ಪ್ರಿಯಕರನೊಂದಿಗೆ ಓಡಿ ಹೋಗಿದ್ದಕ್ಕೆ ತಂದೆಯೇ ತನ್ನ ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದ ನಾಗನಾಥಪುರದ ಡಾಕ್ಟರ್ ಲೇಔಟ್ನಲ್ಲಿ ನಡೆದಿದೆ.
ಪಲ್ಲವಿ (17) ಕೊಲೆಯಾದ ಯುವತಿ. ಆರೋಪಿ ತಂದೆ ಗಣೇಶ್. ಇವರು ಮೂಲತಃ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯವರು. ಆರೋಪಿ ಗಣೇಶ್ ಅವರ ಮಗಳು ಪಲ್ಲವಿ ಶಾಲೆಗೆ ಹೋಗುವಾಗ ಪ್ರೀತಿಯ ಬಲೆಗೆ ಬಿದ್ದಿದ್ದಳು.
ಈ ವಿಚಾರ ತಿಳಿದು ಗಣೇಶ್ ನಾಗನಾಥಪುರದಲ್ಲಿರುವ ಮಾವನ ಮನೆಗೆ ಪಲ್ಲವಿಯನ್ನು ಕರೆದುಕೊಂಡು ಹೋಗಿ ಬಿಟ್ಟಿದ್ದರು. ಅಕ್ಟೋಬರ್ 14 ರಂದು ಪಲ್ಲವಿ ಮಾವನ ಮನೆಯಿಂದ ಏಕಾಏಕಿ ಕಾಣೆಯಾಗಿದ್ದಳು. ಈ ಬಗ್ಗೆ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಪಲ್ಲವಿಯನ್ನು ಪತ್ತೆ ಮಾಡಿ ಅ.20ರಂದು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದ ಕೂಡಲೇ ಠಾಣೆಗೆ ಆಗಮಿಸಿದ ಮಾವ ಶಾಂತಕುಮಾರ್ ಮಾವ ಪಲ್ಲವಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು.
ಅ.22 ರ ಬೆಳಗ್ಗೆ 10.30ರ ಸುಮಾರಿಗೆ ಪಲ್ಲವಿ ತಂದೆ ಬೆಂಗಳೂರಿನ ನಾಗಪುರಕ್ಕೆ ಬಂದಿದ್ದಾರೆ. ಈ ವೇಳೆ, ಪತ್ನಿ ಶಾರದಾ ಮತ್ತು ಪಲ್ಲವಿ ಜೊತೆ ಆರೋಪಿ ಗಣೇಶ್ ಗಲಾಟೆ ಮಾಡಿಕೊಂಡಿದ್ದನು. ಈ ಗಲಾಟೆ ವಿಕೋಪಕ್ಕೆ ಹೋಗಿ ಮನೆಯಲ್ಲಿದ್ದ ಮಚ್ಚಿನಿಂದ ಮಗಳು ಪಲ್ಲವಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರೀತಿಸಿದವನ ಜತೆ ಮಗಳು ಹೋಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ತಂದೆ
ಮಗಳನ್ನು ಹತ್ಯೆ ಮಾಡುವ ಸಮಯದಲ್ಲಿ ತಡೆಯಲು ಹೋದ ಪತ್ನಿ ಹಾಗೂ ಭಾವಮೈದುನನ ಮೇಲೂ ಗಣೇಶ್ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಸದ್ಯ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಪರಪ್ಪನ ಅಗ್ರಹಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.