಕೆಲಸಕ್ಕೆ ಸಹಾಯಕರು, ಜವಾನರು ಮತ್ತು ಸ್ಕ್ಯಾವೆಂಜರ್ಸ್ ನೇಮಿಸಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೆ, ಅದು ಸಾಧ್ಯವಾಗಿಲ್ಲ. ಹೀಗಾಗಿ, ಈ ಸಮಸ್ಯೆಗಳಿಗೆ ಪರಿಹಾರವನ್ನು ದಿನನಿತ್ಯ ಮೂತ್ರಾಲಯ-ಶೌಚಾಲಯಗಳನ್ನು ಬಳಸುವ ಶಿಕ್ಷಕರು ಮತ್ತು ಮಕ್ಕಳು ಎಸ್ ಡಿಎಂಸಿ, ಮಕ್ಕಳ ಪಾಲಕರು ಸಮುದಾಯ, ಸ್ಥಳೀಯ ಸರ್ಕಾರ ಹಾಗು ಸರ್ಕಾರದ ಬೆಂಬಲದೊಂದಿಗೆ ಕಂಡುಕೊಳ್ಳಬೇಕಿದೆ. ಸ್ವಚ್ಛತೆಗೆ ಒಂದು ಜಾತಿ, ವರ್ಗ, ಧರ್ಮ ಮತ್ತು ಲಿಂಗದ ಮಕ್ಕಳನ್ನು ಬಳಸಿಕೊಳ್ಳುವುದು ತಾರತಮ್ಯ ಮತ್ತು ಅಪರಾಧ ಎಂದು ಹೇಳುತ್ತಲೇ, ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಹಾಗು ಎಸ್ ಡಿ ಎಂಸಿ ಸದಸ್ಯರು ಯಾವುದೇ ತಾರತಮ್ಯವಿಲ್ಲದೆ ಸರದಿ ಅಥವಾ ಪಾಳಿ ಪದ್ಧತಿಯಲ್ಲಿ ಸ್ವಚ್ಛಗೊಳಿಸುವ ವ್ಯವಸ್ಥೆ ರೂಪಿಸುವುದು ಸೂಕ್ತ” ಎಂದು ಹೇಳಿದೆ.
“ಇಂತಹ ಸಮಸ್ಯೆಗಳ ಧೀರ್ಘಕಾಲಿಕ ಪರಿಹಾರಕ್ಕೆ ನಾವು ಗಾಂಧೀಜಿಯವರ ಚಿಂತನೆ ಮತ್ತು ಅವರು ತೋರಿಸಿದ ಮಾರ್ಗದಲ್ಲಿ ನಡೆಯಬೇಕಿದೆ. ಗಾಂಧಿ ಸ್ವಚ್ಛತೆಯಲ್ಲಿ ದೇವರನ್ನು ಕಂಡವರು. ನಮ್ಮ ಮೂತ್ರಾಲಯ-ಶೌಚಾಲಯಗಳ ಸ್ವಚ್ಛತೆಗೆ ನಾವೇ ಸ್ಕ್ಯಾವೆಂಜರ್ಸ್ ಆಗಬೇಕೆಂಬ ಸಂದೇಶ ನೀಡಿದವರು. ಸಂದೇಶ ನೀಡಿದ್ದು ಮಾತ್ರವಲ್ಲದೆ ಸಾಮೂಹಿಕ ಮತ್ತು ಸಾಮುದಾಯಿಕವಾಗಿ ಮಾಡಿ ತೋರಿಸಿದರು” ಎಂದು ಹೇಳಿದರು.
“ದೀರ್ಘ ಕಾಲದ ವ್ಯವಸ್ಥಿತ ಯೋಜನೆಯಾಗಿ ಸರ್ಕಾರ ಮತ್ತು ಸ್ಥಳೀಯ ಸರ್ಕಾರಗಳು, ಎಲ್ಲ ಸರ್ಕಾರಿ ಶಾಲಾ ಕಾಲೇಜುಗಳ ಶೌಚಾಲಯಗಳಲ್ಲಿ ಉತ್ತಮ ಗುಣಮಟ್ಟದ ಅತ್ಯಾಧುನಿಕ ಟಾಯ್ಲೆಟ್ ಫ್ಲಶ್ ವ್ಯವಸ್ಥೆಯ ವಿನ್ಯಾಸಗೊಳಿಸಲು ಕ್ರಮವಹಿಸಬೇಕು. ಈ ಬಗೆಯ ಫ್ಲಶ್ ವಿನ್ಯಾಸಗಳು ನೀರಿನ ಉಳಿತಾಯ ಹಾಗು ಶುಚಿತ್ವ ಮತ್ತು ಸ್ವಚ್ಛತೆಯನ್ನು ಕಾಪಾಡುವುದರ ಜೊತೆಗೆ ನಿರ್ವಹಣೆಯನ್ನು ಸುಲಭ ಮತ್ತು ಸರಳೀಕರಣಗೊಳಿಸುತ್ತದೆ. ಇದನ್ನು ನಾವು ಈಗಾಗಲೇ ನಮ್ಮ ಮನೆಗಳಲ್ಲಿ ಮತ್ತು ಕಚೇರಿಗಳಲ್ಲಿ ಕಂಡುಕೊಂಡಿದ್ದೇವೆ.
ತಕ್ಷಣದ ಪರಿಹಾರವಾಗಿ, ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳ ಶೌಚಾಲಯಗಳಲ್ಲಿ 24*7 ನಿರಂತರ ನೀರು ಸರಬರಾಜು ವ್ಯವಸ್ಥೆಯನ್ನು ಕಲ್ಪಿಸಲು ಕಾರ್ಯಕ್ರಮ ರೂಪಿಸಬೇಕು. ತಕ್ಷಣ ಸಾಧ್ಯವಾಗದಿದ್ದಲ್ಲಿ, ಕನಿಷ್ಠ ಶೌಚಾಲಯಗಳ ಬಳಿ ನೀರಿನ ಶೇಖರಿಸುವ ಟ್ಯಾಂಕಗಳನ್ನು ನಿರ್ಮಿಸುವ ಮೂಲಕ ನೀರನ್ನು ತುಂಬಿಸಿಡುವ ವ್ಯವಸ್ಥೆಯನ್ನು ಕಲ್ಪಿಸಬೇಕು. ಈ ಕಾರ್ಯಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕಾವಾಗಿ ಬಳಸಿಕೊಳ್ಳಬೇಕು.
ಶಾಲೆಗಳು, ಶಿಕ್ಷಕರು ಮತ್ತು ಹಿರಿಯ ವಿದ್ಯಾರ್ಥಿಗಳನ್ನೊಳಗೊಂಡ (5 ಮತ್ತು 5ನೇ ತರಗತಿಯ ಮೇಲ್ಪಟ್ಟ) ಸ್ವಚ್ಛತಾ ತಂಡಗಳನ್ನು ರಚಿಸಿ, ‘ಶಾಲೆಗೆ ಬನ್ನಿ ಶನಿವಾರ, ಸ್ವಚ್ಛಗೊಳಿಸೋಣ ಸರಸರ’ ಎಂಬ ಸ್ವಚ್ಛತಾ ಆಂದೋಲನವನ್ನು ಎಸ್‌ಡಿಎಂಸಿ, ಪಾಲಕರು ಮತ್ತು ಸಮುದಾಯದ ಬೆಂಬಲದೊಂದಿಗೆ ಪ್ರತಿ ಶಾಲೆಯಲ್ಲಿ ಸರದಿ ಅಥವಾ ಪಾಳಿ ಪದ್ಧತಿಯಲ್ಲಿ ಪ್ರಾರಂಭಿಸಬೇಕು. ಪ್ರತಿ ಶನಿವಾರ ಕನಿಷ್ಠ ಒಂದು ಗಂಟೆಯನ್ನು ಈ ಕೆಲಸಕ್ಕೆ ಮೀಸಲಿಟ್ಟು, ಶೌಚಾಲಯಗಳ ಸ್ವಚ್ಛತೆಯ ಜೊತೆ ಜೊತೆಗೆ ಶಾಲಾ ಸ್ವಚ್ಛತೆಯನ್ನು ಕಲಿಕೆಯ ಭಾಗವಾಗಿ ಮಾಡಬೇಕು.
ಗ್ರಾಮ ಅಥವಾ ವಾರ್ಡಿನ ಯಾವುದೇ ಸದಸ್ಯರು ಸ್ವಯಂ ಪ್ರೇರಿತವಾಗಿ ಈ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುವಂತಾಗಬೇಕು. ಇದು ಪ್ರಚಾರದ ಕಾರ್ಯಕ್ರಮವಾಗದೆ, ಶಾಲಾ ನಿರ್ವಹಣೆಯ ಅವಿಭಾಜ್ಯ ಅಂಗವಾಗಬೇಕು.
ಈ ಸುದ್ದಿ ಓದಿದ್ದೀರಾ? ಹೊಸ ವರ್ಷದ ಸಂಭ್ರಮ | ತಡರಾತ್ರಿ 2:15 ರವರೆಗೂ ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ
ಅಗತ್ಯ ಸಾಮಗ್ರಿ-ಪರಿಕರಗಳನ್ನು, ಉದಾಹರಣೆಗೆ, ಟಾಯ್ಲೆಟ್ ಬ್ರಶ್, ಪೊರಕೆ, ಹ್ಯಾಂಡ್ ಬ್ರೌಸ್, ಫಿನಾಯಿಲ್, ಹಾರ್ಪಿಕ್, ಆಸಿಡ್ ಇತ್ಯಾದಿಗಳನ್ನು ಸಾಕಷ್ಟು ಅಗತ್ಯ ಪ್ರಮಾಣದಲ್ಲಿ ಖರೀದಿಸಲು, ಸರ್ಕಾರ ಶಾಲಾ ಅನುದಾನದ ಮೊತ್ತವನ್ನು ಹೆಚ್ಚಿಸಬೇಕು. ಶನಿವಾರದ ಸ್ವಚ್ಛತಾ ದಿನದಂದು ಶಿಕ್ಷಕರು ಮತ್ತು ಮಕ್ಕಳಿಗೆ ಸಹಾಯ ಮಾಡುಲು ಅರ್ಧದಿನದ ಕೆಲಸವನ್ನು ಎಂಜಿಎನ್‌ಆರ್ ಇಜಿ ಅಡಿಯಲ್ಲಿ ಪರಿಗಣಿಸಿ ಎರಡು ಅಥವಾ ಮೂರು ಸಹಾಯಕ ಸಿಬ್ಬಂದಿಯನ್ನು ಒದಗಿಸಲು ಕ್ರಮವಹಿಸಬೇಕು.
ಕೀಳು ಮಟ್ಟದ ಕೆಲವೆಂದು ಭಾವಿಸದೆ ಸ್ವಚ್ಛತೆ ಜೀವನದ ಅವಿಭಾಜ್ಯ ಅಂಗ ಮತ್ತು ಎಲ್ಲರೂ ಪಾಲ್ಗೊಳ್ಳಬೇಕಾದ ಕಡ್ಡಾಯ ಕೆಲಸವೆಂಬ ಜಾಗೃತಿ ಮೂಡಿಸಲು ಮತ್ತು ಶಿಕ್ಷಕರು, ಮಕ್ಕಳು ಹಾಗೂ ಜನಸಾಮಾನ್ಯರು ಸ್ವಯಂ ಪ್ರೇರಣೆಯಿಂದ ಈ ಕೆಲಸಗಳಲ್ಲಿ ಹೆಚ್ಚು ಭಾಗವಹಿಸುವಂತೆ ಉತ್ತೇಜಿಸಲು ಶನಿವಾರದ ಶಾಲಾ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಯಾದಿಯಾಗಿ, ಸಚಿವರು, ಜನ ಪ್ರತಿನಿಧಿಗಳು, ಸೆಲೆಬ್ರೆಟಿಗಳು, ಸಮಾಜದ ಪ್ರತಿಷ್ಠಿತ ವ್ಯಕ್ತಿಗಳು, ಸಮಾಜದಲ್ಲಿ ಗಣ್ಯರೆಂದು ಗುರುತಿಸಿರುವ ವ್ಯಕ್ತಿಗಳು ಮತ್ತು ಶಾಲಾ ಶಿಕ್ಷಣ ಹಾಗು ಸಾಕ್ಷರತೆ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ಶಾಲೆಗೆ ಭೇಟಿ ನೀಡಿ ಶಿಕ್ಷಕರ ಮಕ್ಕಳ ಜೊತೆಗೆ ಸ್ವಚ್ಛತಾ ಕೆಲಸದಲ್ಲಿ ಕೈಜೋಡಿಸಿ ಇದು ಸಾಮೂಹಿಕ ಕೆಲಸವೆಂದು ಹುರಿದುಂಬಿಸಬೇಕು.