ಆ. 20, ನಾರಾಯಣ ಗುರುಗಳ ಜನ್ಮದಿನ. ಕೇರಳ ರಾಜ್ಯದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ಸಮಾಜ ಸುಧಾರಕ ನಾರಾಯಣ ಗುರು ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆ ಮಾಡಲು ಇಡೀ ಜೀವನವನ್ನು ಮುಡಿಪಾಗಿಟ್ಟರು. ಅವರು ಪ್ರತಿಪಾದಿಸಿದ ತತ್ವ, ಜಗತ್ತಿನಲ್ಲಿರುವುದು ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರು ಎಂಬ ಸತ್ಯವಾಕ್ಯವನ್ನು. ಅವರ ಬದುಕಿನಲ್ಲಿ ಸಂಭವಿಸಿದ ಈ ಮೂರು ಘಟನೆಗಳು ಅವರನ್ನು ಅರಿಯಲು ದಾರಿ ಮಾಡಿಕೊಡಬಲ್ಲವು...
ಗುರು ವೃತ್ತಿಯ ಹೊಣೆಗಾರಿಕೆಯನ್ನು ಪ್ರಜ್ಞಾಪೂರ್ವಕವಾಗಿ ಸ್ವೀಕರಿಸಿದವರು ನಾರಾಯಣ ಗುರುಗಳು. ಅರುವಿಪ್ಪುರದ ಕಾಡಿನಲ್ಲಿ ತಪೋನಿರತನಾಗಿದ್ದ ಯುವ ಯೋಗಿ ಪರಮಹಂಸಾನುಭೂತಿಯನ್ನು ಪಡೆದ ಗುರುವಾದದ್ದು ಹೇಗೆ ಎಂಬುದನ್ನು ನಾರಾಯಣ ಗುರುಗಳ ಶಿಷ್ಯ ಪ್ರಮುಖರಾದ ನಟರಾಜ ಗುರುಗಳ ಈ ಮಾತುಗಳು ಬಹಳ ಚೆನ್ನಾಗಿ ವಿವರಿಸುತ್ತವೆ ”ಧರ್ಮಸೂಕ್ಷ್ಮವೊಂದರ ಜಿಜ್ಞಾಸೆ ಅಥವಾ ಹೊಸ ಮತ ಸ್ಥಾಪನೆಗಿಂತ ತಮ್ಮನ್ನು ಕಾಣಲು ಬಂದ ಹಳ್ಳಿಗನ ಹಸಿವು ಅವರಿಗೆ ಮುಖ್ಯವೆನಿಸಿತು. ಅವರು ವರ್ತಮಾನದಲ್ಲಿ ಬದುಕಲು ತೀರ್ಮಾನಿಸಿದರು. ಭೂತದ ಮೂಸೆಯಲ್ಲಿ ರೂಪತಳೆದಿದ್ದ ಈ ವರ್ತಮಾನವನ್ನು ಅವರು ಭವಿಷ್ಯದ ಅನಂತ ಭರವಸೆಗಳ ನಿರೀಕ್ಷೆಯ ಮೂಲಕ ಬದುಕಲು ಹೊರಟರು. ಇದರಿಂದಾಗಿ ಅವರಿಗೆ ತಮ್ಮ ಕರ್ತವ್ಯವೇನೆಂಬುದು ಸೂರ್ಯನ ಬೆಳಕಿನಷ್ಟೇ ಸ್ಪಷ್ಟವಾಯಿತು. ಪರೋಪಕಾರವೆಂಬುದು ಸಹಜ ಸ್ವಭಾವವಾಯಿತು. ತಾತ್ವಿಕತೆಯು ಎಲ್ಲದರಿಂದ ಮುಕ್ತವಾದ ಉದ್ದೇಶವನ್ನು ಅವರಿಗೆ ತೋರಿಸಿಕೊಟ್ಟರೆ ಕಾವ್ಯವು ಅವರ ಸಹಜಾಭಿವ್ಯಕ್ತಿಯ ಮಾರ್ಗವಾಯಿತು. ಬದುಕಿನ ಗುರಿ ಮತ್ತು ಆಕಾಂಕ್ಷೆಗಳು ಸರಳವಾದವು. ಔದಾರ್ಯ ಮತ್ತು ಸಮೃದ್ಧಿಯ ಗುರುತನಕ್ಕೆ ಅಗತ್ಯವಿರುವ ಬುನಾದಿಯೊಂದು ಆಗಲೇ ಅವರ ವ್ಯಕ್ತಿತ್ವಕ್ಕೆ ಸೇರಿಕೊಂಡಿತು.”
ಜಾತಿಯ ಪ್ರಶ್ನೆಯನ್ನು ಬಹಳ ನೇರವಾಗಿ ಎದುರಿಸಿದ ಅನುಭಾವಿಗಳಲ್ಲಿ ನಾರಾಯಣ ಗುರುಗಳ ಪ್ರಮುಖ ಸ್ಥಾನ ಪಡೆಯುತ್ತಾರೆ. ಅಧ್ಯಾತ್ಮ ಎಂಬುದು ಅವರ ಮಟ್ಟಿಗೆ ಸಾಮಾಜಿಕ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಬೇಕಾದ ಪರಿಕರದಂತೆಯೇ ಸಮಸ್ಯೆ ನಿವಾರಣೆಗೆ ಬೇಕಾದ ಅಸ್ತ್ರವೂ ಆಗಿತ್ತು. ಅವರ ಬದುಕಿನಲ್ಲಿ ಸಂಭವಿಸಿದ ಈ ಮೂರು ಘಟನೆಗಳು ”ಜಾತಿ ಭೇದ, ಮತ ದ್ವೇಷವಿಲ್ಲದೆ ಸರ್ವರೂ ಸೋದರರಂತೇ ಬಾಳುವ” ಅವರ ಕಲ್ಪನೆಯ ಹಿಂದಿದ್ದ ಅವರ ವಿಚಾರದ ರೂಪಕಗಳಾಗಿವೆ.
ಬ್ರಾಹ್ಮಣನಾಗುವುದೆಂದರೆ…
ಕ್ಷತ್ರಿಯನಾಗಿದ್ದ ವಿಶ್ವಾಮಿತ್ರನು ಬ್ರಹ್ಮರ್ಷಿ ವಸಿಷ್ಠನೊಂದಿಗೆ ಜಗಳವಾಡಿದ. ಬ್ರಹ್ಮರ್ಷಿಯನ್ನು ಗೆಲ್ಲಲು ತನಗೆ ಸಾಧ್ಯವಿಲ್ಲ ಎಂದು ಅರಿವಾದಾಗ ವಸಿಷ್ಠನಂತೆ ತಾನೂ ಬ್ರಹ್ಮರ್ಷಿಯಾಗಬೇಕೆಂದು ನಿರ್ಧರಿಸಿ ಘೋರ ತಪಸ್ಸಿನಲ್ಲಿ ತೊಡಗಿಕೊಂಡ. ಇದರ ಮೂಲಕ ಹೊಸ ಸ್ವರ್ಗವನ್ನೇ ಸೃಷ್ಟಿಸಬಹುದಾದ ಶಕ್ತಿಯನ್ನು ಪಡೆದ. ಇಷ್ಟಾಗಿಯೂ ವಿಶ್ವಾಮಿತ್ರನಿಗೆ ಬ್ರಹ್ಮರ್ಷಿ ಪದವಿಯನ್ನು ನೀಡುವುದಕ್ಕೆ ವಸಿಷ್ಠ ಒಪ್ಪಲಿಲ್ಲ. ಈ ಪುರಾಣ ಕತೆಯನ್ನು ನಾರಾಯಣ ಗುರುಗಳು ವ್ಯಾಖ್ಯಾನಿಸುತ್ತಿದ್ದ ಬಗೆ ಇಲ್ಲಿದೆ.
”ವಸಿಷ್ಠ ಬ್ರಾಹ್ಮಣನಾಗಿದ್ದರೆ ವಿಶ್ವಾಮಿತ್ರ ಕ್ಷತ್ರಿಯ. ಈ ಬ್ರಾಹ್ಮಣ ಮತ್ತು ಕ್ಷತ್ರಿಯರ ನಡುವಣ ಅಂತರ ಒಂದು ಅಂಗುಲದಷ್ಟು ಮಾತ್ರ. ಅಷ್ಟು ಹತ್ತಿರವಿದ್ದ ಕ್ಷತ್ರಿಯನೊಬ್ಬ ಬ್ರಾಹ್ಮಣನಾಗಲು ಹೊರಟಾಗ ಆಗಿದ್ದಿದು. ಕ್ಷತ್ರಿಯರಿಗಿಂತ ಅದೆಷ್ಟೋ ಯೋಜನಗಳ ದೂರದಲ್ಲಿರುವ ಜಾತಿಯವರು ಬ್ರಾಹ್ಮಣರಾಗಲು ಪ್ರಯತ್ನಿಸಿದರೆ ಅವರ ಸ್ಥಿತಿ ಏನಾಗಬಹುದು?”
ಕಂಡಾಗ ಅರಿಯದ್ದು…
ನಾರಾಯಣ ಗುರುಗಳ ರೈಲು ಪ್ರಯಾಣದ ವೇಳೆ ಸಂಭವಿಸಿದ ಘಟನೆಯಿದು. ಗುರುಗಳಿದ್ದ ರೈಲಿನ ಬೋಗಿಯಲ್ಲೇ ಒಂದು ರಾಜ ಕುಟುಂಬವೂ ಅವರ ಜೊತೆಗೆ ಬಂದಿದ್ದ ನಂಬೂದಿರಿಯೂ ಪ್ರಯಾಣಿಸುತ್ತಿದ್ದರು. ಗುರುಗಳು ಆಡುತ್ತಿದ್ದ ಮಾತು, ಚರ್ಚಿಸುತ್ತಿದ್ದ ವಿಚಾರಗಳ ಗಹನತೆ ಅವರ ಗಮನ ಸೆಳೆಯಿತು. ರಾಜ ಕುಟುಂಬದ ಸದಸ್ಯರು ಮತ್ತು ನಂಬೂದಿರಿಯಲ್ಲಿ ಗುರುಗಳ ಕುರಿತ ಗೌರವ ಭಾವನೆಯೊಂದು ಮೊಳೆಯಿತು. ಇವರಾರೋ ಬಹುದೊಡ್ಡ ಜ್ಞಾನಿಯಿರಬೇಕೆಂದು ಭಾವಿಸಿ ಆ ರಾಜ ಹತ್ತಿರ ಬಂದು ಗುರುಗಳನ್ನು ಕೇಳಿದ.
ರಾಜ: ತಮ್ಮ ಹೆಸರು?
ಗುರು: ನಾರಾಯಣ
ರಾಜ: ತಾವು ಜಾತಿಯಲ್ಲಿ ಯಾರು…?
ಗುರು: ಕಂಡರೆ ತಿಳಿಯುವುದಿಲ್ಲವೇ?
ರಾಜ: ಇಲ್ಲ… ತಿಳಿಯುತ್ತಿಲ್ಲ.
ಗುರು: ಕಂಡಾಗ ಅರಿವಾಗದ್ದು ಕೇಳಿದರೆ ತಿಳಿದೀತೆ…?
ಈ ಮಾತುಕತೆ ಹಾಗೆ ಕೊನೆಗೊಂಡಿತು. ಜಾತಿಯ ಬಗ್ಗೆ ಮತ್ತೊಂದು ಸಂದರ್ಭದಲ್ಲಿ ಗುರುಗಳು ಹೇಳಿದ ಮಾತು ಮೇಲಿನ ಸಂಭಾಷಣೆಯ ಅರ್ಥವನ್ನು ವಿವರಿಸುತ್ತದೆ. ”ಒಂದು ನಾಯಿ ಇನ್ನೊಂದು ನಾಯಿಯನ್ನು ಕಂಡರೆ ತಕ್ಷಣ ಅದಕ್ಕೆ ಎದುರಿರುವ ಪ್ರಾಣಿ ತನ್ನದೇ ಜಾತಿಯದ್ದು ಎಂದರಿವಾಗುತ್ತದೆ. ಈ ಸಾಮರ್ಥ್ಯ ಎಲ್ಲಾ ಪ್ರಾಣಿಗಳಿಗೂ ಇದೆ. ಅದಕ್ಕನುಸಾರವಾಗಿಯೇ ಅವರು ಬದುಕುತ್ತವೆ. ಮನುಷ್ಯನಿಗೆ ಮಾತ್ರ ತನ್ನ ಜಾತಿಯ ಬಗ್ಗೆ ಸಂಶಯ. ಈ ವಿಷಯದಲ್ಲಿ ಮೃಗಗಳಿಗಿರುವಷ್ಟು ಬುದ್ಧಿಯೂ ಅವನಿಗಿಲ್ಲ. ಎದುರಿಗಿರುವಾತ ಮನುಷ್ಯನಾಗಿದ್ದರೂ ಅವನ ಜಾತಿ ಯಾವುದೆಂದು ಕೇಳುವ ಮೂರ್ಖತನವಿರುವುದು ಮನುಷ್ಯನಿಗೆ ಮಾತ್ರ.”
ಜಾತಿಭೇದದ ಏಕತೆ
ತಿರುವನಂತಪುರ ಪಟ್ಟಣದ ಸಮೀಪವಿರುವ ದೇವಾಲಯವೊಂದರ ಆಡಳಿತದ ಹಕ್ಕಿಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ವ್ಯಾಜ್ಯವೊಂದಿತ್ತು. ಇದನ್ನು ಪರಿಹರಿಸಲು ನಾರಾಯಣ ಗುರುಗಳ ಮಧ್ಯಪ್ರವೇಶವನ್ನು ಅವರು ಬಯಸಿದರು. ಎರಡೂ ಗುಂಪಿನ ಮುಖ್ಯಸ್ಥರ ನಿಯೋಗವೊಂದು ಶಿವಗಿರಿ ಸಂದರ್ಶಿಸಿ ಗುರುಗಳನ್ನು ಭೇಟಿಯಾಗಿ ”ತಾವು ಬಂದು ವ್ಯಾಜ್ಯವನ್ನು ಬಗೆಹರಿಸಿಕೊಡಿ” ಎಂಬ ವಿನಂತಿಸಿತು.
”ನಾವು ಬರಬೇಕೇ, ಬಂದರೆ ನಿಮ್ಮ ವ್ಯಾಜ್ಯ ಮುಗಿಯುತ್ತದೆಯೇ? ನಾವು ಹೇಳಿದಂತೆ ನಡೆಯುತ್ತೀರಾ? ನಾವೇನೋ ಒಮ್ಮೆ ಬಂದು ಹೋಗಬಹುದು. ನೀವು ಎರಡೂ ಗುಂಪಿನವರು ಸದಾ ಅಲ್ಲಿಯೇ ಬದುಕಬೇಕಾದವರು. ನಿಮ್ಮೊಳಗಿನವರೇ ಈ ಸಂಧಾನ ನಡೆಸುವುದು ಸರಿ ಎನಿಸುತ್ತದೆ” ಎಂದು ಗುರುಗಳು ತಮ್ಮ ಅಭಿಪ್ರಾಯವನ್ನು ಹೇಳಿದರು.
ಗುರುಗಳನ್ನು ಆಹ್ವಾನಿಸಲು ಬಂದವರು ತಮ್ಮ ಪಟ್ಟು ಬಿಡಲಿಲ್ಲ. ”ಸ್ವಾಮಿ ಶ್ರೀಪಾದರು ಅಲ್ಲಿಗೆ ಆಗಮಿಸಿದರೆ ನಮ್ಮ ವ್ಯಾಜ್ಯ ಖಂಡಿತವಾಗಿಯೂ ಪರಿಹಾರವಾಗುತ್ತದೆ” ಎಂದು ಒತ್ತಾಯಿಸಿದರು.
”ನಿಮಗೆ ಹಾಗನ್ನಿಸುತ್ತಿದ್ದರೆ ನಾವು ಬರುತ್ತೇವೆ. ಆದರೆ ವ್ಯಾಜ್ಯ ಬಗೆಹರಿಯಬಹುದು ಎಂದು ನಮಗನ್ನಿಸುತ್ತಿಲ್ಲ” ಎಂದು ಗುರುಗಳು ಉತ್ತರಿಸಿದರು.
ಗುರುಗಳು ಆ ದೇವಾಲಯವನ್ನು ತಲುಪಿದ್ದು ಒಂದು ವಿಶೇಷ ದಿನದಂದು. ಸಾಮಾನ್ಯವಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿರುವ ದಿನ. ಗುರುಗಳ ಆಗಮನದ ಸುದ್ದಿ ಊರಿಗೆಲ್ಲಾ ತಿಳಿದಿದ್ದರಿಂದ ಗುರು ದರ್ಶನದ ಉದ್ದೇಶದಿಂದಲೂ ಬಹುಸಂಖ್ಯೆಯಲ್ಲಿ ಜನರು ನೆರೆದಿದ್ದರು. ಸಂಜೆಯ ದೀಪಾರಾಧನೆಯ ಹೊತ್ತಾಯಿತು. ಆಗ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ನಿಂತಿರುವ ಜನರ ಗುಂಪೊಂದು ಗುರುಗಳ ಕಣ್ಣಿಗೆ ಬಿತ್ತು. ಶುಚಿರ್ಭೂತರಾಗಿ ಹಣೆಯಲ್ಲಿ ಭಸ್ಮ ಧರಿಸಿದ್ದ ಜನರ ಗುಂಪು ದೂರದಿಂದಲೇ ಕೈಮುಗಿದು ಮುಂದೆ ಬಾರದೆ ನಿಂತಿತ್ತು.
ಇದನ್ನು ಓದಿದ್ದೀರಾ: ನೆನಪು | ವಿಚಾರವಾದಿ ಅರಸು ಅವರ ಸಹನೆ ದೊಡ್ಡದು: ಎಂ.ಸಿ. ನಾಣಯ್ಯ
ಗುರುಗಳು ತಮ್ಮನ್ನು ಆಹ್ವಾನಿಸಿದ್ದವರ ಬಳಿ ”ಅಲ್ಲಿ ನಿಂತಿರುವವರು ಯಾರು? ಅವರೇಕೆ ಅಷ್ಟು ದೂರದಲ್ಲಿ ನಿಂತಿದ್ದಾರೆ. ಇಲ್ಲೇ ಬರಬಹುದಲ್ಲವೇ?” ಎಂದು ಕೇಳಿದರು.
ವ್ಯಾಜ್ಯ ಪರಿಹಾರಕ್ಕಾಗಿ ಗುರುಗಳನ್ನು ಆಹ್ವಾನಿಸಿದ ಒಂದು ಗುಂಪಿನ ಮುಖ್ಯಸ್ಥ ಹೇಳಿದ ”ಅವರು ‘ಪುಲಯ’ ಸಮುದಾಯದವರು. ಅವರಿಗೆ ದೇಗುಲದೊಳಗೆ ಪ್ರವೇಶವಿಲ್ಲ. ಹಾಗಾಗಿ ದೂರವೇ ನಿಂತಿದ್ದಾರೆ. ಅವರು ಸ್ವಾಮಿ ಶ್ರೀಪಾದರ ದರ್ಶನ ಬಯಸಿ ಇಲ್ಲಿಯ ತನಕ ಬಂದಿದ್ದಾರೆ.”
ಗುರುಗಳು ಹೇಳಿದರು: ”ಓ, ಹಾಗೋ… ಅವರನ್ನು ದೇವಸ್ಥಾನದೊಳಕ್ಕೆ ಕರೆಯಿರಿ. ಅವರೂ ಮನುಷ್ಯರೇ ತಾನೇ? ಅವರಿಗೂ ದೇಹ ಶುದ್ಧಿಯಿದೆ. ಶುಭ್ರವಸ್ತ್ರಗಳನ್ನು ಧರಿಸಿದ್ದಾರೆ. ಆರೋಗ್ಯವಂತರಾಗಿಯೂ ಇದ್ದಾರೆಂಬಂತೆ ಕಾಣಿಸುತ್ತದೆ. ದುಡಿಮೆಯಿಂದ ಹುರಿಗಟ್ಟಿದ ದೇಹವೇ ಅವರ ಆರೋಗ್ಯವನ್ನು ತೋರಿಸಿಕೊಡುತ್ತಿದೆಯಲ್ಲಾ… ಅವರ ವೃತ್ತಿಯೂ ಒಳ್ಳೆಯದೇ ಆಗಿರುವಂತಿದೆ.”
ಮುಖ್ಯಸ್ಥ: ಸಾಧ್ಯವಿಲ್ಲ ಸ್ವಾಮಿಗಳೇ… ಪುಲಯ ಜಾತಿಯವರನ್ನು ನಮ್ಮ ದೇವಸ್ಥಾನದೊಳಕ್ಕೆ ಪ್ರವೇಶಿಸಲು ಬಿಡುವುದಿಲ್ಲ. ಅದು ನಮಗೆ ನೋವುಂಟು ಮಾಡುವ ಸಂಗತಿ. ಶ್ರೀಪಾದರು ಅಂಥದ್ದೊಂದು ಅಪ್ಪಣೆ ಕೊಡಿಸಬೇಡಿ.
ಗುರು: ತಾವೀಗ ‘ನಮಗೆ’ ಎಂದಿರಿ. ಈ ‘ನಾವು’ ಯಾರು?
ಮುಖ್ಯಸ್ಥ: ನನ್ನ ಗುಂಪಿನವರು…

ಈ ಮಾತನ್ನು ಕೇಳಿದ ಗುರುಗಳು ”ನಿಮಗಿಷ್ಟವಿಲ್ಲದಿದ್ದರೆ ನಾವೂ ಒತ್ತಾಯಿಸುವುದಿಲ್ಲ” ಎಂದು ದೇವಸ್ಥಾನದ ಆಡಳಿತದ ವ್ಯಾಜ್ಯಕ್ಕೆ ಕಾರಣರಾದ ಮತ್ತೊಂದು ಗುಂಪಿನ ಮುಖ್ಯಸ್ಥನನ್ನು ಉದ್ದೇಶಿಸಿ ”ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನು?” ಎಂದು ಪ್ರಶ್ನಿಸಿದರು.
ಆ ಗುಂಪಿನ ಮುಖ್ಯಸ್ಥನೂ ”ನಮಗೂ ಒಪ್ಪಿಗೆಯಿಲ್ಲ ಸ್ವಾಮಿ. ಪುಲಯ ಜಾತಿಯವರನ್ನು ದೇವಸ್ಥಾನದೊಳಗೆ ಪ್ರವೇಶಿಸಲು ಬಿಡುವುದೇ…?”
ಗುರುಗಳು ಎದ್ದು ಅಲ್ಲಿಂದ ಹೊರಡಲು ಸಿದ್ಧರಾದರು. ಆಗ ಎರಡೂ ಗುಂಪಿನ ಮುಖ್ಯಸ್ಥರು ”ನಮ್ಮ ನಡುವಣ ವ್ಯಾಜ್ಯದ ವಿಚಾರ…” ಎಂದು ಕೇಳಲು ಮುಂದಾದರು.
ಅವರ ಮಾತನ್ನು ತಡೆದ ಗುರುಗಳು ”ನಿಮ್ಮ ನಡುವೆ ವ್ಯಾಜ್ಯವೇ ಇಲ್ಲವಲ್ಲ. ನಿಮ್ಮ ಐಕ್ಯವನ್ನು ಈಗಷ್ಟೇ ತೋರಿಸಿಕೊಟ್ಟಿರಲ್ಲವೇ? ಅವರನ್ನು ದೇವಸ್ಥಾನದೊಳಗೆ ಕಾಲಿಡಲು ಬಿಡುವುದಿಲ್ಲ ಎಂದು ಏಕಕಂಠದಿಂದ ಎರಡೂ ಗುಂಪಿನವರು ಹೇಳಿದಿರಲ್ಲವೇ… ಇನ್ನು ನಮಗಿಲ್ಲಿ ಕೆಲಸವಿಲ್ಲ” ಎಂದು ತಕ್ಷಣವೇ ಗುರುಗಳು ದೇಗುಲದಿಂದ ಹೊರ ನಡೆದರು.

ಎನ್.ಎ.ಎಂ. ಇಸ್ಮಾಯಿಲ್
ಪತ್ರಕರ್ತ, ಲೇಖಕ ಎನ್‌ಎಎಂ ಇಸ್ಮಾಯಿಲ್ ಅವರು ಉದಯವಾಣಿ, ಪ್ರಜಾವಾಣಿ ಪತ್ರಿಕೆಗಳಲ್ಲಿ ಉಪಸಂಪಾದಕ, ಸಹಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಕಲರ್‍ಸ್ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಂತ್ರಜ್ಞಾನ ಮತ್ತು ಯಕ್ಷಗಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆಸಕ್ತರಾಗಿದ್ದಾರೆ.