ಹಕ್ಕಿಜ್ವರದಿಂದ ಮೆಕ್ಸಿಕೋದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಇದು ವಿಶ್ವದಲ್ಲಿಯೇ ಈ ಖಾಯಿಲೆಯಿಂದ ಸಾವನ್ನಪ್ಪಿದ ಮೊದಲನೇ ಸಾವಾಗಿದೆ. ಸದ್ಯ ಈ ಹಕ್ಕಿಜ್ವರ ಕೊರೊನಾಗಿಂತ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಈ ಜ್ವರ ಅನೇಕ ದೇಶಗಳಲ್ಲಿ ವೇಗವಾಗಿ ಹರಡುತ್ತಿದೆ.
ಮೆಕ್ಸಿಕೋದಲ್ಲಿ 59 ವರ್ಷದ ವ್ಯಕ್ತಿಯೊಬ್ಬರು ಜೂನ್ 5ರಂದು ಹಕ್ಕಿ ಜ್ವರದಿಂದ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಹಕ್ಕಿ ಜ್ವರದಿಂದ ಸಾವನ್ನಪ್ಪಿದ ವ್ಯಕ್ತಿಗೆ ಈ ಸೋಂಕು ಹೇಗೆ ತಗುಲಿತು ಎಂಬ ಬಗ್ಗೆ ಯುಎನ್ ಏಜೆನ್ಸಿ ಇನ್ನು ಸ್ಪಷ್ಟಿಕರಣ ನೀಡಿಲ್ಲ. ಏಪ್ರಿಲ್ 17ರಂದು ರೋಗಿಗೆ ಜ್ವರ, ಉಸಿರಾಟದ ತೊಂದರೆ ಹಾಗೂ ಅತಿಸಾರದಂತಹ ರೋಗ ಲಕ್ಷಣಗಳಿಂದ ರೋಗಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲದೇ, ರೋಗಿಯೂ ದೀರ್ಘಕಾಲದ ಮೂತ್ರಪಿಂಡ ವೈಫಲ್ಯ, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಂತಹ ಖಾಯಿಲೆಗಳನ್ನು ಮೊದಲೇ ಹೊಂದಿದ್ದರು ಎಂದು ತಿಳಿದುಬಂದಿದೆ.
ಹಕ್ಕಿ ಜ್ವರ ಸೋಂಕಿನ ಮೂಲವು ಅಸ್ಪಷ್ಟವಾಗಿದ್ದರೂ, ಮೆಕ್ಸಿಕೋದಲ್ಲಿನ ಕೋಳಿಗಳಲ್ಲಿ A(H5N2) ವೈರಸ್‌ಗಳು ಪತ್ತೆಯಾಗಿವೆ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಮೆಕ್ಸಿಕೋದ ಆರೋಗ್ಯ ಸಚಿವಾಲಯವು ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ.
ಇತ್ತೀಚಿನ ವರದಿಗಳಲ್ಲಿ ಹಸುಗಳು ಮತ್ತು ಹಾಲಿನ ಮೂಲಕ ಮನುಷ್ಯರಿಗೆ ಹರಡುವ ಪ್ರಕರಣಗಳು ಅಮೆರಿಕದ ಅನೇಕ ನಗರಗಳಲ್ಲಿ ವರದಿಯಾಗಿದೆ. ಈ ತಿಂಗಳ ಆರಂಭದಲ್ಲಿ ಎಚ್5ಎನ್1 ವೈರಸ್ ಪ್ರಕರಣಗಳ ಹೆಚ್ಚಳದ ಬಗ್ಗೆ ಭಾರತವೂ ಎಚ್ಚರಿಕೆ ನೀಡಿತ್ತು. H5N1 ವೈರಸ್ ಅನ್ನು ಹಕ್ಕಿಜ್ವರ ಎಂದೂ ಕರೆಯುತ್ತಾರೆ.
ದೇಶದಲ್ಲಿ ಹಕ್ಕಿಜ್ವರ (ಎಚ್5ಎನ್1) ಹರಡುತ್ತಿರುವ ಹಿನ್ನೆಲೆ, ಎಲ್ಲ ರಾಜ್ಯಗಳಿಗೂ ಎಚ್ಚರಿಕೆ ಸಂದೇಶ ರವಾನಿಸಿರುವ ಕೇಂದ್ರ ಸರ್ಕಾರವು, ಸಾಕುಪಕ್ಷಿಗಳು ಮತ್ತು ಕೋಳಿಗಳು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದರೆ ಪಶುಸಂಗೋಪನೆ ಇಲಾಖೆಗೆ ಕೂಡಲೇ ಮಾಹಿತಿ ನೀಡಬೇಕು ಎಂದು ಹೇಳಿದೆ.
ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಮತ್ತು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಈ ಕುರಿತು ಮೇ 25ರಂದು ಜಂಟಿ ಸೂಚನೆ ಹೊರಡಿಸಿವೆ. ಆಂಧ್ರಪ್ರದೇಶ (ನೆಲ್ಲೂರ್ ಜಿಲ್ಲೆ), ಮಹಾರಾಷ್ಟ್ರ (ನಾಗ್ಪುರ), ಕೇರಳ (ಆಲಪ್ಪುಳ, ಕೋಟ್ಟಾಯಂ, ಪತ್ತನಂತಿಟ್ಟ) ಮತ್ತು ಜಾರ್ಖಂಡ್ (ರಾಂಚಿ) ರಾಜ್ಯಗಳಲ್ಲಿ ಈಗಾಗಲೇ ಹಕ್ಕಿಜ್ವರದ ಪ್ರಕರಣಗಳು ವರದಿಯಾಗಿವೆ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ. ಈ ನಾಲ್ಕು ರಾಜ್ಯಗಳಿಗೆ ಎಚ್ಚರಿಕೆ ನೀಡಲಾಗಿದೆ.
ಹಕ್ಕಿಜ್ವರ ವೈರಾಣುವು ವೇಗವಾಗಿ ಪ್ರಸರಣವಾಗುತ್ತದೆ. ಅದು ಮಾನವರಿಗೂ ತಗುಲುವ ಅಪಾಯವಿದೆ. ಅದರ ಪ್ರಸರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಲಹೆ ನೀಡಿದೆ.
ಹಕ್ಕಿಜ್ವರ ಎಂದರೇನು?
ಎಚ್5ಎನ್1 ವೈರಾಣು ‘ಎ’ ಮಾದರಿಯ ಉಪಮಾದರಿಯಾಗಿದ್ದು, ಅದು ಹಕ್ಕಿಗಳನ್ನು ಬಾಧಿಸುತ್ತದೆ ಮತ್ತು ಏವಿಯನ್ ಇನ್‌ಫ್ಲುಯೆನ್ಜಾಕ್ಕೆ (ಹಕ್ಕಿಜ್ವರ) ಕಾರಣವಾಗುತ್ತದೆ. ಇನ್‌ಫ್ಲುಯೆನ್ಜಾ ವೈರಾಣುಗಳ ವಂಶವಾಹಿ ಸಂರಚನೆಯು ನಾನಾ ಬಗೆಯ ಹೆಮಗ್ಲುಟಿನಿನ್ (ಎಚ್) ಮತ್ತು ನ್ಯೂರಾಮಿನೈಡೇಸ್ (ಎನ್) ಎಂಬ ಪ್ರೋಟಿನ್‌ಗಳಿಂದ ಆಗಿರುತ್ತದೆ.
ಈ ವೈರಸ್ ಮೊದಲಿಗೆ 1996ರಲ್ಲಿ ಚೀನಾದಲ್ಲಿ ಪತ್ತೆಯಾಗಿದ್ದು, ನಂತರ ಜಗತ್ತಿನಾದ್ಯಂತ ಹರಡಿತ್ತು. 2006ರಿಂದ ಭಾರತದಲ್ಲೂ ಹಕ್ಕಿಜ್ವರ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಈ ವರ್ಷದ ಮಾರ್ಚ್ ತಿಂಗಳಿನಿಂದಲೂ ಹಕ್ಕಿಜ್ವರದ ಪ್ರಸರಣ ಕುರಿತು ಜಾಗತಿಕ ಮಟ್ಟದಲ್ಲಿ ಆತಂತ ವ್ಯಕ್ತವಾಗಿದೆ. ಏವಿಯನ್ ಇನ್ಫ್ಲುಯೆನ್ಸ ಎಂದೂ ಕರೆಯಲ್ಪಡುವ ಬರ್ಡ್ ಫ್ಲೂ ವೈರಸ್ ಸೋಂಕು ಆಗಿದ್ದು ಅದು ಪಕ್ಷಿಗಳಿಗೆ ಮಾತ್ರವಲ್ಲ, ಮನುಷ್ಯರು ಮತ್ತು ಇತರ ಪ್ರಾಣಿಗಳಿಗೂ ಸೋಂಕು ತರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪಕ್ಷಿಗಳು ಮತ್ತು ಸಸ್ತನಿಗಳಲ್ಲಿ ಈ ರೋಗದಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ.
ಹಕ್ಕಿ ಜ್ವರವು ಸೋಂಕಿತ ಪಕ್ಷಿಗಳು ಅಥವಾ ಅವುಗಳ ಹಿಕ್ಕೆಗಳ ನೇರ ಸಂಪರ್ಕದ ಮೂಲಕ ಹರಡುತ್ತದೆ. ಇಲ್ಲಿಯವರೆಗೆ ಮನುಷ್ಯನಿಂದ ಮನುಷ್ಯನಿಗೆ ಹರಡಿರುವ ಯಾವುದೇ ಪುರಾವೆಗಳಿಲ್ಲ.
ಹಕ್ಕಿ ಜ್ವರದ ಲಕ್ಷಣಗಳು
- ಕೆಮ್ಮು, ಉಸಿರಾಟದಲ್ಲಿ ತೊಂದರೆ, ತೀವ್ರ ಜ್ವರ, ತಲೆನೋವು, ಸ್ನಾಯುಗಳ ನೋವು, ಮೂಗು ಸೋರುವಿಕೆ, ಗಂಟಲಿನ ಊತ, ಮೂಗು ಮತ್ತು ಒಸಡಿನಿಂದ ರಕ್ತ ಸೋರುವಿಕೆ, ಕೆಲವರಲ್ಲಿ ವಾಕರಿಕೆ, ವಾಂತಿ ಮತ್ತು ಬೇಧಿಯು ಕಂಡುಬರುವುದು ಎಂದು ಹೇಳಲಾಗಿದೆ.
- ಇನ್ನು ಕೆಲವರಲ್ಲಿ ಕಣ್ಣು ಕೆಂಪಾಗುವ ಸಮಸ್ಯೆಯು ಕಂಡುಬರುವುದು. ಸೋಂಕು ದೇಹವನ್ನು ಒಗ್ಗಿಕೊಂಡು 2-5 ದಿನಗಳಲ್ಲಿ ಇದರ ಲಕ್ಷಣಗಳು ಕಾಣಿಸಿಕೊಳ್ಳುವುದು. ಇದಕ್ಕೆ ತಕ್ಷಣವೇ ಚಿಕಿತ್ಸೆ ಪಡೆದುಕೊಂಡರೆ ಆಗ ಇದು ಪ್ರಾಣಾಂತಿಕವಾಗುವುದನ್ನು ತಪ್ಪಿಸಬಹುದು.
ಮನುಷ್ಯರಿಗೆ ಹಕ್ಕಿ ಜ್ವರ ಹಬ್ಬುವುದು ಹೇಗೆ?
- ಸೋಂಕು ತಗುಲಿರುವಂತಹ ಹಕ್ಕಿಯನ್ನು ಸ್ಪರ್ಶಿಸುವುದು, ಅದರ ಹಿಕ್ಕೆಗಳು ಮತ್ತು ಹಾಸನ್ನು ಮುಟ್ಟುವುದು, ಸೋಂಕಿತ ಹಕ್ಕಿಯನ್ನು ಕೊಲ್ಲುವುದು ಅಥವಾ ಅದನ್ನು ಅಡುಗೆಗೆ ಬಳಸುವುದು ಇತ್ಯಾದಿಯಿಂದ ಸೋಂಕು ಹರಡುವುದು.
- ಸೋಂಕು ಹರಡಿರುವಂತಹ ಪ್ರದೇಶದಲ್ಲಿ ಕೋಳಿ ಅಥವಾ ಕೋಳಿ ಮೊಟ್ಟೆಯನ್ನು ಸರಿಯಾಗಿ ಬೇಯಿಸಿ ತಿಂದರೆ ಅದರಿಂದ ಯಾವುದೇ ಸೋಂಕು ಹಬ್ಬುವ ಸಾಧ್ಯತೆಯು ಇರುವುದಿಲ್ಲ.
ಈ ಸುದ್ದಿ ಓದಿದ್ದೀರಾ? ಲೈಂಗಿಕ ಹಗರಣ | ಜೂನ್ 6ಕ್ಕೆ ಪ್ರಜ್ವಲ್ ರೇವಣ್ಣ ಕಸ್ಟಡಿ ಅವಧಿ ಮುಕ್ತಾಯ: ಮತ್ತೆ ಕೋರ್ಟ್‌ಗೆ ಹಾಜರು
ಹಕ್ಕಿ ಜ್ವರ ಬರದಂತೆ ತಡೆಯುವುದು ಹೇಗೆ?
- ಕೈಗಳನ್ನು ನಿರಂತರವಾಗಿ ತೊಳೆಯುತ್ತಿರಿ.
- ಬಿಸಿ ನೀರು ಮತ್ತು ಸೋಪು ಬಳಸಿ. ಆಹಾರ ಸೇವನೆಗೆ ಮೊದಲು ಅಥವಾ ಅದನ್ನು ತಯಾರಿಸುವ ಮೊದಲು ಕೈಗಳನ್ನು ಸರಿಯಾಗಿ ತೊಳೆಯಿರಿ. ಆಲ್ಕೋಹಾಲ್ ಇರುವ ಸ್ಯಾನಿಟೈಸರ್ ಅನ್ನು ಪ್ರಯಾಣದ ವೇಳೆ ಬಳಸಿ.
- ತೆರೆದ ಮಾರುಕಟ್ಟೆ ಅಥವಾ ಹಕ್ಕಿಗಳು ಹೆಚ್ಚಿರುವಂತಹ ಮಾರುಕಟ್ಟೆಯಿಂದ ದೂರವಿರಿ.
- ಸರಿಯಾಗಿ ಬೇಯಿಸದೆ ಇರುವ ಕೋಳಿ ಅಥವಾ ಬಾತುಕೋಳಿ ತಿನ್ನಬೇಡಿ, ಹಸಿ ಮೊಟ್ಟೆ ಸೇವಿಸಬೇಡಿ.
- ಪ್ರಯಾಣಕ್ಕೆ ಮೊದಲು ಜ್ವರದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯಿರಿ. ನೀವು ಹಕ್ಕಿ ಜ್ವರ ಬರದಂತೆ ತಡೆಯಲು ಸಾಧ್ಯವಿಲ್ಲದೆ ಇದ್ದರೂ ಅದರ ಅಪಾಯವನ್ನು ಕಡಿಮೆ ಮಾಡಬಹುದು.
- H5N1 ಹಕ್ಕಿಜ್ವರದ ವೈರಸ್‌ಗೆ ಈಗಾಗಲೇ ಲಸಿಕೆ ಕಂಡು ಹಿಡಿಯಲಾಗಿದ್ದು, ಇದಕ್ಕೆ ಅಮೆರಿಕಾದ ಎಫ್‌ಡಿಎಯಿಂದ ಅನುಮತಿ ಕೂಡ ಸಿಕ್ಕಿದೆ. ಆದರೆ, ಇದನ್ನು ಸಾರ್ವಜನಿಕ ಬಳಕೆಗೆ ಇದುವರೆಗೆ ನೀಡಲಾಗಿಲ್ಲ.