ಚಿನ್ನ ಕಳ್ಳಸಾಗಣೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಕನ್ನಡ ನಟಿ ರನ್ಯಾ ರಾವ್ ಅವರು ಡಿಆರ್‌ಐ ಅಧಿಕಾರಿಗಳ ಮೇಲೆ ಗಂಭೀರವಾದ ಆರೋಪವನ್ನು ಮಾಡಿದ್ದಾರೆ. “ಡಿಆರ್‌ಐ ಅಧಿಕಾರಿಗಳು ನನ್ನ ಕೆನ್ನೆಗೆ 10-15 ಬಾರಿ ಬಾರಿಸಿದರು, ಊಟವೂ ನೀಡಿಲ್ಲ, 40 ಖಾಲಿ ಹಾಳೆಗಳ ಮೇಲೆ ಸಹಿ ಮಾಡಿಸಿದರು” ಎಂದು ರನ್ಯಾ ರಾವ್ ಆರೋಪಿಸಿದ್ದಾರೆ.
ಮಾರ್ಚ್ 3ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ರನ್ಯಾ ರಾವ್ ಮಾರ್ಚ್ 6ರಂದು ಡಿಆರ್‌ಐ ಹೆಚ್ಚುವರಿ ನಿರ್ದೇಶಕರಿಗೆ ರನ್ಯಾ ರಾವ್ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಡಿಆರ್‌ಐ ಅಧಿಕಾರಿಗಳ ಮೇಲೆ ಗಂಭೀರವಾದ ಆರೋಪ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಚಿನ್ನ ಕಳ್ಳಸಾಗಣೆ ಪ್ರಕರಣ | ನಟಿ ರನ್ಯಾ ರಾವ್ ಜಾಮೀನು ಅರ್ಜಿ ವಜಾ
ರನ್ಯಾ ರಾವ್ ಸುಮಾರು 12.56 ಕೆಜಿ ರೂಪಾಯಿ ಮೌಲ್ಯದ 14.2 ಕೆಜಿ ತೂಕದ ಚಿನ್ನದ ಬಾರ್‌ಗಳನ್ನು ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದಿದ್ದರು ಎಂದು ಡಿಆರ್‌ಐ ಅಧಿಕಾರಿಗಳು ಆರೋಪಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನ ಮುಖ್ಯಾಧಿಕಾರಿ ಸುರೇಶ ಅವರ ಮುಖೇನ ಹಿರಿಯ ಡಿಆರ್‌ಐ ಅಧಿಕಾರಿಗೆ ರನ್ಯಾ ಪತ್ರ ಬರೆದಿದ್ದಾರೆ. ಈ ಪತ್ರ ಶನಿವಾರ ಸೋರಿಕೆಯಾಗಿದೆ. ಸದ್ಯ ರನ್ಯಾ ನ್ಯಾಯಾಂಗ ಬಂಧನದಲ್ಲಿದ್ದಾರೆ.
“ಈ ಪ್ರಕರಣದಲ್ಲಿ ನಾನು ನಿರಪರಾಧಿ ಎಂಬುದನ್ನು ವಿವರಿಸಲೂ ಕೂಡಾ ಅಧಿಕಾರಿಗಳು ನನಗೆ ಅವಕಾಶ ನೀಡಿಲ್ಲ ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ನನಗೆ ತಳಿಸಲಾಗಿದೆ, ನನ್ನ ಕೆನ್ನೆಗೆ 10-15 ಬಾರಿ ಬಾರಿಸಿದ್ದಾರೆ. ನಾನು ಈ ಅಧಿಕಾರಿಗಳನ್ನು ಗುರುತಿಸಬಲ್ಲೆ” ಎಂದು ತಿಳಿಸಿದ್ದಾರೆ.
“ನನಗೆ ಎಷ್ಟು ಥಳಿಸಿದರೂ ನಾನು ಅಧಿಕಾರಿಗಳು ಸಿದ್ಧಪಡಿಸಿದ ಹೇಳಿಕೆಗೆ ಸಹಿ ಹಾಕಲು ನಿರಾಕರಿಸಿದೆ. ‘ನೀನು ಸಹಿ ಹಾಕದಿದ್ದರೆ ನಿನ್ನ ತಂದೆ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ತಿಳಿದಿದ್ದರೂ ನಿನ್ನ ತಂದೆಯ ಹೆಸರು, ಗುರುತು ಬಹಿರಂಗಪಡಿಸುತ್ತೇವೆ’ ಎಂದು ಅಧಿಕಾರಿಯೊಬ್ಬರು ಬೆದರಿಕೆ ಹಾಕಿದರು. ನನ್ನ ಮೇಲೆ ಒತ್ತಡ, ಹಲ್ಲೆ ಮಾಡಿದ ಕಾರಣದಿಂದಾಗಿ ನಾನು 50-60 ಹಾಳೆಗಳಿಗೆ ಸಹಿ ಹಾಕಿದೆ. ಈ ಪೈಕಿ 40 ಖಾಲಿ ಹಾಳೆಗಳಾಗಿದ್ದು, ಬಲವಂತವಾಗಿ ಸಹಿ ಮಾಡಿಸಿದ್ದಾರೆ” ಎಂದು ಆರೋಪಿಸಿದ್ದಾರೆ. ಸದ್ಯ ರನ್ಯಾ ತಂದೆ ಡಿಜಿಪಿ ಕೆ ರಾಮಚಂದ್ರ ರಾವ್ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.
ಇದನ್ನು ಓದಿದ್ದೀರಾ? ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ | ಬಿಜೆಪಿ, ಕಾಂಗ್ರೆಸ್ ನಡುವೆ ‘ಗೋಲ್ಡ್’ ರಾಜಕೀಯ; ಸಮಗ್ರ ವರದಿ
“ನನಗೆ ಸರಿಯಾಗಿ ಮಲಗಲೂ ಬಿಟ್ಟಿಲ್ಲ, ಊಟ ಮಾಡಲು ಬಿಟ್ಟಿಲ್ಲ. ಅಧಿಕಾರಿಗಳು ಬೇಕೆಂದೇ ನನಗೆ ನಿದ್ದೆ ಮಾಡಲು ಬಿಟ್ಟಿಲ್ಲ. ಕೋರ್ಟ್‌ನಲ್ಲಿ ಈ ಹಲ್ಲೆಯ ಬಗ್ಗೆ ಮಾತನಾಡಿದರೆ ನನ್ನ ತಂದೆಯ ಹೆಸರನ್ನು ಬಹಿರಂಗಪಡಿಸುವುದಾಗಿ ನನ್ನನ್ನು ಕೋರ್ಟ್‌ಗೆ ಕರೆದೊಯ್ಯುವ ವೇಳೆ ಬೆದರಿಕೆ ಹಾಕಿದ್ದಾರೆ” ಎಂದು ದೂರಿದ್ದಾರೆ.
ಡಿಆರ್‌ಐ ಅಧಿಕಾರಿಗಳು ಕೋರ್ಟ್‌ಗೆ ರನ್ಯಾ ಹೇಳಿಕೆಯನ್ನು ಸಲ್ಲಿಸಿದ್ದು, “ರನ್ಯಾ ತನ್ನ ಆರೋಪವನ್ನು ಒಪ್ಪಿಕೊಂಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಚಿನ್ನ ಕಳ್ಳಸಾಗಣೆ ಮಾಡಿರುವುದಾಗಿ ಹೇಳಿದ್ದಾರೆ. ಯೂಟ್ಯೂಬ್ ನೋಡಿ ಮಾಡಿದೆ. ನನಗೆ ಚಿನ್ನ ಕಳ್ಳಸಾಗಣೆ ಮಾಡುವಂತೆ ಪದೇ ಪದೇ ಕರೆ ಬರುತ್ತಿತ್ತು. ಅವರು ತಿಳಿಸಿದಂತೆ ಮಾಡಿದೆ ಎಂದಿದ್ದಾರೆ” ಎಂದು ಡಿಆರ್‌ಐ ಕೋರ್ಟ್‌ಗೆ ಸಲ್ಲಿಸಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
