ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ (ಮಾ.22) ಸಂಜೆ ಸುರಿದ ಭಾರಿ ಮಳೆಗೆ ಮೊದಲ ಬಲಿಯಾಗಿದೆ. ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದ ಪರಿಣಾಮ ರಕ್ಷಾ ಎಂಬ ಮೂರು ವರ್ಷದ ಹೆಣ್ಣು ಸಾವನ್ನಪ್ಪಿರುವ ಘಟನೆ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೀವನಹಳ್ಳಿಯಲ್ಲಿ ನಡೆದಿದೆ.
ಕಮ್ಮನಹಳ್ಳಿ ಬಳಿಯ ಕುಳ್ಳಪ್ಪ ಸರ್ಕಲ್ ನಿವಾಸಿಗಳಾದ ಶಕ್ತಿ ಮತ್ತು ಸತ್ಯ ದಂಪತಿಯ 3ವರ್ಷದ ಮಗು ರಕ್ಷಾ ಮೃತಪಟ್ಟ ಮಗು.
ರಕ್ಷಾ ತನ್ನ ತಂದೆ ಸತ್ಯ ಜೊತೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಗಾಳಿ ಮಳೆ ಜೋರಾದ ಪರಿಣಾಮ ಬೈಕ್ ಮುಂಭಾಗದಲ್ಲಿ ಕುಳಿತ್ತಿದ್ದ ರಕ್ಷಾ ತಲೆ ಮೇಲೆಯೇ ಮರದ ತುಂಡು ಬಿದ್ದಿದೆ. ತೀವ್ರ ರಕ್ತಸ್ರಾವವಾಗಿದ್ದ ಮಗುವನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ಬಳಿಕ ಬೌರಿಂಗ್ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ.
ಆಸ್ಪತ್ರೆಯ ಬಳಿ ತಂದೆ ತಾಯಿಯ ಆಕ್ರಂದನ ಮುಗಿಲು ಮುಟ್ಡಿದೆ. ಇನ್ನು ಆಸ್ಪತ್ರೆಗೆ ಬಿಬಿಎಂಪಿ ಪೂರ್ವವಲಯದ ಜಂಟಿ ಆಯುಕ್ತೆ ಸರೋಜಾದೇವಿ, ಬಿಬಿಎಂಪಿ ಅರಣ್ಯ ಘಟಕದ ಮುಖ್ಯಸ್ಥ ಸ್ವಾಮಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಘಟನೆ ಸಂಬಂಧ ಪುಲಕೇಶಿ ನಗರ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು | ಬೆಳ್ಳಂಬೆಳಗ್ಗೆ ಭೀಕರ ಅಪಘಾತ; 2 ವರ್ಷದ ಮಗು ಸೇರಿ ಇಬ್ಬರು ಸಾವು
ಈ ಬಗ್ಗೆ ಮೃತ ರಕ್ಷಾಳ ಮಾವ ವಿಜಯ್ ಪ್ರತಿಕ್ರಿಯಿಸಿ, “ರಾತ್ರಿ 8.30 ರ ಸುಮಾರಿಗೆ ಮರ ಬಿದ್ದ ವಿಷಯ ತಿಳಿತು. ಆಸ್ಪತ್ರೆಯಲ್ಲಿ ಎಷ್ಟೇ ಪ್ರಯತ್ನಪಟ್ಟರೂ ಮಗು ಉಳಿಯಲಿಲ್ಲ. ತಲೆಗೆ ಏಟು ಬಿದ್ದಿದ್ದರಿಂದ ಮಗು ರಕ್ತಸ್ರಾವ ಆಗಿ ಮೃತಪಟ್ಟಿದೆ. ಮಗು ತಂದೆಗೂ ಬೆನ್ನುಮೂಳೆ ಮುರಿದಿದೆ ಅಂತಿದ್ದಾರೆ. ಬಿಬಿಎಂಪಿಯವರು ಮರಗಳನ್ನ ತೆರವು ಮಾಡಬೇಕು. ಮಳೆ ಬಂದಾಗ ಪದೇ ಪದೇ ಇಂತ ಘಟನೆಗಳು ನಡೆಯುತ್ತಲೇ ಇವೆ. ರಾತ್ರಿ ಬಂದು ಪರಿಹಾರ ಕೊಡುತ್ತೇವೆ ಎಂದಿದ್ದಾರೆ” ಎಂದರು.