ಇನ್ನೇನು ಬೇಸಿಗೆ ಕಳೆದು ಮಳೆಗಾಲ ಹತ್ತಿರ ಬರುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮುಂಗಾರು ಮಳೆಗೆ ಸಜ್ಜಾಗುತ್ತಿದ್ದು, ಮೇ 30ರೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪಾಲಿಕೆಯ ಮುಂಗಾರು ಪೂರ್ವ ಸಿದ್ಧತೆ ಕುರಿತು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, “ಮಳೆಗಾಲ ಮುಗಿಯುವವರೆಗೆ ಪ್ರತಿ ತಿಂಗಳ ಮೂರು ವಾರಕ್ಕೊಮ್ಮೆ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಎಸ್‌ಡಬ್ಲ್ಯೂಡಿ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಹೇಳಿದ್ದಾರೆ.
“ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂದಿನ ಕೆಲ ದಿನಗಳಲ್ಲಿ ಮುಂಗಾರು ಪೂರ್ವ ಮಳೆ ಸುರಿಯಲಿದೆ. ಈ ಮಳೆಯಿಂದಾಗಿ ನಗರದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುವುದನ್ನು ತಪ್ಪಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಮುಖವಾಗಿ ಚರಂಡಿ, ರಾಜಕಾಲುವೆಗಳಲ್ಲಿ ಶೇಖರಣೆಯಾಗಿರುವ ತ್ಯಾಜ್ಯ, ಹೂಳನ್ನು ತೆಗೆಯಲಾಗುತ್ತಿದೆ. ಅದಕ್ಕಾಗಿ ವಲಯ ಅಧಿಕಾರಿಗಳಿಗೆ ಮೇ 10ರೊಳಗೆ ಚರಂಡಿ, ರಾಜಕಾಲುವೆ ಸ್ವಚ್ಛಗೊಳಿಸುವಂತೆ ಸೂಚಿಸಲಾಗಿದೆ” ಎಂದು ಹೇಳಿದ್ದಾರೆ.
“ಮನೆ ನಿರ್ಮಾಣಕ್ಕಾಗಿ ರಸ್ತೆಬದಿಯಲ್ಲಿ ಬಿಸಾಡಿರುವ ಅವಶೇಷಗಳು ಮತ್ತು ಇತರ ವಸ್ತುಗಳನ್ನು ತ್ವರಿತವಾಗಿ ನಾಗರಿಕರು ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೇ, ಇದು ನೀರಿನ ಹರಿವಿಗೆ ತೊಂದರೆ ಉಂಟು ಮಾಡುತ್ತದೆ. ಅಲ್ಲದೇ, ರಸ್ತೆ ಬದಿ ಶೇಖರಣೆಯಾಗಿರುವ ತ್ಯಾಜ್ಯ ಮತ್ತು ಕಟ್ಟಡ ತ್ಯಾಜ್ಯವನ್ನು ಕೂಡಲೇ ತೆರವು ಮಾಡುವಂತೆಯೂ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಜತೆಗೆ ರಸ್ತೆ ಬದಿ ಕಟ್ಟಡ ತ್ಯಾಜ್ಯ ಸುರಿಯುವವರನ್ನು ಪತ್ತೆ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಹೇಳಲಾಗಿದೆ” ಎಂದು ಹೇಳಿದ್ದಾರೆ.
“ವಲಯ ಆಯುಕ್ತರು, ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆ, ಬಿಬಿಎಂಪಿ ಅರಣ್ಯ ಕೋಶ, ಬಿಡಬ್ಲ್ಯೂಎಸ್ಎಸ್ಬಿ ಹಾಗೂ ಬೆಸ್ಕಾಂ ಅಧಿಕಾರಿಗಳು ಸಭೆ ನಡೆಸಿ, ಮಳೆಗಾಲದಲ್ಲಿ ದೂರುಗಳನ್ನು ಪರಿಹರಿಸಲು 63 ಉಪವಿಭಾಗಗಳಲ್ಲಿ ವಾಟ್ಸಾಆಪ್ ಗ್ರೌಂಡ್ ರಚಿಸಲಾಗಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆಸ್ಕಾಂ ಅಧಿಕಾರಿಗಳಿಗೆ ಬೆದರಿಕೆ : ದೂರು ದಾಖಲು
“ನಾವು ಎಲ್ಲ ಇಲಾಖೆಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡುತ್ತಿದ್ದೇವೆ. ಪ್ರತಿ ಮೂರು ತಿಂಗಳಿಗೊಮ್ಮೆ ಎಸ್‌ಡಬ್ಲೂಡಿಯ 859 ಕಿಮೀ ಉದ್ದದ ಮಳೆನೀರಿನ ಚರಂಡಿಗಳ ಸ್ವಚ್ಛ ಮಾಡಲಾಗುತ್ತಿದೆ. ಮೇ 3ರವರೆಗೆ ಶೇ.75ರಷ್ಟು ಸ್ವಚ್ಛತಾ ಕಾರ್ಯ ನಡೆದಿದ್ದು, ಇನ್ನುಳಿದ ಕಾಮಗಾರಿಯನ್ನು ಒಂದು ವಾರದಲ್ಲಿ ಮಾಡಲಾಗುವುದು” ಎಂದಿದ್ದಾರೆ.