ಕುಟುಂಬದವರು ತೋರಿಸಿದ ಹುಡುಗನನ್ನು ಮದುವೆಯಾಗಲು ನಿರಾಕರಿಸಿದಕ್ಕೆ ಹೆತ್ತ ತಂದೆಯೇ 18 ವರ್ಷದ ಮಗಳನ್ನು ಹಗ್ಗದಿಂದ ಕತ್ತು ಬಿಗಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.
ಔರಾದ್ ತಾಲ್ಲೂಕಿನ ವಡಗಾಂವ ಸಮೀಪದ ಬರಗೇನ್ ತಾಂಡಾದಲ್ಲಿ ಶುಕ್ರವಾರ (ಫೆ.7) ರಂದು ಘಟನೆ ನಡೆದಿದ್ದು, ಮೋನಿಕಾ ಮೋತಿರಾಮ ಜಾಧವ (18) ಕೊಲೆಗೀಡಾದ ಯುವತಿ. ಮಗಳ ಕೊಂದ ತಂದೆ ಮೋತಿರಾಮ ಜಾಧವ ಆರೋಪಿಯಾಗಿದ್ದಾನೆ. ಕೊಲೆ ಆರೋಪಿ ಪತ್ತೆಗೆ ಪೊಲೀಸರ ಕಾರ್ಯಾಚರಣೆ ಮುಂದುವರೆದಿದೆ.
ʼಕುಟುಂಬಸ್ಥರು ತೋರಿಸಿದ ಯುವಕನೊಂದಿಗೆ ಮದುವೆ ಮಾಡಿಕೊಳ್ಳಲು ಯುವತಿಗೆ ಇಷ್ಟ ಇರಲಿಲ್ಲ. ತಾನು ಬೇರೊಬ್ಬ ಯುವಕನೊಂದಿಗೆ ಪ್ರೀತಿ ಮಾಡುತ್ತಿರುವುದಾಗಿ ಹೇಳಿದ್ದಳು. ಈ ಸಂಬಂಧ ಮಗಳೊಂದಿಗೆ ಜಗಳವಾಡಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೋಪದಲ್ಲಿ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಹಗ್ಗದಿಂದ ಕತ್ತು ಬಿಗಿದು ಮಗಳನ್ನು ಕೊಂದು ಪರಾರಿಯಾಗಿದ್ದಾನೆʼ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಭಾಲ್ಕಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಔರಾದ್ ಸಿಪಿಐ ರಘುವೀರ್ ಸಿಂಗ್ ಠಾಕೂರ್, ಸಂತಪೂರ ಪಿಎಸ್ಐ ನಂದಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸಂತಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.