ಕಳೆದ ಅಕ್ಟೋಬರ್ 28 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಎಫ್ಡಿಎ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಇಬ್ಬರು ಪ್ರಾಂಶುಪಾಲರನ್ನು ಬುಧವಾರ ಬಂಧಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಕಾಂತ್ ಬುರಕಲ್ ಹಾಗೂ ಅಫಜಲಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಸಣ್ಣ ಪೂಜಾರಿ ಬಂಧಿತರು.
ಚಂದ್ರಕಾಂತ ಅವರು ಅಫಜಲಪುರದ ರಾಯಲ್ ಪಬ್ಲಿಕ್ ಶಾಲೆಯ ಕೆಇಎ ಪರೀಕ್ಷಾ ಕೇಂದ್ರದ ಮುಖ್ಯಸ್ಥರಾಗಿದ್ದರು, ಅಧಿಕೃತ ಅಭ್ಯರ್ಥಿಗಳ ಬದಲು ಬೇರೆಯವರಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದರು. ಬಸಣ್ಣ ಪೂಜಾರಿ ಕೆಇಎ ಪರೀಕ್ಷೆ ಕಸ್ಟೋಡಿಯನ್ ಆಗಿದ್ದರು. ಇಬ್ಬರು ಪ್ರಾಂಶುಪಾಲರು ಕೆಇಎ ಪರೀಕ್ಷಾ ಅಕ್ರಮಕ್ಕೆ ನೆರವಾಗುವ ಉದ್ದೇಶದಿಂದ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಹಣೆಗೆ ಪಿಸ್ತೂಲ್ ಇಟ್ಟು 3.50 ಕೋಟಿ ಸುಲಿಗೆ : ಜಿ.ಪಂ. ಮಾಜಿ ಸದಸ್ಯ ಸೇರಿ ಮೂವರ ಬಂಧನ
ಆರೋಪಿಗಳು ನೀಡಿದ್ದ ಸುಳಿವಿನ ಮೇರೆಗೆ ಸಿಐಡಿ ಅಧಿಕಾರಿಗಳು ಇಬ್ಬರನ್ನು ತೀವ್ರ ವಿಚಾರಣೆ ನಡೆಸಿ ಕಳಿಸಿದ್ದರು. ಇದೀಗ ಬುಧವಾರ ಚಂದ್ರಕಾಂತ್ ಹಾಗೂ ಬಸಣ್ಣ ಪೂಜಾರಿ ಅವರನ್ನು ಬಂಧಿಸಿ ಕಲಬುರಗಿಯ ಜೆಎಮ್‌ಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.