ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣೆಗಾಗಿ ಆಯಾ ವಲಯಗಳ ಉಪ ವಿಭಾಗಗಳ ಹಂತದಲ್ಲಿ ‘ವಿಪತ್ತು ನಿರ್ವಹಣಾ ತಂಡ’ಗಳನ್ನು ನಿಯೋಜನೆ ಮಾಡಿಕೊಂಡು ಮಳೆಗಾಲದಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ರವರು ತಿಳಿಸಿದರು.
ನಗರದಲ್ಲಿ ವಿಪತ್ತು ನಿರ್ವಹಣೆಗಾಗಿ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಕುರಿತು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ನಗರದಲ್ಲಿ ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು, ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗುವುದು, ಮ್ಯಾನ್ ಹೋಲ್‌ಗಳು ತೆರೆದುಕೊಳ್ಳುವುದು, ಮರ, ವಿದ್ಯುತ್ ಕಂಬಗಳು ಬೀಳುವುದನ್ನು ಹಾಗೂ ಮಳೆಯಿಂದಾಗುವ ಅನಾಹುತಗಳನ್ನು ತಡೆಗಟ್ಟುವ ಸಲುವಾಗಿ ಆಯಾ ವಲಯಗಳ ಉಪ ವಿಭಾಗಗಳಲ್ಲಿ ಪಾಲಿಕೆ, ಜಲಮಂಡಳಿ, ಬೆಸ್ಕಾಂ, ಮೆಟ್ರೋ, ಅಗ್ನಿ ಶಾಮಕ ಸೇರಿದಂತೆ ಇನ್ನಿತರೆ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜನೆ ಮಾಡಿಕೊಳ್ಳಬೇಕು” ಎಂದು ಸೂಚಿಸಿದರು.
“ನಗರದಲ್ಲಿ ಕಳೆದ ಒಂದು ವಾರದಿಂದ ಬೇರೆ ಬೇರೆ ಸ್ಥಳಗಳಲ್ಲಿ ಮಳೆಯಾಗುತ್ತಿದ್ದು, ಒಂದು ಕಡೆ ಒಂದೊಂದು ರೀತಿಯಲ್ಲಿ ಮಳೆಯಾಗುತ್ತಿದೆ. ಕೆಲವಡೆ ಸಾಮಾನ್ಯ, ಇನ್ನು ಕೆಲವೆಡೆ ಮಧ್ಯಮ ಹಾಗೂ ಹೆಚ್ಚಾಗಿ ಮಳೆಯಾಗಿರುವ ವರದಿಯಾಗಿದೆ. ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸುಮಾರು 150 ಕಡೆ ನೀರು ನಿಂತಿದೆ. ನಿಂತ ನೀರು 2 ಗಂಟೆಯೊಳಗಾಗಿ ಹರಿದುಹೋಗಿದ್ದು, ಯಾವುದೇ ರೀತಿಯ ಸಮಸ್ಯೆಯಾಗಿಲ್ಲ” ಎಂದು ಹೇಳಿದರು.
“ನಗರದಲ್ಲಿ ಮಳೆ ಪ್ರಾರಂಭವಾದಾಗಿನಿಂದ 325 ಮರಗಳು ಬಿದ್ದಿದ್ದು, ಅದರಲ್ಲಿ 320 ಮರಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ 698 ರೆಂಬೆ ಕೊಂಬೆಗಳು ಬಿದ್ದಿದ್ದು, 650 ತೆರವುಗೊಳಿಸಲಾಗಿದೆ. ಉಳಿದ ಮರ, ರೆಂಬೆ, ಕೊಂಬೆಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಬೇಕು” ಎಂದು ಸೂಚನೆ ನೀಡಿದರು.
“ಮಳೆಯಿಂದಾಗಿ ಧರಗುರುಳಿದ ಮರ, ರೆಂಬೆ, ಕೊಂಬೆಗಳನ್ನು ತೆರವುಗೊಳಿಸಲು 39 ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಕಟಾವು ಮಾಡಿ ರಸ್ತೆ ಬದಿ ಹಾಕಿರುವಂತಹ ರೆಂಬೆ, ಕೊಂಬೆಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು” ಎಂದು ಸೂಚನೆ ನೀಡಿದರು.
198ರಲ್ಲಿ 74 ಕಡೆ ಮಾತ್ರ ಶಾಶ್ವತ ಪರಿಹಾರ
“ನಗರದಲ್ಲಿ 198 ಪ್ರವಾಹ ಪೀಡಿತ ಪ್ರದೇಶಗಳಿದ್ದು, ಈ ಪೈಕಿ 124 ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈಗಾಗಲೇ ಶಾಶ್ವತ ಪರಿಹಾರವನ್ನು ಮಾಡಲಾಗಿದೆ. ಈ 124 ಸ್ಥಳಗಳಿಗೆ ವಲಯ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳಗಳಲ್ಲಿ ಏನಾದರು ಸಮಸ್ಯೆಯಿದ್ದರೆ ಕೂಡಲೇ ಕಾಮಗಾರಿ ಕೈಗೊಂಡು ಸರಿಪಡಿಸುವ ಕೆಲಸ ಮಾಡಬೇಕು. ಉಳಿದ 74 ಪ್ರದೇಶಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಶೀಘ್ರ ಶಾಶ್ವತ ಪರಿಹಾರ ಕೈಗೊಳ್ಳಬೇಕು” ಎಂದು ಸೂಚಿಸಿದರು.
ಹೂಳೆತ್ತಲು ಪ್ರತಿ ವಾರ್ಡ್‌ಗೆ 30 ಲಕ್ಷ ಮೀಸಲು
ಪಾಲಿಕೆ ವ್ಯಾಪ್ತಿಯಲ್ಲಿ 225 ವಾರ್ಡ್‌ಗಳಲ್ಲಿ ಸೈಡ್ ಡ್ರೈನ್‌ಗಳಲ್ಲಿ ಹೂಳೆತ್ತುವ ಸಲುವಾಗಿ ಪ್ರತಿ ವಾರ್ಡ್‌ಗೆ ತಲಾ ₹30 ಲಕ್ಷ ಮೀಸಲಿಡಲಾಗಿದೆ. ಮಳೆಗಾಲದ ವೇಳೆ ಮಳೆ ನೀರು ಸರಾಗವಾಗಿ ಹರಿದು ಹೋಗುವ ನಿಟ್ಟಿನಲ್ಲಿ ಕಾಲ-ಕಾಲಕ್ಕೆ ಹೂಳೆತ್ತುವ ಕೆಲಸ ಮಾಡಲಾಗುತ್ತಿರುತ್ತದೆ.
ಈ ಸುದ್ದಿ ಓದಿದ್ದೀರಾ? ಮುಸ್ಲಿಂ ಮಹಿಳೆಯರ ಮುಖ ತೋರಿಸಿ ಮತ ಹಾಕಲು ಸೂಚಿಸಿದ ಬಿಜೆಪಿ ಅಭ್ಯರ್ಥಿ ಮಾಧವಿ ವಿರುದ್ಧ ಎಫ್‌ಐಆರ್
ವಿಪತ್ತು ನಿರ್ವಹಣೆಗಾಗಿ ₹10 ಕೋಟಿ ಮೀಸಲು
ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ವಿಪತ್ತು ನಿರ್ವಹಣೆಗಾಗಿ ಈ ಬಾರಿಯ ಆಯವ್ಯಯದಲ್ಲಿ 10 ಕೋಟಿ ರೂ. ಮೀಸಲಿಡಲಾಗಿದೆ. ಮೀಸಲಿಟ್ಟಿರುವ ಅನುದಾನವನ್ನು ಹೊಸದಾಗಿ ಪ್ರವಾಹ ಪೀಡಿತ ಪ್ರದೇಶ ಉಂಟಾಗುವುದು, ಪಂಪ್ ವ್ಯವಸ್ಥೆ ಸೇರಿದಂತೆ ಇನ್ನಿತರೆ ತುರ್ತು ಸಮಸ್ಯೆಗಳಿಗಾಗಿ ಅನುದಾನ ಬಳಸಿಕೊಳ್ಳಲಾಗುವುದು.
ಸೆನ್ಸಾರ್‌ಗಳ ಮೇಲ್ವಿಚಾರಣೆಯ ಕುರಿತು ವಿವರಣೆ
ಪಾಲಿಕೆ ವ್ಯಾಪ್ತಿಯಲ್ಲಿ ಪ್ರವಾಹವನ್ನು ನಿಭಾಯಿಸಲು ಮತ್ತು ಪ್ರತಿಕ್ರಿಯಿಸಲು ರಾಜಕಾಲುವೆಗಳಲ್ಲಿ ತಂತ್ರಜ್ಞಾನ ಬಳಸಿಕೊಂಡು 124 ಕಡೆ ನೀರಿನ ಮಟ್ಟ ಅಳೆಯುವ ಸಂವೇದಕ(Water Level Sensor)ಗಳನ್ನು ಕೆಎಸ್‌ಎನ್‌ಡಿಎಂಸಿ ಹಾಗೂ ಭಾರತೀಯ ವಿಜ್ಙಾನ ಸಂಸ್ಥೆಯ ಸಹಯೋಗದಲ್ಲಿ ಅಳವಡಿಸಲಾಗಿದೆ. ಅದನ್ನು ಪಾಲಿಕೆಯ ಇಂಟಿಗ್ರೇಟೆಡ್ ಕಮಾಂಡಿಂಗ್ ಕಂಟ್ರೋಲ್ ಸೆಂಟರ್ (ಐಸಿಸಿಸಿ)ನಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರಹ್ಲಾದ್ ಅವರು ಮಾಧ್ಯಮ ಪ್ರತಿನಿಧಿಗಳನ್ನು ಐಸಿಸಿಸಿಗೆ ಕರೆದೊಯ್ದು ಅದು ಯಾವ ರೀತಿ ಕಾರ್ಯನಿರ್ವಹಿಸಲಿದೆ ಎಂಬುದರ ಕುರಿತು ವಿವರಣೆ ನೀಡಿದರು.
ಮೇಘ ಸಂದೇಶ, ವರಣಮಿತ್ರದ ಮೂಲಕ ಮಳೆಯ ಮಾಹಿತಿ ಲಭ್ಯ
ಮಳೆಯ ಬಗ್ಗೆ ನಾಗರಿಕರಿಗೆ ಅಗತ್ಯ ಮಾಹಿತಿಯನ್ನು ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ(IISc) ವತಿಯಿಂದ “ಬೆಂಗಳೂರು ಮೇಘ ಸಂದೇಶ” ಮೊಬೈಲ್ ಆಪ್ (https://play.google.com/store/apps/details?id=com.moserptech.meghasandesha&hl=en) ಬಿಡುಗಡೆ ಗೊಳಿಸಲಾಗಿದೆ.
ಅದಲ್ಲದೆ ‘ವರುಣಮಿತ್ರ’ ಅಂತರ್ಜಾಲ ತಾಣ (http://varunamitra.karnataka.gov.in) ದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಉಂಟಾಗುವ ಪ್ರವಾಹವನ್ನು ತಡೆಯಲು ವಲಯವಾರು ನಕ್ಷೆ, ಮಳೆ ಮುನ್ಸೂಚನೆ, ಪ್ರವಾಹ ಮುನ್ಸೂಚನೆ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಪಡೆಯಬಹುದಾಗಿದೆ.
ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ. ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಶಿವಾನಂದ ಕಲಕೇರಿ, ವಲಯ ಆಯುಕ್ತರಾದ ಡಾ. ಆರ್.ಎಲ್.ದೀಪಕ್, ವಿನೊತ್ ಪ್ರಿಯಾ, ರಮೇಶ್, ಶಿವನಾಂದ್ ಕಪಾಶಿ, ಸ್ನೇಹಲ್, ರಮ್ಯಾ, ಪ್ರೀತಿ ಗೆಹ್ಲೋಟ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.