ಇತ್ತೀಚಿಗೆ ಕರ್ನಾಟಕ ಕಾಂಗ್ರೆಸ್ನಲ್ಲಿ ಇಬ್ಬರು ಮುಖ್ಯವಾದ ಮುಸ್ಲಿಂ ನಾಯಕರ ತಲೆದಂಡವಾಗಿದೆ. ಇಬ್ಬರ ವಿರುದ್ಧವು ಪಕ್ಷವಿರೋಧಿ ಚಟುವಟಿಕೆಯ ಕಾರಣವನ್ನು ಕೊಡಲಾಗಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿದ್ದ ನಸೀರ್ ಅಹ್ಮದ್ ಮತ್ತು ಎಂಎಲ್ಸಿ ಹಾಗೂ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದ ಅಬ್ದುಲ್ ಜಬ್ಬಾರ್ ಅವರನ್ನು, ಹುದ್ದೆಯಿಂದ ಕೆಳಗಿಳಿಸಲಾಗಿದೆ. ಜಬ್ಬಾರ್ ಅವರೇ ರಾಜೀನಾಮೆ ಕೊಟ್ಟಿದ್ದರೂ ಕೂಡ, ಕಾಂಗ್ರೆಸ್ ಪಕ್ಷ ಅವರ ಪ್ರಾಥಮಿಕ ಸದಸ್ಯತ್ವದಿಂದಲೂ ತೆಗೆದುಹಾಕಲಾಗಿದೆ.
ಈ ನಡುವೆ ಇಡೀ ಮುಸ್ಲಿಂ ಸಮುದಾಯಗಳ ಒಕ್ಕೂಟ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಡಾ. ನಾಸೀರ್ ಹುಸೇನ್ ಅವರಿಗೆ ಪತ್ರ ಬರೆದಿದೆ.
ಪತ್ರದಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯವನ್ನು ಬಳಸಿ ಬೀಸಾಡುವುದನ್ನು ನಿಲ್ಲಿಸಬೇಕು ಅಂತ ಹೇಳಲಾಗಿದೆ. “ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಹಂಚಿಕೆ ಹಾಗೂ ಮತದಾನದ ಬಳಿಕ ಕಾಂಗ್ರೆಸ್ ನಡೆದುಕೊಂಡಿರುವ ರೀತಿಯಿಂದ ರಾಜ್ಯದ ಮುಸ್ಲಿಂ ಸಮುದಾಯಕ್ಕೆ ತೀವ್ರ ಆಘಾತವಾಗಿದೆ. ನಾವು ಇಷ್ಟು ಗಟ್ಟಿಯಾಗಿ ಬೆಂಬಲಿಸಿದ ಪಕ್ಷ ನಮ್ಮೊಂದಿಗೆ ಇಷ್ಟು ಕೆಟ್ಟದಾಗಿ ಹೇಗೆ ನಡೆದುಕೊಳ್ಳು ಸಾಧ್ಯ ಎಂಬ ಪ್ರಶ್ನೆ ರಾಜ್ಯದ ಮುಸಲ್ಮಾರನ್ನು ಕಾಡುತ್ತಿದೆ. ನಾವು ಕಾಂಗ್ರೆಸ್ಗೆ ಬೇಷರತ್ತಾಗಿ ಬೆಂಬಲ ನೀಡಿದ್ದೇ ನಮ್ಮ ಅಪರಾಧವೇ ಎಂಬ ಭಾವನೆ ಮುಸಲ್ಮಾರನರಲ್ಲಿ ಈಗ ಮನೆ ಮಾಡಿದೆ. ಹೀಗೇ ಮುಂದುವರೆದರೆ ನಾವೂ ನಮ್ಮ ರಾಜಕೀಯ ಆಯ್ಕೆಗಳನ್ನು ಮುಕ್ತವಾಗಿಡಬೇಕು ಎಂಬ ಆಲೋಚನೆ ಈಗ ಸಮುದಾಯದಲ್ಲಿ ತೀವ್ರವಾಗಿ ಬೆಳೆಯುತ್ತಿದೆ“ ಎಂದು ಎಚ್ಚರಿಕೆಯ ಸಂದೇಶವನ್ನು ಕೊಟ್ಟಿದ್ದಾರೆ.
“ಮೊದಲು ನ್ಯಾಯವಾಗಿ ನೀಡಲೇಬೇಕಾಗಿದ್ದ ಟಿಕೆಟ್ ಅನ್ನು ನಿರಾಕರಿಸಲಾಯಿತು. ಹಾಗೆ ನಿರಾಕರಿಸುವಾಗ ಮುಸ್ಲಿಂ ಸಮುದಾಯದ ನ್ಯಾಯಯುತ ಬೇಡಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಯ್ತು. ಅಷ್ಟೇ ಅಲ್ಲ ಟಿಕೆಟ್ ಕೇಳಿದ್ದೇ ಅಪರಾಧ ಎಂಬಂತೆ ಕಾಂಗ್ರೆಸ್ ವರಿಷ್ಠರು ಮುಸ್ಲಿಂ ಸಮುದಾಯದ ಮುಖಂಡರ ಜೊತೆ ನಡೆದುಕೊಂಡರು. ಇಷ್ಟು ಸಾಲದ್ದಕ್ಕೆ, ಉಪಚುನಾವಣೆಗೆ ಮತದಾನ ಮುಗಿದ ಕೂಡಲೇ ಮುಸ್ಲಿಂ ಸಮುದಾಯದ ಜೊತೆ ಹಗೆ ಸಾಧಿಸುವ ಹಾಗೆ ಕಾಂಗ್ರೆಸ್ ಪಕ್ಷ ನಡೆದುಕೊಂಡ್ತು. ದಶಕಗಳಿಂದ ಪಕ್ಷಕ್ಕಾಗಿ ದುಡಿದ ಹಿರಿಯ ಮುಸ್ಲಿಂ ನಾಯಕರನ್ನು ಯಾವುದೇ ಸೂಕ್ತ ಕಾರಣ ನೀಡದೆ, ವಿವರಣೆಗೆ ಅವಕಾಶವನ್ನೂ ನೀಡದೆ ಏಕಾಏಕಿ ವಜಾ ಮಾಡಿ ಮನೆಗೆ ಕಳಿಸಲಾಯ್ತು. ಕಾಂಗ್ರೆಸ್ ಪಕ್ಷದ ಈ ನಡೆ ರಾಜ್ಯದ ಮುಸ್ಲಿಂ ಸಮುದಾಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಟಿಕೆಟ್ ನೀಡಲಿಲ್ಲ ಎಂಬ ನೋವಿಗೆ ಸಮಾಧಾನ ಮಾಡಿ ಮದ್ದೆರೆಯಬೇಕಾಗಿದ್ದ ಕಾಂಗ್ರೆಸ್, ಸಮುದಾಯದ ಜೊತೆ ಅತ್ಯಂತ ಸಂವೇದನಾರಹಿತವಾಗಿ ನಡೆದುಕೊಂಡಿದೆ.
ಈ ಹಿಂದೆ ನೇರವಾಗಿಯೇ ಪಕ್ಷ ವಿರೋಧಿ ಕೆಲಸ ಮಾಡಿದ್ದ ಪ್ರಬಲ ಸಮುದಾಯಗಳ ಮುಖಂಡರ ವಿರುದ್ಧ ಕಾಂಗ್ರೆಸ್ ಪಕ್ಷ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈಗ ಪಕ್ಷ ನಿಷ್ಠ ಮುಸ್ಲಿಂ ನಾಯಕರ ವಿರುದ್ಧ ಇಷ್ಟು ತರಾತುರಿಯಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಂಡಿರುವುದನ್ನು ನೋಡಿದರೆ ಕಾಂಗ್ರೆಸ್ ನಲ್ಲಿ ಶಿಸ್ತುಕ್ರಮ ಎಂಬುದು ಕೇವಲ ಒಂದು ಸಮುದಾಯಕ್ಕೆ, ಅದರಲ್ಲೂ ಇಷ್ಟು ದಿವಸ ನಿಮಗೆ ಬೆಂಬಲಿಸಿಕೊಂಡು ಬಂದ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೀಮಿತವೇ. ಇದರ ಜೊತೆಗೆ ಕಾಂಗ್ರೆಸ್ ನ ಮುಸ್ಲಿಂ ಸಮುದಾಯದ ನಾಯಕರ ವಿರುದ್ಧ ಪಕ್ಷದಲ್ಲಿರುವ ಬೇರೆ ಮುಸ್ಲಿಂ ನಾಯಕರನ್ನೇ ಎತ್ತಿ ಕಟ್ಟುವ ತೀರಾ ಕೆಟ್ಟ ಪ್ರಯತ್ನವೂ ಕಾಂಗ್ರೆಸ್ ವರಿಷ್ಠರಿಂದ ನಡೆಯುತ್ತಿದೆದೆ. ಇಂತಹ ಹೀನ ಪರಿಸ್ಥಿತಿಗೆ ಕಾಂಗ್ರೆಸ್ ಬರಬಾರದಿತ್ತು“ಎಂದು ಬೇಸರ ವ್ಯಕ್ತಪಡಿಸಿದೆ.
“ಇದು ಕೇವಲ ಕೆಲವು ವ್ಯಕ್ತಿಗಳ ವಿಚಾರವಲ್ಲ. ಇಡೀ ಮುಸ್ಲಿಂ ಸಮುದಾಯದ ಘನತೆಯ ವಿಷಯ. ಸಮುದಾಯದ ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುವುದು ಸರಿಯಲ್ಲ. ಇದನ್ನು ಕೇವಲ ರಾಜಕೀಯ ನಿರ್ಧಾರವೆಂದು ಸಮರ್ಥಿಸಲು ಸಾಧ್ಯವಿಲ್ಲ. ಸುಮಾರು 90% ಮತದಾನ ಮಾಡಿರುವ ಮುಸ್ಲಿಂ ಸಮುದಾಯದ ಜೊತೆ ಕಾಂಗ್ರೆಸ್ ಪಕ್ಷದ ಈ ತೀವ್ರ ತಾರತಮ್ಯ ನೀತಿಯನ್ನು ಖಂಡಿಸುತ್ತೇವೆ” ಎಂದು ಹೇಳಲಾಗಿದೆ.
“ಮುಸಲ್ಮಾನರಿಗೆ ಕಾಂಗ್ರೆಸ್ ಕೊಟ್ಟಷ್ಟು ರಕ್ಷಣೆ ಬೇರೆ ಯಾವುದೇ ಪಕ್ಷ ಕೊಟ್ಟಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಇದು ಅತ್ಯಂತ ಖಂಡನೀಯವಾಗಿದೆ. ಅವರನ್ನು ಸೇರಿದಂತೆ ಎಲ್ಲರಿಗೂ ರಕ್ಷಣೆಯಾಗಿ ನಿಂತಿರುವುದು ಈ ದೇಶದ ಸಂವಿಧಾನ ಮತ್ತು ಅದು ಎಲ್ಲರ ಹಕ್ಕು. ನಾವು ಬದುಕುವ ಹಕ್ಕನ್ನು ಯಾವುದೇ ಪಕ್ಷ ಯಾವುದೇ ಸಮುದಾಯಕ್ಕೆ ನೀಡಿರುವ ಕೊಡುಗೆಯಲ್ಲ. ಅದನ್ನು ಒಂದು ಸರ್ಕಾರವಾಗಿ ನೀಡುವುದು ಅದರ ಕರ್ತವ್ಯವೇ ಹೊರತು, ಅದು ಉಪಕಾರ ಅಥವಾ ಏನೋ ಸಾಧನೆ ಮಾಡಿದಂತೆ ಅಲ್ಲ. ಮತ ಹಾಕಿ ಗೆಲ್ಲಿಸಿದ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಅಧಿಕಾರದಲ್ಲಿ ಸರಿಯಾದ ಪಾಲು ನೀಡಬೇಕು, ನೀತಿ ನಿರೂಪಣೆಯಲ್ಲಿ ಪಾತ್ರ ನೀಡಬೇಕು, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಬೇಕು. ಅದ್ಯಾವುದನ್ನೂ ಮಾಡದೆ, ಬೆಂಬಲಿಸಿ ಅಧಿಕಾರದ ಶಕ್ತಿ ನೀಡಿದ ಸಮುದಾಯವನ್ನು ಆಟಕ್ಕುಂಟು ಲೆಕ್ಕಕಿಲ್ಲ ಎಂಬಂತೆ ನಡೆಸಿಕೊಳ್ಳುವುದು ಘೋರ ಅನ್ಯಾಯದ ಮನಸ್ಥಿತಿ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
“ಜಾತ್ಯತೀತ ಸರಕಾರ ಬರಬೇಕು ಎಂದು ಬೆಂಬಲ ನೀಡಿದ್ದನ್ನೇ ಮುಸ್ಲಿಮರ ದೌರ್ಬಲ್ಯ ಅವರಿಗೆ ಬೇರೆ ಆಯ್ಕೆಗಳೇ ಇಲ್ಲ ಎಂದು ಕಾಂಗ್ರೆಸ್ ತಿಳಿದುಕೊಂಡರೆ ಅದು ಮುಂದಿನ ದಿನಗಳಲ್ಲಿ ಪಕ್ಷವು ರಾಜಕೀಯವಾಗಿ ದೊಡ್ಡ ನಷ್ಟವನ್ನು ಅನುಭವಿಸುತ್ತದೆ. ಕಾಂಗ್ರೆಸ್ ಪಕ್ಷ ಹಾಗೂ ಸರಕಾರ ಈ ಬಗ್ಗೆ ಕೂಡಲೇ ಗಮನ ಹರಿಸಿ ಮುಸ್ಲಿಂ ಸಮುದಾಯದ ಭಾವನೆಗಳನ್ನು ಅರ್ಥ ಮಾಡಿಕೊಂಡು ತನ್ನ ತಪ್ಪುಗಳನ್ನು ತಿದ್ದಿಕೊಳ್ಳುತ್ತದೆ ಎಂಬ ಭರವಸೆ ಇದೆ. 2023ರ ಚುನಾವಣಾ ಸಂದರ್ಭದಲ್ಲಿ ಸಮುದಾಯಕ್ಕೆ ನೀಡಲಾದ ಎಲ್ಲ ಭರವಸೆಗಳನ್ನು ಈಡೇರಿಸಬೇಕು. ಸರಕಾರದಲ್ಲಿ, ಪಕ್ಷದಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಮುಖ ಹುದ್ದೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಸಮುದಾಯಕ್ಕೆ ಆಗಿರುವ ನೋವಿಗೆ ಕಾಂಗ್ರೆಸ್ ಪಕ್ಷ ಕೂಡಲೇ ಸ್ಪಂದಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ರಾಜ್ಯ ಮುಸ್ಲಿಂ ಸಂಘಟನೆಗಳ ಒಕ್ಕೂಟ ತನ್ನ ಪತ್ರದಲ್ಲಿ ಆಗ್ರಹಿಸಿದೆ.






