ರಾಜ್ಯ ರಾಜ್ಯಧಾನಿ ಬೆಂಗಳೂರಿನಲ್ಲಿ ದಿನಕ್ಕೊಂದು ಸೈಬರ್ ವಂಚನೆ ಪ್ರಕರಣಗಳು ನಡೆಯುತ್ತಲೇ ಇವೆ. ಬೆಂಗಳೂರು ನಗರ ಪೊಲೀಸ್ ಇಲಾಖೆ ಯಾವುದೇ ರೀತಿಯ ಓಟಿಪಿ ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಿದ್ದರೂ ಸಹ ಇಂತಹ ಕೃತ್ಯಗಳಿಗೆ ಜನರು ಬಲಿಯಾಗುತ್ತಿದ್ದಾರೆ. ಇದೀಗ, ಓಎಲ್‌ಎಕ್ಸ್‌ನಲ್ಲಿ ₹15 ಸಾವಿರಕ್ಕೆ ತಮ್ಮ ಹಳೆಯ ಬೆಡ್ ಮಾರಾಟ ಮಾಡಲು ಹೋಗಿ ವ್ಯಕ್ತಿಯೊಬ್ಬರು ಬರೋಬ್ಬರಿ ₹68 ಲಕ್ಷ ಕಳೆದುಕೊಂಡ ಪ್ರಕರಣ ವರದಿಯಾಗಿದೆ.
ಸಂತೋಷ್ (ಹೆಸರು ಬದಲಾಯಿಸಲಾಗಿದೆ) ಹಣ ಕಳೆದುಕೊಂಡವರು. ಇವರು ಬೆಂಗಳೂರಿನ ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನೆಲೆಸಿದ್ದಾರೆ.
ಇವರು ತಮ್ಮ ಹಳೆಯ ಬೆಡ್ ಮಾರಾಟ ಮಾಡಲು ಮುಂದಾಗಿದ್ದರು. ಈ ಹಿನ್ನೆಲೆ, ಕೆಲವು ಫೋಟೋಗಳ ಸಮೇತ ₹15 ಸಾವಿರಕ್ಕೆ ಓಎಲ್‌ಎಕ್ಸ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದರು.
ಇದನ್ನು ಕಂಡ ರೋಹಿತ್ ಮಿಶ್ರಾ ಎಂಬ ವ್ಯಕ್ತಿ ಡಿಸೆಂಬರ್ 6ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ಸಂತೋಷ್ ಅವರಿಗೆ ಕರೆ ಮಾಡಿ ಬೆಡ್ ತೆಗೆದುಕೊಳ್ಳುವ ಬಗ್ಗೆ ವಿಚಾರಿಸುತ್ತಾನೆ ಹಾಗೂ ಇಂದಿರಾನಗರದಲ್ಲಿ ತನ್ನದು ಫರ್ನಿಚರ್ ಮಳಿಗೆ ಎಂದು ಹೇಳಿಕೊಂಡಿದ್ದಾನೆ.
ಬೆಡ್ ಖರೀದಿಸುತ್ತೇನೆ ಎಂದು ಹೇಳಿದ ಈತ ಡಿಜಿಟಲ್ ಮೂಲಕ ಹಣ ಪಾವತಿ ಮಾಡುತ್ತೇನೆ ಎಂದು ಹೇಳಿದ್ದಾನೆ. ಸ್ವಲ್ಪ ಸಮಯದ ಬಳಿಕ ಕರೆ ಮಾಡಿ ನಿಮಗೆ ಹಣ ಪಾವತಿಯಾಗುತ್ತಿಲ್ಲ. ಹಾಗಾಗಿ, ನಿಮ್ಮ ಖಾತೆಯಿಂದ ₹5 ಕಳಿಸಿ, ಅದಕ್ಕೆ ನಾನು ಹಣ ಹಾಕುತ್ತೇನೆ ಎಂದು ಹೇಳಿದ್ದಾನೆ.
ಇದನ್ನು ನಂಬಿದ ಸಂತೋಷ್ ಆತನಿಗೆ ₹5 ಕಳಿಸಿದ್ದಾನೆ. ಆ ಕಡೆಯಿಂದ ಆತ ಪ್ರತಿಯಾಗಿ ₹10 ಕಳಿಸಿದ್ದಾನೆ. ಮತ್ತೆ ಹಣ ಕಳಿಸಲು ತೊಂದರೆಯಾಗುತ್ತಿದೆ ಎಂದು ತಿಳಿಸಿದ ಆತ ₹5000 ಕಳಿಸುವಂತೆ ಕೇಳಿದ್ದಾನೆ. ಅದರಂತೆ ಹಣ ಕಳಿಸಿದ ಸಂತೋಷ್‌ನಿಗೆ ಆತ ಪ್ರತಿಯಾಗಿ ₹10,000 ಕಳಿಸಿದ್ದಾನೆ. ಬಳಿಕ ₹7500 ಕಳಿಸಿದರೆ ₹15,000 ಕಳಿಸುವುದಾಗಿ ಹೇಳಿದ್ದಾನೆ. ಅದರಂತೆ ಸಂತೋಷ್ ₹7,500 ಕಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಾಮಾನ್ಯ ಸ್ಥಿತಿಗೆ ಮರಳಿದ ಹಸಿರು ಮಾರ್ಗದ ಮೆಟ್ರೋ ಸಂಚಾರ
ಈ ವೇಳೆ ತಪ್ಪಿ ಸಂತೋಷ್ ₹30,000 ಸಾವಿರ ಕಳುಹಿಸಿದ್ದಾರೆ. ಈ ಬಗ್ಗೆ ಮಿಶ್ರಾಗೆ ತಿಳಿಸುತ್ತಾರೆ. ಇದಕ್ಕೆ ಮಿಶ್ರಾ ತಾನು ಕಳಿಸುವ ಲಿಂಕ್ ಕ್ಲಿಕ್ ಮಾಡಿ ತನಗೆ ಒಟಿಪಿ ಕಳಿಸಿ ಎಂದು ಸಂತೋಷ್‌ಗೆ ಹೇಳಿದ್ದಾನೆ.
ಅದನ್ನು ನಂಬಿದ ಸಂತೋಷ್ ಆತ ಹೇಳಿದಂತೆ ನಡೆದುಕೊಂಡಿದ್ದಾನೆ. ಇದಾದ ಬಳಿಕ ತಾಂತ್ರಿಕ ದೋಷ ಎಂಬ ನೆಪ ಹೇಳಿ ಮಿಶ್ರಾ ಲಿಂಕ್ ಕಳಿಸಿ ಒಟಿಪಿ ಕೇಳಿದ್ದಾನೆ. ಇದರಿಂದ ಸಂತೋಷ್ ಹಂತಹಂತವಾಗಿ ತನ್ನ ಖಾತೆಯಿಂದ ಹಣ ಕಳೆದುಕೊಂಡಿದ್ದಾರೆ.
ಮೊದಮೊದಲು ಸಾವಿರ ಲೆಕ್ಕದಲ್ಲಿ ಲಪಟಾಯಿಸುತ್ತಿದ್ದ ಹಣ, ಬಳಿಕ ಲಕ್ಷಾಂತರ ಹಣವನ್ನು ಆತ ಪೀಕಲು ಆರಂಭಿಸಿದ್ದನು. ಬಳಿಕ ಸಂತೋಷ್‌ಗೆ ತಾನು ಮೋಸ ಹೋಗಿರುವುದು ತಿಳಿದುಬಂದಿದೆ. ಅಂತಿಮವಾಗಿ ಸಂತೋಷ್ ₹68 ಲಕ್ಷ ಕಳೆದುಕೊಂಡಿದ್ದಾರೆ.
ಐಎಂಪಿಎಸ್ ಟ್ಪಾನ್ಸ್ ಫರ್ ಮೂಲಕ ಸೈಬರ್ ಕಳ್ಳ ಹಣ ಲಪಟಾಯಿಸುತ್ತಿದ್ದನು.