ಕಾಸ್ಮೋಪಾಲಿಟನ್ ನಗರದಲ್ಲಿ ಇದೀಗ ಕುಡಿಯುವ ನೀರಿಗೆ ತತ್ವಾರ ಆರಂಭವಾಗಿದೆ. ಈ ವರ್ಷ ವಾಡಿಕೆಯಂತೆ ಮಳೆಯಾಗದೇ ರಾಜ್ಯದಲ್ಲಿ ನೀರಿನ ಕೊರತೆ ಎದುರಾಗಿದೆ. ಬೇಸಿಗೆ ಕಾಲ ಆರಂಭಕ್ಕೂ ಒಂದು ತಿಂಗಳು ಮುನ್ನವೇ ರಾಜಧಾನಿಯಲ್ಲಿ ನೀರಿನ ಸಮಸ್ಯೆ ಎದುರಾಗಿತ್ತು. ಇದೀಗ, ಮಳೆಯಾಗದೇ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದಿದ್ದು, ಬೋರವೆಲ್‌ಗಳಲ್ಲಿ ನೀರಿಲ್ಲದಂತಾಗಿದೆ. ಜತೆಗೆ, ಜಲಾಶಯಗಳ ನೀರಿನ ಮಟ್ಟ ಕಡಿಮೆ ಇದ್ದು, ಕಾವೇರಿ ನೀರಿನ ಸಮಸ್ಯೆ ಕೂಡ ಎದುರಾಗಿದೆ. ಕಾವೇರಿ ನೀರನ್ನೇ ಅವಲಂಬಿಸಿರುವ ಬೆಂಗಳೂರಿನ ಜನತೆ ಇದೀಗ ನೀರಿಲ್ಲದೇ ಪರದಾಡುವಂತಾಗಿದೆ.
ಹೌದು, 1.30 ಕೋಟಿ ಜನಸಂಖ್ಯೆ ಇರುವ ನಗರದಲ್ಲಿ ಜಲಮಂಡಳಿ 10.37 ಲಕ್ಷ ನೀರಿನ ಸಂಪರ್ಕಗಳನ್ನು ಹೊಂದಿದೆ. ತಿಂಗಳಿಗೆ 1.58 ಟಿಎಂಸಿಯಂತೆ, ವಾರ್ಷಿಕ 19 ಟಿಎಂಸಿ ಕಾವೇರಿ ನೀರನ್ನು ನಗರಕ್ಕೆ ಹಂಚಿಕೆ ಮಾಡಲಾಗಿದೆ. ಜಲಮಂಡಳಿಯು ಪ್ರತಿನಿತ್ಯ 1,450 ಎಂಎಲ್‌ಡಿ ಕಾವೇರಿ ನೀರನ್ನು ಸರಬರಾಜು ಮಾಡುತ್ತಿದೆ. ಸದ್ಯ ಈ ಪ್ರಮಾಣದ ನೀರು ನಗರಕ್ಕೆ ವ್ಯವಸ್ಥಿತವಾಗಿ ಸರಬರಾಜು ಆಗುತ್ತಿದೆಯೇ ಎಂಬುದೇ ಪ್ರಶ್ನೆಯಾಗಿದೆ. ಏಕೆಂದರೆ, ಜಲಮಂಡಳಿ ನಿತ್ಯ 1,450 ಎಂಎಲ್‌ಡಿ ನೀರು ಸರಬರಾಜು ಮಾಡುತ್ತಿದೆ ಎಂದು ಹೇಳುತ್ತಿದೆ. ಆದರೆ, ಜಲಮಂಡಳಿಯು ಮಾಮೂಲಿಯಂತೆ ನೀರು ಪೂರೈಸದೆ, ನೀರು ಬಿಡುವ ಅವಧಿ ಮತ್ತು ಪ್ರಮಾಣದಲ್ಲಿ ಕಡಿಮೆ ಮಾಡುತ್ತಿದೆ.
ರಾಜಧಾನಿಯ ಬಹುತೇಕ ಕಡೆಗಳಲ್ಲಿ ಇದೀಗ ನೀರಿನ ಸಮಸ್ಯೆ ಎದುರಾಗಿದೆ. ದಿನ ಬಳಕೆಗೆ ಅಲ್ಲದೇ, ಕುಡಿಯಲು ನೀರು ಸಹ ಇಲ್ಲದಂತಾಗಿದೆ. ಆರ್.ಆರ್.ನಗರ, ಕೆಂಗೇರಿ, ಪೀಣ್ಯ, ಥಣಿಸಂದ್ರ, ಸಿದ್ದಾರ್ಥನಗರ, ದಾಸರಹಳ್ಳಿ, ಮಂಜುನಾಥನಗರ, ಮಹಾಲಕ್ಷ್ಮೀ ನಗರ, ಬಾಗಲಗುಂಟೆ, ಚಿಕ್ಕಪೇಟೆ, ಹೊಸಕೆರೆಹಳ್ಳಿ, ಬಸವೇಶ್ವರನಗರ, ಬಾಪೂಜಿನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೀರಿನ ಪೂರೈಕೆ ಪ್ರಮಾಣವನ್ನು ಕಡಿತಗೊಳಿಸಲಾಗಿದೆ. ವಾರಕ್ಕೆ ಎರಡು ಬಾರಿ ನೀರು ಪೂರೈಸುತ್ತಿದ್ದ ಕಡೆ ಒಂದು ಬಾರಿ ಮಾತ್ರ ಬಿಡಲಾಗುತ್ತಿದೆ. ಎರಡು ಗಂಟೆಗಳ ಅವಧಿಯನ್ನು ಕಡಿಮೆ ಮಾಡಿ 45 ನಿಮಿಷ ಮಾತ್ರ ನೀರು ಬಿಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.
ನಗರದ ಕೆ.ಆರ್.ಪುರಂ, ಯಶವಂತಪುರ, ಮಹದೇವಪುರ, ಆರ್.ಆರ್ ನಗರ, ಬೊಮ್ಮನಹಳ್ಳಿ, ಯಲಹಂಕ ಹಾಗೂ ದಾಸರಹಳ್ಳಿಯಲ್ಲಿ ನೀರಿನ ತೀವ್ರ ಸಮಸ್ಯೆ ಕಾಡುತ್ತಿದೆ. ಈಗಾಗಲೇ ನಗರದ 58 ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿದೆ.
ಬಿಬಿಎಂಪಿ ಮೂಲಗಳ ಪ್ರಕಾರ ಮಹದೇವಪುರ – 16, ಆರ್.ಆರ್.ನಗರ – 25, ಬೊಮ್ಮನಹಳ್ಳಿ – 5 ಕಡೆ ಯಲಹಂಕ ಮತ್ತು ದಾಸರಹಳ್ಳಿಯ ತಲಾ 3 ಕಡೆ ನೀರಿನ ಅಭಾವ ಹೆಚ್ಚಿದೆ. ಈ ಪ್ರದೇಶಗಳ ಜತೆಗೆ ಇನ್ನೂ 257 ಸ್ಥಳಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ.
“ಸಮಸ್ಯೆ ತೀವ್ರವಾಗಿರುವ ಈ ವಲಯಗಳಲ್ಲಿ ಕೊಳವೆ ಬಾವಿ ಕೊರೆಯಲು ₹131 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ಆದ್ಯತೆಯ ಮೇರೆಗೆ ಕೊಳವೆಬಾವಿಗಳನ್ನು ಕೊರೆಯಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾರ್ಯಾದೇಶ ನೀಡಬೇಕು” ಎಂದು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು 68 ಟ್ಯಾಂಕರ್‌ಗಳ ಜತೆಗೆ 18 ಹೊಸ ಟ್ಯಾಂಕರ್ ಖರೀದಿಸಲು ಮತ್ತು 200 ಖಾಸಗಿ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯಲು ಪಾಲಿಕೆ ಮುಂದಾಗಿದೆ.
ಸದ್ಯ ಯಶವಂತಪುರದ ದೊಡ್ಡ ಬಿದರಕಲ್ಲಿನ ಪುನೀತ್ ರಾಜ್‍ಕುಮಾರ್ ಲೇಔಟ್ನಲ್ಲಿ ನೀರಿನ ಸಮಸ್ಯೆ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಈ ಪ್ರದೇಶದಲ್ಲಿ ನೀರಿಲ್ಲದೇ, ಜನರು ಪರದಾಡುವಂತಾಗಿದೆ. ಅಲ್ಲದೇ, ಜನರು ಖಾಲಿ ಬಿಂದಿಗೆ ಹಿಡಿದು ನೀರು ಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕುಡಿಯಲು ಕಾವೇರಿ ನೀರಿಲ್ಲ
ಬೋರ್‌ವೆಲ್ ನೀರನ್ನೇ ಅವಲಂಬಿಸಿದ್ದ ದೊಡ್ಡ ಬಿದರಕಲ್ಲಿನ ಪುನೀತ್ ರಾಜ್‍ಕುಮಾರ್ ಬಡಾವಣೆ ನಿವಾಸಿಗಳಿಗೆ ಇದೀಗ, ಸಂಕಷ್ಟ ಎದುರಾಗಿದೆ. ಈ ನಿವಾಸಿಗಳಿಗೆ ಕುಡಿಯಲು ಕಾವೇರಿ ನೀರಿಲ್ಲ. ಇನ್ನು ಬೋರ್‌ವೆಲ್ ನೀರು ಬತ್ತಿ ಹೋಗಿದೆ. ಪಾಲಿಕೆ ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ಉಚಿತವಾಗಿ ಪ್ರತಿದಿನ ನೀರು ಪೂರೈಕೆ ಮಾಡುತ್ತಿತ್ತು. ಆದರೆ, ಈಗ ಅದು ಇಲ್ಲ ಎನ್ನುವಂತಾಗಿದೆ.
ಈ ಸುದ್ದಿ ಓದಿದ್ದೀರಾ? ಚುನಾವಣಾ ಖರ್ಚಿಗಾಗಿ ಬಿಬಿಎಂಪಿ ಬಜೆಟ್ ಮಂಡನೆ; ಮೋಹನ್ ದಾಸರಿ ಆರೋಪ
ಬೇಸಿಗೆ ಆರಂಭದಲ್ಲಿಯೇ ನೀರಿನ ಸಮಸ್ಯೆ ತಲೆದೋರಿದ್ದು, ಇದರಿಂದ ಮನೆ ಮಾಲೀಕರು ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಟ್ಯಾಂಕರ್ ಮಾಲೀಕರು ಒಂದು ಟ್ಯಾಂಕರ್ ನೀರಿಗೆ ₹400-500 ಇದ್ದ ಬೆಲೆ ಇದೀಗ, ₹1000-3000 ದಾಟಿದೆ. ನಗರದಲ್ಲಿ ಪ್ರದೇಶವಾರು ಟ್ಯಾಂಕರ್ ನೀರಿನ ಬೆಲೆ ನಿಗದಿ ಮಾಡಲಾಗಿದೆ. ಜನರು ಇದರಿಂದ ಕಂಗಾಲಾಗಿದ್ದು, ಬಾಡಿಗೆದಾರರು ಮನೆ ಖಾಲಿ ಮಾಡಿ ಹೋಗುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಬತ್ತಿಹೋದ ಬೋರ್‌ವೆಲ್‌ಗಳು
ನಗರದಲ್ಲಿ 10,955 ಕೊಳವೆ ಬಾವಿಗಳಲ್ಲಿ 1,214 ಕೊಳವೆ ಬಾವಿಗಳು ಈಗಾಗಲೇ ಬತ್ತಿ ಹೋಗಿವೆ. ಇನ್ನು 3,700 ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.
ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಿರುವ 257 ಸ್ಥಳಗಳನ್ನು ಗುರುತಿಸಿದ್ದು, ಆ ಪ್ರದೇಶಗಳಿಗೆ ನೀರಿನ ಸರಬರಾಜು ಮಾಡಲು ಪಾಲಿಕೆ 68 ಟ್ಯಾಂಕರ್‌ಗಳ ಜೊತೆಗೆ 18 ಹೊಸ ಟ್ಯಾಂಕರ್‌ಗಳನ್ನು ಖರೀದಿಸಲು ಮತ್ತು 200 ಖಾಸಗಿ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯಲು ಕ್ರಮವಹಿಸಿದೆ. ಇನ್ನು ಕಾವೇರಿ 5ನೇ ಹಂತ ಏಪ್ರಿಲ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ವ್ಯಾಪ್ತಿಯಲ್ಲಿ ವಾರ್ಷಿಕವಾಗಿ 19 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗುತ್ತದೆ. ನಿತ್ಯ ಸುಮಾರು 1,472 ಎಂಎಲ್‌ಡಿ ನಿರನ್ನು ಸರಬರಾಜು ಮಾಡಲಾಗುತ್ತದೆ. ಫೆಬ್ರವರಿಯಿಂದ ಜುಲೈ 2024 ರವರೆಗೆ ಅಂದಾಜು 9.48 ಟಿಎಂಸಿ ನೀರು ಅವಶ್ಯಕತೆಯಿದೆ.