ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇವೆ. ಇದೀಗ, ಕಂಪನಿ ಷೇರು ಮತ್ತು ಐಪಿಒಗಳನ್ನು ರಿಯಾಯಿತಿ ದರದಲ್ಲಿ ನೀಡುವುದಾಗಿ ಫೇಸ್‌ಬುಕ್‌ನಲ್ಲಿ ಪರಿಚಯವಾದವರನ್ನು ನಂಬಿದ ಉದ್ಯಮಿಯೊಬ್ಬರು ಬರೋಬ್ಬರಿ ₹6.01 ಕೋಟಿ ಕಳೆದುಕೊಂಡ ಘಟನೆ ನಡೆದಿದೆ.
ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಗೋಲ್ಡ್ಮನ್ ಸ್ಯಾಚ್ಸ್ ಇಕ್ವಿಟಿ ಅಸೆಟ್ ಮ್ಯಾನೇಜ್ಮೆಂಟ್ ಗ್ರೂಪ್ – 109, EQT ಕ್ಲಬ್ Q92 ಮತ್ತು ಸ್ಕೈರಿಮ್ ಕ್ಯಾಪಿಟಲ್-ಎಮಿಲಿ ಕುನಾಲ್ ಕಂಪನಿಯ ಪ್ರತಿನಿಧಿಗಳೆಂದು ಫೇಸ್‌ಬುಕ್ ಮೂಲಕ 72 ವರ್ಷದ ದೂರದಾರ ಉದ್ಯಮಿಗೆ ಆರೋಪಿಗಳು ಪರಿಚಯವಾಗುತ್ತಾರೆ.
72 ವರ್ಷದ ಉದ್ಯಮಿಗೆ ನಾನಾ ಕಂಪನಿಗಳ ಷೇರುಗಳು ಹಾಗೂ ಐಪಿಒಗಳನ್ನು ರಿಯಾಯಿತಿ ದರದಲ್ಲಿ ಕೊಡುವುದಾಗಿ ನಂಬಿಸಿದ್ದಾರೆ. ಫೇಸ್‌ಬುಕ್ ನಂತರ ವಾಟ್ಸ್‌ಆಪ್‌ನಲ್ಲಿ ಸಂಪರ್ಕದಲ್ಲಿದ್ದ ಆರೋಪಿಗಳು ಫೆಬ್ರುವರಿ 8 ರವರೆಗೆ ಹಂತ ಹಂತವಾಗಿ ₹6.01 ಕೋಟಿ ವರ್ಗಾವಣೆ ಮಾಡಿಕೊಂಡಿದ್ದಾರೆ.
“ಕೇರಳದ ಹೂಡಿಕೆದಾರರೊಬ್ಬರು ಈ ಕಂಪನಿಗಳ ವಿರುದ್ಧ ದೂರು ಸಲ್ಲಿಸಿರುವುದು ತಿಳಿದು ಬಂದಾಗ ಇದು ವಂಚನೆಯ ಜಾಲ ಎಂದು ಅನುಮಾನಗೊಂಡಿದ್ದಾರೆ. ಬಳಿಕ, ಉದ್ಯಮಿ ಆರೋಪಿಗಳಿಗೆ ತಮ್ಮ ಹಣ ವಾಪಸ್ ಮಾಡುವಂತೆ ಕೇಳಿದ್ದಾರೆ. ಆರೋಪಿಗಳು ಹಣ ನೀಡದೇ, ವಿಳಂಬ ಮಾಡುತ್ತಿವೆ” ಎಂದು 72 ವರ್ಷದ ಉದ್ಯಮಿ ಠಾಣೆಗೆ ದೂರು ನೀಡಿದ್ದಾರೆ.
“ಆರೋಪಿಗಳು ಉದ್ಯಮಿಗೆ ಷೇರುಗಳು, ಐಪಿಒಗಳನ್ನು ಕೊಡಿಸುವುದಾಗಿ ನಂಬಿಸಿ ಸುಮಾರು 26 ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ. ಪ್ರತಿನಿತ್ಯ ಈ ರೀತಿ ಷೇರು ಟ್ರೇಡಿಂಗ್ ಹೆಸರಿನಲ್ಲಿ ವಂಚಿಸುತ್ತಿರುವ 3ರಿಂದ 4 ಪ್ರಕರಣಗಳು ವರದಿಯಾಗುತ್ತಿವೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಪರಿಚಯವಾಗುವ ಆರೋಪಿಗಳು ವಾಟ್ಸ್‌ಆಪ್ ಗ್ರೂಪ್‌ಗಳಿಗೆ ಆಹ್ವಾನಿತರಾಗುತ್ತಾರೆ. ವಾಟ್ಸ್‌ಆಪ್ ಗ್ರೂಪ್‌ನಲ್ಲಿರುವ ಉಳಿದ ಸದಸ್ಯರು ಹೊಸದಾಗಿ ಬಂದವರನ್ನು ಹುರುದುಂಬಿಸುವ ಸಂದೇಶ ಕಳುಹಿಸುತ್ತಾರೆ. ಬೇರೆ ಬೇರೆ ಖಾತೆಗಳಿಗೆ ಹಣ ಹಾಕಿಸಿಕೊಂಡು ಲಾಭ ಬಂದಂತೆ ತೋರಿಸಿ ವಂಚಿಸುತ್ತಿದ್ದಾರೆ” ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯ; ಮಾರ್ಚ್ 4ರಿಂದ ಸಾರಿಗೆ ನೌಕರರ ಅಹೋರಾತ್ರಿ ಮುಷ್ಕರ
ಸದ್ಯ ಹಣ ಕಳೆದುಕೊಂಡಿರುವ ಉದ್ಯಮಿ ಆರೋಪಿ ಕಂಪನಿಗಳ ವಿರುದ್ಧ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.