ಮಕ್ಕಳ ರಕ್ಷಣೆಗಾಗಿ ಆದ್ಯತೆ ಮೇರೆಗೆ ಶಾಲಾ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿಗಳು ಕ್ರಮವಹಿಸಬೇಕು. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಬಸ್, ಕ್ಯಾಬ್, ವ್ಯಾನ್ನಂತಹ ಶಾಲಾ ವಾಹನಗಳಲ್ಲಿ ಮಹಿಳಾ ಸಹಾಯಕಿಯರನ್ನೇ ನೇಮಿಸಿಕೊಳ್ಳಬೇಕು. ಜತೆಗೆ, ಶಾಲಾ ಮಕ್ಕಳನ್ನು ಕರೆತರುವ ಎಲ್ಲ ಬಗೆಯ ವಾಹನಗಳ ಚಾಲಕರು ಎರಡು ವರ್ಷಗಳಿಗೊಮ್ಮೆ ಪೊಲೀಸರಿಂದ ಪಡೆದ ಸನ್ನಡತೆಯ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯಗೊಳಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.
ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಇಲಾಖೆ ಆಯುಕ್ತೆ ಬಿ.ಬಿ.ಕಾವೇರಿ, “ಶಾಲಾ ವಾಹನಗಳಲ್ಲಿ ಕಾರ್ಯನಿರ್ವಹಿಸುವ ಚಾಲಕರು ಮತ್ತು ವಾಹನಗಳ ಸಹಾಯಕರು ಪೊಲೀಸ್ ವೆರಿಫಿಕೇಷನ್ ಮಾಡಿಸುವಂತೆ ಎಲ್ಲ ಶಾಲಾ ಆಡಳಿತ ಮಂಡಳಿಗಳು ಕ್ರಮವಹಿಸಬೇಕು” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮುಂದಿನ 2 ದಿನ ರಾಜ್ಯದ ಬಹುತೇಕ ಕಡೆ ಭಾರೀ ಮಳೆ ಸಾಧ್ಯತೆ : ಹವಾಮಾನ ಇಲಾಖೆ
- ಹಾಗೆಯೇ, ಕರ್ನಾಟಕ ಮೋಟಾರು ವಾಹನಗಳ 1989 ನಿಯಮದಂತೆ ವಾಹನಗಳಲ್ಲಿ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯಲು ‘ಶಾಲಾ ವಾಹನ ಸುರಕ್ಷತಾ ಸಮಿತಿ’ ರಚಿಸಬೇಕು
- ಶಾಲಾ ವಾಹನಗಳಲ್ಲಿ ಮಕ್ಕಳನ್ನು ಮನೆಯಿಂದ ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ಕರೆತರುವ ಸಂದರ್ಭದಲ್ಲಿ ಖಾಸಗಿ ಶಾಲಾ ವಾಹನಗಳಲ್ಲಿ ಚಾಲಕರಿಂದ ಮತ್ತು ವಾಹನಗಳ ಸಹಾಯಕರಿಂದ ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಿರುವಂತಹ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಬಸ್, ವ್ಯಾನ್, ಆಟೋ ರಿಕ್ಷಾ ಮತ್ತು ಇತರೆ ಶಾಲಾ ವಾಹನಗಳಲ್ಲಿ ಕಾರ್ಯನಿರ್ವಹಿಸುತ್ತಿರುವಂತಹ ಎಲ್ಲ ಚಾಲಕರ ಮತ್ತು ಸಹಾಯಕರ ಮಾನಸಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿಸಿದ ಪೊಲೀಸ್ ಠಾಣೆಗಳಿಂದ ಅವರ ನಡತೆಯ ಬಗ್ಗೆ ನಡವಳಿಕೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಹೇಳಿದೆ.
- ಖಾಸಗಿ ಶಾಲಾ ವಾಹನಗಳಲ್ಲಿ, ಬಸ್, ವ್ಯಾನ್, ಆಟೋ ರಿಕ್ಷಾಗಳಲ್ಲಿ ಶಾಲಾ ಮಕ್ಕಳನ್ನು ಮನೆಯಿಂದ ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ಕರೆತರುವ ಕೆಲಸ ನಿರ್ವಹಿಸುವ ಚಾಲಕರು ಮತ್ತು ಸಹಾಯಕರ ನಡವಳಿಕೆ ಬಗ್ಗೆ ಸಂಬಂಧಿಸಿದ ಪೊಲೀಸ್ ಠಾಣೆಗಳಿಂದ ನಡತೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆಯುವುದು ಹಾಗೂ ಪ್ರತಿ ಎರಡು ವರ್ಷಗಳಿಗೊಮ್ಮೆ ನವೀಕರಿಸುವುದು ಕಡ್ಡಾಯವಾಗಿದೆ.
- ಚಾಲಕರ ಮತ್ತು ಸಹಾಯಕರಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗಳಿಂದ ಪಡೆದ ನಡವಳಿಕೆ ಪ್ರಮಾಣ ಪತ್ರವನ್ನು ಆಯಾ ಶಾಲೆಯ ಎಸ್‌ಎಟಿಎಸ್(SATS) ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಬೇಕು.
- ಖಾಸಗಿ ಶಾಲಾ ವಾಹನಗಳಲ್ಲಿ ಬಸ್, ವ್ಯಾನ್, ಶಾಲಾ ಮಕ್ಕಳನ್ನು ಮನೆಯಿಂದ ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ಕರೆತರುವ ಕೆಲಸವನ್ನು ನಿರ್ವಹಿಸಲು ಸಹಾಯಕರಾಗಿ ಮಹಿಳಾ ಸಹಾಯಕರನ್ನು ನೇಮಿಸಿಕೊಳ್ಳಬೇಕು.
- ಪ್ರತಿ ಖಾಸಗಿ ಶಾಲಾ ವಾಹನಗಳಲ್ಲಿ ಕಡ್ಡಾಯವಾಗಿ ಸಿ.ಸಿ.ಕ್ಯಾಮರಾ ಅಳವಡಿಸಬೇಕು.
- ಶಾಲಾ ವಾಹನಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಮಕ್ಕಳನ್ನು ಕರೆದುಕೊಂಡು ಹೋಗದಂತೆ ನಿರ್ಬಂಧಿಸಬೇಕು.
- ಶಾಲಾ ವಾಹನಗಳಲ್ಲಿ ಕೆಲಸ ನಿರ್ವಹಿಸುವ ಚಾಲಕರು ಮತ್ತು ಸಹಾಯಕರು ಪ್ರತಿದಿನ ಕೆಲಸ ಪ್ರಾರಂಭದ ಮೊದಲು ಮತ್ತು ಎಲ್ಲ ಮಕ್ಕಳನ್ನು ಮನೆಗೆ ಬಿಟ್ಟನಂತರ ಶಾಲೆಗೆ ಬಂದು ಹಾಜರಾತಿ ಪುಸ್ತಕದಲ್ಲಿ ಶಾಲಾ ಮುಖ್ಯಸ್ಥರ ಸಮ್ಮುಖದಲ್ಲಿ ಕಡ್ಡಾಯವಾಗಿ ಸಹಿ ಮಾಡಬೇಕು.
- ಆಯಾ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಶಾಲೆಗಳಿಗೆ ಭೇಟಿ ನೀಡಿ, ಸುರಕ್ಷತೆಯ ಖಾತ್ರಿಪಡಿಸಬೇಕು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆಡಳಿತ ಮಂಡಳಿಗಳು ವಿವರಗಳನ್ನು ಪ್ರತಿ ವರ್ಷ ಬಿಇಒಗಳಿಗೆ ನೀಡಬೇಕು.
- ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ, ಯಾವುದೇ ನಿಯಮ ಉಲ್ಲಂಘಿಸಿದಲ್ಲಿ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲು ಸೂಕ್ತ ಕ್ರಮ ವಹಿಸುವುವಂತೆ ಸೂಚಿಸಿದೆ.