ಕೇವಲ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಮತ್ಸ್ಯ ಉದ್ಯಮದಲ್ಲಿ ಪಾಲ್ಗೊಳ್ಳದೆ, ಜೀವ ಸಂಕುಲವನ್ನು ಪ್ರೀತಿಸಿ, ಪ್ರಕೃತಿಯನ್ನು ಗೌರವಿಸುವುದಾದರೆ... ಮೀನುಕೃಷಿ ಅಭಿವೃದ್ಧಿಗೆ ಉತ್ತಮ ಅವಕಾಶಗಳಿವೆ.
ಭಾರತ ಸರ್ಕಾರದ ಆದೇಶದನ್ವಯ ಪ್ರತೀವರ್ಷ ಜುಲೈ 10ನೇ ತಾರೀಖಿನಂದು ದೇಶದಾದ್ಯಂತ ಮೀನುಗಾರಿಕೆಗೆ ಸಂಬಂಧಪಟ್ಟ ಸಂಘ ಸಂಸ್ಥೆಗಳು ‘ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ’ಯನ್ನು ಆಚರಿಸುತ್ತವೆ.
ಹೀರಾಲಾಲ್ ಚೌದುರಿ ಮತ್ತು ಕೆ.ಹೆಚ್. ಆಲಿಕುನ್ನಿ ಎಂಬ ಇಬ್ಬರು ವಿಜ್ಞಾನಿಗಳು ಐವತ್ತರ ದಶಕದ ಅಂತ್ಯದಲ್ಲಿ ಮೀನಿನ ಪಿಟ್ಯುಟರಿ ಗ್ರಂಥಿಯಿಂದ ತಯಾರಿಸಿದ ಹಾರ್ಮೋನನ್ನು ಬಳಸಿ ಕೃತಕ ವಿಧಾನದಿಂದ ಗೆಂಡೆ ಮೀನುಗಳನ್ನು ವಂಶಾಭಿವೃದ್ಧಿ ಮಾಡಿಸಿದ ನೆನಪಿಗಾಗಿ, ಈ ದಿನಾಚರಣೆಯನ್ನು ಆಯ್ಕೆ ಮಾಡಲಾಗಿದೆ. ಭಾರತೀಯ ಮೀನುಗಾರಿಕಾ ರಂಗದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದ ಮಹಾನ್ ವಿಜ್ಞಾನಿಗಳನ್ನು ನೆನೆಯುವುದರ ಜೊತೆಗೆ, ಈ ಕಸುಬಿನಲ್ಲಿ ಮುಂದೆ ಸಾಗಬೇಕಾದ ವೈಜ್ಞಾನಿಕ ದಿಕ್ಕು-ದೆಸೆಗಳನ್ನು ಚರ್ಚಿಸಲು ಅವಕಾಶವನ್ನು ಒದಗಿಸುತ್ತದೆ ಈ ದಿನಾಚರಣೆ.
ಪ್ರಸ್ತುತ ಕೃಷಿರಂಗದಲ್ಲಾಗುತ್ತಿರುವ ತಲ್ಲಣಗಳನ್ನು ಗಮನಿಸಿದರೆ, ಕೃಷಿಯು ಲಾಭದಾಯಕವಾಗಿ ಉಳಿದಿಲ್ಲ. ರೈತರು ಅನಿವಾರ್ಯವಾಗಿ ಕೃಷಿಕರಾಗಿದ್ದಾರೆ. ‘ಕೈ ಕೆಸರಾದರೆ-ಬಾಯಿ ಮೊಸರಲ್ಲ; ಕೈ ಕೆಸರಾದರೆ-ಮೈಕೆಸರು’ ಆಗುವ ದಿನ ಬಂದಿದೆ. ರೈತರು ಬುದ್ಧಿವಂತರಾಗದ ಹೊರತು ಉಳಿಗಾಲವಿಲ್ಲ. ರೈತರು ಅನಗತ್ಯವಾಗಿ ಒಂದೇ ಕಸುಬಿಗೆ ಅಂಟಿಕೊಳ್ಳದೆ, ಲಾಭದಾಯಕವಾಗಿರುವ ಇತರೆ ಉಪಕಸುಬುಗಳತ್ತ ಮುಖಮಾಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಮೀನುಕೃಷಿಗೆ ಸಂಬಂಧಿಸಿದ ಚಟುವಟಿಕೆಗಳು ಲಾಭದಾಯಕವಾಗಿದ್ದು, ರೈತರು ವ್ಯವಸ್ಥಿತ ಉತ್ಸಾಹದೊಂದಿಗೆ ಪ್ರಯತ್ನಪಡಬಹುದು.
ಇದನ್ನು ಓದಿದ್ದೀರಾ?: ಸಂವಿಧಾನದ ಪೀಠಿಕೆ ಮತ್ತು ಮೂಲಭೂತ ರಚನೆಯ ಹಿನ್ನೆಲೆಯಲ್ಲಿ ಒಂದು ಚರ್ಚೆ
ವೇಗವಾಗಿ ಬೆಳೆಯುತ್ತಿರುವ ಪ್ರಪಂಚದ ಜನಸಂಖ್ಯೆಗೆ, ಸಸಾರಜನಕದ ಕೊರತೆಯನ್ನು ಮೀನುಗಾರಿಕೆ ಕ್ಷೇತ್ರ ಮಾತ್ರ ನೀಗಿಸಬಲ್ಲದು. ಜಾಗತಿಕ ಹಸಿವು ಮತ್ತು ಅಪೌಷ್ಟಿಕತೆಯನ್ನು ನೀಗಿಸುವಲ್ಲಿ ಮೀನುಗಾರಿಕೆ ಕ್ಷೇತ್ರದ ಪಾಲು ಗಣನೀಯ ಮತ್ತು ಗಮನಾರ್ಹ. ಆದ್ದರಿಂದ ಮೀನುಗಾರಿಕೆಗೆ ಸಂಬಂಧಿಸಿದ ಕೆಲವು ಸ್ವಾರಸ್ಯಕರ ಅಂಶಗಳನ್ನು ಈ ಕೆಳಗೆ ವಿವರಿಸಲಾಗಿದೆ.
ಜಾಗತಿಕವಾಗಿ, ಮೀನುಗಾರಿಕೆ ಕ್ಷೇತ್ರವು ಸುಮಾರು 540 ಮಿಲಿಯನ್ ಅಂದರೆ ಪ್ರಪಂಚದ ಒಟ್ಟು ಜನಸಂಖ್ಯೆಯ ಶೇಕಡಾ 8ರಷ್ಟು ಜನರಿಗೆ ಜೀವನಾಧಾರವಾಗಿದೆ (ವಿಶ್ವ ಆಹಾರ ಸಂಸ್ಥೆ ಮಾಧ್ಯಮ ಕೇಂದ್ರ, ಜನವರಿ 2011). ಆದರೆ, ಶೇಕಡಾ 80ಕ್ಕೂ ಹೆಚ್ಚು ಮೀನಿನ ಸಂತತಿಗಳು ವಿನಾಶದ ಅಂಚಿನಲ್ಲಿವೆ. ಒಂಭತ್ತು ಕಡಲತೀರವುಳ್ಳ ರಾಜ್ಯಗಳನ್ನೊಳಗೊಂಡ ಭಾರತವೂ ಮೀನುಗಾರಿಕೆ ಕ್ಷೇತ್ರದಲ್ಲಿ ಪ್ರಮುಖ ದೇಶವಾಗಿದೆ. ಪ್ರಪಂಚದಲ್ಲಿ ಮೀನಿನ ಒಟ್ಟು ಉತ್ಪಾದನೆ 186.6 ಮಿಲಿಯನ್ ಟನ್ಗಳಷ್ಟಿದ್ದು, ಭಾರತವು 18.4 ಮಿಲಿಯನ್ ಟನ್ (ಸಾಗರದಿಂದ 3.6 ಮತ್ತು ಸಿಹಿನೀರು ಮೀನುಕೃಷಿಯಿಂದ 14.8) ಮೀನನ್ನು ಉತ್ಪಾದಿಸುತ್ತಿದ್ದು, ಜಾಗತಿಕವಾಗಿ ಮೀನುಗಾರಿಕೆಯಲ್ಲಿ ಎರಡನೇ ಸ್ಥಾನ ಮತ್ತು ಮೀನುಕೃಷಿಯಲ್ಲಿ ಎರಡನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಮೀನುಕೃಷಿಯ ಕ್ಷೇತ್ರವು ವಾರ್ಷಿಕ ಶೇಕಡಾ 6ರಷ್ಟು ಬೆಳೆಯುತ್ತಿದೆ. ಮೀನು ಮತ್ತು ಮೀನಿನ ಉತ್ಪನ್ನಗಳನ್ನು 17.8 ಲಕ್ಷ ಟನ್ನಷ್ಟು ಸುಮಾರು 75 ರಾಷ್ಟ್ರಗಳಿಗೆ ರಫ್ತು ಮಾಡುತ್ತಿದ್ದು, 62 ಸಾವಿರ ಕೋಟಿಗೂ ಅಧಿಕ ಲಾಭ ಗಳಿಸುತ್ತಿದೆ. ಕೃಷಿ ಉತ್ಪನ್ನಗಳ ರಫ್ತಿನ ಶೇಕಡಾ 20ರಷ್ಟು ಮತ್ತು ದೇಶದ ಒಟ್ಟು ರಫ್ತಿನ ಶೇ. 10ರಷ್ಟಿದೆ. ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸ್ಸಿನಂತೆ ಪ್ರತೀ ವ್ಯಕ್ತಿಗೆ ಮೀನಿನ ಲಭ್ಯತೆ 23 ಕೆ.ಜಿ.ಯಷ್ಟಿರಬೇಕು. ಆದರೆ ನಮ್ಮ ದೇಶದ ವಾರ್ಷಿಕ ಮೀನಿನ ಲಭ್ಯತೆ 12.5 ಕೆ.ಜಿ.ಗಳಷ್ಟಿದೆ.

ಭಾರತವು ಪ್ರಪಂಚದ ಮತ್ಸ್ಯ ವೈವಿಧ್ಯತೆಯ ಶೇ. 10ರಷ್ಟನ್ನು ಹೊಂದಿದ್ದು, ಸಮುದ್ರದ 1571, ಚೌಳುಪ್ಪು ನೀರಿನ 07, ಸಿಹಿನೀರಿನ 967, ಸಮುದ್ರ-ಚವುಳು ನೀರಿನ 394, ಚವುಳು-ಸಿಹಿನೀರಿನ 111 ಮತ್ತು ಮೂರು ಪ್ರದೇಶಗಳಲ್ಲಿ ಇರುವ 203 ತಳಿಗಳನ್ನು ಹೊಂದಿದೆ. ಸುಮಾರು 30 ಮಿಲಿಯನ್ ಜನರಿಗೆ ಜೀವನಾಧಾರವಾಗಿರುವ ಈ ಕ್ಷೇತ್ರದಿಂದ ವಾರ್ಷಿಕ 60,534 ಕೋಟಿಗಳಷ್ಟು ವಹಿವಾಟು ನಡೆಯುತ್ತಿದ್ದು, ಇದು ದೇಶದ ಒಟ್ಟು ಆಂತರಿಕ ಉತ್ಪಾದಕತೆಯ(ಜಿಡಿಪಿ) ಶೇ. 1.12ರಷ್ಟು ಮತ್ತು ಕೃಷಿಕ್ಷೇತ್ರದ ಒಟ್ಟು ಆಂತರಿಕ ಉತ್ಪಾದಕತೆಯ (ಎಜಿಡಿಪಿ) ಶೇ. 7.2ರಷ್ಟಿದೆ.
ದೇಶದಲ್ಲಿ ವಿವಿಧ ಕೃಷಿವೈವಿಧ್ಯ ವಲಯಗಳಿದ್ದು, ಮೀನುಕೃಷಿ ಅಭಿವೃದ್ಧಿಗೆ ಉತ್ತಮ ಅವಕಾಶಗಳಿವೆ. ಆಂಧ್ರಪ್ರದೇಶ, ಹರಿಯಾಣ, ಪಂಜಾಬ್, ಅಸ್ಸಾಂ, ಒಡಿಸಾ ಮತ್ತು ಪಶ್ಚಿಮ ಬಂಗಾಳದಲ್ಲಿ ಆದ ನೀಲಿಕ್ರಾಂತಿ ದೇಶದ ಇತರೆ ರಾಜ್ಯಗಳಿಗೂ ಪಸರಿಸಬೇಕಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯವು ಕಡಲ ಮೀನುಗಾರಿಕೆಯಲ್ಲಿ ಉತ್ತಮವಾಗಿದ್ದು, ಸಿಹಿ ನೀರಿನ ಮೀನು ಕೃಷಿಯಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ ವಿಫುಲ ಅವಕಾಶಗಳನ್ನು ಹೊಂದಿದೆ. ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು ಮತ್ತು ಇತರೆ ಸಂಘ ಸಂಸ್ಥೆಗಳ ಸಾಂಘಿಕ ಕನಸು, ಜ್ಞಾನದ ಸಹಕಾರ ಮತ್ತು ಸಮನ್ವಯ ಕಾರ್ಯಾಚರಣೆಯಿಂದ ಮೀನುಗಾರಿಕೆ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದಲ್ಲಿ ಆಹಾರ ಉತ್ಪಾದನೆಯ ಹೆಚ್ಚಳದ ಜೊತೆಗೆ ಉದ್ಯೋಗ ಸೃಷ್ಟಿಸುವಲ್ಲಿ, ಗ್ರಾಮೀಣ ಅಭಿವೃದ್ಧಿಯಲ್ಲಿ ಮತ್ತು ಅಪೌಷ್ಟಿಕತೆ ನೀಗಿಸುವಲ್ಲಿ ಸಫಲರಾಗಬಹುದು.
ಇತರೆ ರಾಜ್ಯಗಳಿಗೆ ಹೋಲಿಸಿದರೆ, ರಾಜ್ಯದಲ್ಲಿ ಮೀನುಕೃಷಿ ನಿರೀಕ್ಷಿತ ಮಟ್ಟಕ್ಕೆ ಬೆಳೆದಿಲ್ಲ. ಪ್ರತೀ ಜಮೀನಿನ ಶೇ. 1-5ರಷ್ಟು ಮೀನುಕೃಷಿಗೆ ಮೀಸಲಿಡುವುದರಿಂದ ಹೆಚ್ಚು ಆದಾಯ ಗಳಿಸುವುದರ ಜೊತೆಗೆ ನೀರಿನ ಸದ್ಬಳಕೆಯಾಗುತ್ತದೆ. ಮಣ್ಣಿನ ಲವಣಗಳ ನಿರ್ವಹಣೆಯೊಂದಿಗೆ ಅಂತರ್ಜಲ ಮರುಪೂರಣವಾಗುತ್ತದೆ. ರಾಜ್ಯದಲ್ಲಿ 1 ಮಿಲಿಯನ್ ಹೆಕ್ಟೇರ್ ಚೌಳು ಮತ್ತು ಕ್ಷಾರಮಣ್ಣಿನಿಂದ ಕೂಡಿದ್ದು, ಇಂತಹ ಪ್ರದೇಶಗಳನ್ನು ಮೀನುಕೃಷಿಗೆ ಬಳಸಿಕೊಳ್ಳಬೇಕು. ತರಕಾರಿ ಮತ್ತು ಕಾಫಿ ಬೆಳೆಗಾರರು ಅಗತ್ಯವಿರುವಾಗ ನೀರು ಹಾಯಿಸಲು ದೊಡ್ಡ ಕೃಷಿಹೊಂಡಗಳನ್ನು ಮಾಡಿಕೊಂಡಿರುತ್ತಾರೆ. ಈ ತರಹದ ಕೊಳಗಳು ರಾಜ್ಯದಲ್ಲಿ ಸಾವಿರಾರಿವೆ. ಯಾವ ಕೊಳಗಳನ್ನು ಖಾಲಿ ಬಿಡದೆ, ಸೂಕ್ತ ಮೀನು ತಳಿಗಳನ್ನು ಬಿತ್ತನೆ ಮಾಡಿ. ಕರಾವಳಿ ಪ್ರದೇಶದಲ್ಲಿ ಇಟ್ಟಿಗೆ ತೆಗೆಯಲು ಬಳಸಿದ ನೀರುನಿಲ್ಲುವ ಜಾಗಗಳಲ್ಲಿಯೂ ಮೀನುಕೃಷಿ ಕೈಗೊಳ್ಳಬಹುದು. ಯಾವುದೇ ಕಾರಣಕ್ಕೂ ಆಫ್ರಿಕನ್ ಕ್ಯಾಟ್ಫಿಶ್ ಬೆಳೆಯಬೇಡಿ. ಅದು ಕಾನೂನುಬಾಹಿರ. ಪ್ರಕೃತಿಯನ್ನು ಅಡವಿಟ್ಟು ಲಾಭಗಳಿಸಲು ಮುಂದಾಗಬೇಡಿ.
ಇನ್ನು ಸಂಪನ್ಮೂಲರಹಿತ ಬಾಂಧವರಿಗೆ ಈ ಪ್ರಕೃತಿಯೇ ಸಂಪತ್ತು. ಪಶ್ಚಿಮ ಘಟ್ಟಗಳಲ್ಲಿ ಸಿಗುವ ಅಪಾರವಾದ ಸ್ಥಳೀಯ ಮೀನುಗಳಿಗೆ ಆಲಂಕಾರಿಕ ಮೀನು ಉದ್ಯಮದಲ್ಲಿ ಬೇಡಿಕೆ ಇದೆ. ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಸೌಂದರ್ಯ ಪ್ರಜ್ಞೆ, ವಾಸ್ತು ಪರಿಕಲ್ಪನೆಗಳಿಂದಾಗಿ ಈ ಉದ್ಯಮ ಉತ್ತಮವಾಗಿ ಬೆಳೆಯುತ್ತಿದೆ. ನಿಮ್ಮಲ್ಲಿ ಸಿಗುವ ಮಳಲಿ, ಮೆಲನ್ ಬಾರ್ಬ್, ಡಾನಿಯೋ ಮತ್ತು ಅನೇಕ ಜಲಸಸ್ಯಗಳನ್ನು ತಂದು ಕೃತಕ ವಾತಾವರಣಕ್ಕೆ ಹೊಂದಿಸಿ, ಉತ್ತಮ ಬೆಲೆ ಮಾರಾಟ ಮಾಡಬಹುದು. ಬದಲಾಗುತ್ತಿರುವ ಜಗತ್ತಿನೊಂದಿಗೆ, ನಾವೂ ಕೂಡ ಹೊಂದಿಕೊಂಡು ಹೊಸ ಕ್ರಿಯಾಶೀಲತೆಯೊಂದಿಗೆ, ಹೊಸ ಉದ್ಯಮಗಳ ವಿಸ್ತಾರಗಳನ್ನು ಅರ್ಥ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕಿದೆ. ಇದಕ್ಕೆ ಬೇಕಿರುವುದು ಸೂಕ್ತ ತಂತ್ರಜ್ಞಾನಗಳ ಪರಿಚಯ, ಮಾರುಕಟ್ಟೆಯ ಇತಿಮಿತಿ, ವೈಯಕ್ತಿಕ ಆಸಕ್ತಿ, ಆರ್ಥಿಕ ನೆರವು ಇತ್ಯಾದಿ. ವೈಯಕ್ತಿಕ ಆಸಕ್ತಿಯಿಂದ, ಇತರರ ನೆರವು ಪಡೆಯದೆ ಯಶಸ್ಸಾದ ಅನೇಕರಿದ್ದಾರೆ. ವಿಶ್ವವಿದ್ಯಾಲಯಗಳು ಮತ್ತು ಇತರೆ ಸಂಘ ಸಂಸ್ಥೆಗಳು ಒಂದು ಮಟ್ಟದವರೆಗೆ ನೆರವಾಗಬಹುದು. ಆದರೆ ಯಶಸ್ಸಿಗೆ ಬೇಕಾದ ಇತರೆ ವೈಯಕ್ತಿಕ ಗುಣಗಳನ್ನು ಬೆಳೆಸಿಕೊಳ್ಳದೆ, ಈ ಉದ್ಯಮದಲ್ಲಿ ಪಾಲ್ಗೊಳ್ಳಬೇಡಿ.
ಹೆಚ್ಚಿನ ನೆರವು ನೀಡುವ ದೃಷ್ಟಿಯಿಂದ, ಭಾರತ ಸರ್ಕಾರವು ಹೈದರಬಾದ್ನಲ್ಲಿ 2006ರಲ್ಲಿ ‘ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ’ಯನ್ನು ಸ್ಥಾಪಿಸಿತು. ಜಲಾಶಯ ಅಭಿವೃದ್ಧಿ, ಮೀನುಮರಿ ಉತ್ಪಾದನೆ, ಆಳ ಸಮುದ್ರದ ಮೀನುಗಾರಿಕೆ, ಬಂದರು ಅಭಿವೃದ್ಧಿ, ಸಾಂಧ್ರೀಕೃತ ಮೀನುಕೃಷಿ, ಆಲಂಕಾರಿಕ ಮೀನು ಉತ್ಪಾದನೆ, ಸಂಸ್ಕರಣಾ ಘಟಕಗಳ ಅಭಿವೃದ್ಧಿ, ಮಾನವ ಸಂಪನ್ಮೂಲ ಅಭಿವೃದ್ಧಿಯ ಆಶಯದೊಂದಿಗೆ ಉತ್ತಮ ಕೆಲಸ ನಿರ್ವಹಿಸುತ್ತಿದೆ. ರಾಜ್ಯದ ಜನರು ಅದರ ಪ್ರಯೋಜನ ಪಡೆಯಲು ಮುಂದಾಗಬೇಕು.
ಆದರೆ, ನಾವು ನಮ್ಮ ಅವ್ಯವಸ್ಥಿತ ನಿರ್ವಹಣೆಯಿಂದ ಮತ್ಸ್ಯ ಸಂಪನ್ಮೂಲವನ್ನು ಹಾಳುಗೆಡವಿದ್ದೇವೆ. ಇದರ ಪರಿಣಾಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಳಿಮುಖವಾಗುತ್ತಿರುವ ಉತ್ಪಾದನೆ, ಸಣ್ಣಕಣ್ಣಿನ ಬಲೆಯ ಬಳಕೆ, ಮಳೆಗಾಲದ ಮೀನುಗಾರಿಕೆ, ವಿದೇಶೀ ಮತ್ಸ್ಯಗಳ್ಳರ ಹಾವಳಿ, ಪರಿಸರ ಮಾಲಿನ್ಯದಂತಹ ಸಮಸ್ಯೆಗಳು ಕಡಲ ಮೀನುಗಾರಿಕೆಯನ್ನು ಬಾಧಿಸಿದರೆ, ಮೀನುಕೃಷಿಯಲ್ಲಿ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ, ಉತ್ತಮ ಮೀನುಮರಿಗಳ ಕೊರತೆ, ಪಾಕು, ತಿಲಾಪಿಯ ಮತ್ತು ಆಫ್ರಿಕನ್ ಕ್ಯಾಟ್ಫಿಶ್ ಕೃಷಿಕರು ಸಾಗುತ್ತಿರುವ ಅಡ್ಡದಾರಿಗಳು ಬಾಧಿಸುತ್ತಿವೆ. ಈಗಾಗಲೇ ಸಾಕಷ್ಟು ಸಮಸ್ಯೆಯಲ್ಲಿದೆ.

ಆದ್ದರಿಂದ ಭಾರತದ ಮೀನುಗಾರಿಕೆ ವಿಜ್ಞಾನಿಗಳು, ಮೀನುಗಾರಿಕೆ ಅಧಿಕಾರಿಗಳು ಮತ್ತು ಇತರೆ ಸಂಬಂಧಿಸಿದ ಜನರು ಸಂಘಟಿತರಾಗಿ ಸ್ಪಷ್ಟ ಗುರಿಯೊಂದಿಗೆ ಯೋಜನಾಬದ್ಧವಾಗಿ ದುಡಿದು ಮತ್ಸ್ಯ ಸಂಪತನ್ನು ಸಂರಕ್ಷಿಸುತ್ತಾ ಪ್ರಗತಿ ಸಾಧಿಸಬೇಕಾಗಿದೆ. ಈ ‘ಮೀನುಕೃಷಿಕರ ದಿನಾಚರಣೆ’ ಸುಸ್ಥಿರ ಮೀನುಕೃಷಿಯನ್ನು ಅಭಿವೃದ್ಧಿ ಪಡಿಸುವತ್ತ ನಮ್ಮಲ್ಲಿ ಹೊಸ ಆಶಯಗಳನ್ನು ಸೃಷ್ಟಿಸಲಿ. ಆಶಯಗಳು ಕನಸಿನಂತೆ ಕಾಡಲಿ. ಕನಸು ನನಸಾಗಲಿ. ಮತ್ಸ್ಯ ಸಂಪನ್ಮೂಲ ಉಳಿಯಲಿ ನಾಳಿನ ಪೀಳಿಗೆಗೆ. ಜಲಚರಗಳ ವ್ಯವಹಾರದಲ್ಲಿ ಯಶಸ್ಸು ನಿಮ್ಮ ಆಸಕ್ತಿ ಮತ್ತು ನಿರಂತರ ಕಲಿಯುವಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಕೇವಲ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಈ ಉದ್ಯಮದಲ್ಲಿ ಪಾಲ್ಗೊಳ್ಳದೆ, ಜೀವ ಸಂಕುಲವನ್ನು ಪ್ರೀತಿಸಿ, ಪ್ರಕೃತಿಯನ್ನು ಗೌರವಿಸುವುದಾದರೆ, ಈ ಉದ್ಯಮಕ್ಕೆ ನಿಮ್ಮನ್ನು ಸ್ವಾಗತಿಸುತ್ತಾ, ಮೀನುಗಾರಿಕೆ ಮಹಾವಿದ್ಯಾಲಯ, ಮಂಗಳೂರು; ಕರ್ನಾಟಕ ಪಶು, ಪ್ರಾಣಿ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯ, ಬೀದರ್ ನಿಮ್ಮೊಡನಿರುತ್ತದೆ ಎಂದು ತಿಳಿಸಲಿಚ್ಛಿಸುತ್ತೇನೆ.
(ಮೀನುಗಾರಿಕೆಗೆ ಸಂಬಂಧಿಸಿ ರೈತರು ಲೇಖಕರನ್ನು 99457 83906 ಸಂಪರ್ಕಿಸಬಹುದು)

ಡಾ. ಶಿವಕುಮಾರ್ ಮಗದ
ಜಲ ಕೃಷಿಯಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ವೃತ್ತಿಯಲ್ಲಿ 32 ವರ್ಷಗಳ ಅನುಭವ ಹೊಂದಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿಯೂ 30 ವರ್ಷಗಳ ಅನುಭವ ಹೊಂದಿದ್ದಾರೆ. ಮಂಗಳೂರಿನ ಎಕ್ಕೂರಿನಲ್ಲಿರುವ ಮೀನುಗಾರಿಕೆ ಕಾಲೇಜಿನಲ್ಲಿ ಡೀನ್ ಆಗಿದ್ದರು. ಸದ್ಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 16 ಪುಸ್ತಕಗಳು ಸೇರಿದಂತೆ 22 ಸಂಶೋಧನಾ ಪ್ರಬಂಧಗಳು, ಹಲವಾರು ಲೇಖನಗಳನ್ನೂ ಬರೆದಿದ್ದಾರೆ.