ಮದ್ಯಪಾನ ಮಾಡಿ ಮನೆಗೆ ಬಂದ ಪತಿ, ಪತ್ನಿ ಚಿಕನ್ ಸಾರು ಮಾಡಿಲ್ಲವೆಂದು ಜಗಳ ಮಾಡಿ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದನು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಂಡತಿಯನ್ನು ಕೊಲೆ ಮಾಡಿದ್ದ ಅಪರಾಧಿಗೆ 6 ವರ್ಷ ಜೈಲು ಶಿಕ್ಷೆ ಹಾಗೂ ₹10,000 ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಕೆಂಚಪ್ಪ ಶಿಕ್ಷೆಗೊಳಗಾದ ಪತಿ. ಈತನು ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದ ಮಾಗನಹಳ್ಳಿ ನಿವಾಸಿ. ಶೀಲಾ ಹತ್ಯೆಯಾದ ಪತ್ನಿ. ಈ ಬಗ್ಗೆ ಶೀಲಾ ಅವರ ತಾಯಿ ಉಕ್ಕಡಗತ್ರಿ ಗುತ್ಯಮ್ಮ ಅವರು ಹರಿಹರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ತನಿಖಾಧಿಕಾರಿ ವೃತ್ತ ನಿರೀಕ್ಷಕ ಸತೀಶ ಯು, ಅವರು ತನಿಖೆ ಕೈಗೊಂಡು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜೆ.ವಿ ವಿಜಯಾನಂದ ಅವರು ಈ ಪ್ರಕರಣದ ವಿಚಾರಣೆ ನಡೆಸಿದ್ದರು.
ಈ ಪ್ರಕರಣದಲ್ಲಿ ದೂರುದಾರರ ಪರವಾಗಿ ಸರ್ಕಾರಿ ವಕೀಲ ಸತೀಶ ಕುಮಾರ್ ನ್ಯಾಯ ಮಂಡನೆ ಮಾಡಿದ್ದರು.
ಆರೋಪಿ ಕೆಂಚಪ್ಪ ತನ್ನ ಪತ್ನಿಯನ್ನು ಕೊಲೆ ಮಾಡಿದ ಆರೋಪ ಸಾಬೀತಾದ ಕಾರಣ, ಆರೋಪಿತನಿಗೆ 6 ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಏನಿದು ಪ್ರಕರಣ?
2022ರ ಜೂನ್ 8 ರಂದು ಸಂಜೆ 7 ಗಂಟೆ ಸುಮಾರಿಗೆ ಕೆಂಚಪ್ಪ ಕಂಠಪೂರ್ತಿ ಕುಡಿದು ಮನೆಗೆ ಬಂದು ಚಿಕನ್ ಸಾಂಬಾರು ಮಾಡಿಲ್ಲ ಎಂದು ಪತ್ನಿ ಶೀಲಾ ಅವರ ಜತೆಗೆ ಜಗಳವಾಡಿದ್ದಾನೆ. ಈ ವೇಳೆ, ಚಾಕು ತೆಗೆದುಕೊಂಡು ಶೀಲಾ ಅವರ ಎಡಭುಜಕ್ಕೆ ಚುಚ್ಚಿ ಕೊಲೆ ಮಾಡಿದ್ದನು.
ಈ ಸುದ್ದಿ ಓದಿದ್ದೀರಾ? ನಮ್ಮ ಮೆಟ್ರೋ | ಮತ್ತೊಂದು ಸುರಂಗ ಕೊರೆದು ಹೊರ ಬಂದ ಟಿಬಿಎಂ ತುಂಗಾ
2022ರ ಜೂನ್ 8ರಂದು ಶೀಲಾ ಅವರ ತಾಯಿ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು.
ಈ ಕೊಲೆ ಪ್ರಕರಣದಲ್ಲಿ ತನಿಖೆ ಮಾಡಿ ದೋಷಾರೋಪಣಾ ಪಟ್ಟಿ ತಯಾರಿಸಿ ಘನ ನ್ಯಾಯಾಲಯಕ್ಕೆ ಸಲ್ಲಿಸಿದ ಅಧಿಕಾರಿ ಸಿಬ್ಬಂದಿ ಹಾಗೂ ನ್ಯಾಯ ಮಂಡನೆ ಮಾಡಿದ ಸರ್ಕಾರಿ ವಕೀಲರ ಕಾರ್ಯವನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸಿಸಿದ್ದಾರೆ.