“ಅನ್ನ, ಆರೋಗ್ಯ, ಆಶ್ರಯ, ಅಕ್ಷರ ಇದೇ ನಮ್ಮ ಸರ್ಕಾರದ ಮೂಲಮಂತ್ರವಾಗಿದ್ದು, ಬಡವರ ಕಲ್ಯಾಣವೇ ನಮ್ಮ ಆದ್ಯತೆ. ಪ್ರಧಾನಮಂತ್ರಿ ಆವಾಸ್ ಯೋಜನೆ ‘ಸರ್ವರಿಗೂ ಸೂರು’ ಯೋಜನೆಯಡಿ ರಾಜ್ಯದಾದ್ಯಂತ ನಿರ್ಮಾಣಗೊಳ್ಳುತ್ತಿರುವ 1,80,253 ಮನೆಗಳ ಪೈಕಿ ಪೂರ್ಣಗೊಂಡಿರುವ 36,789 ಮನೆಗಳನ್ನು ಮಾರ್ಚ್2 ರಂದು ಲೋಕಾರ್ಪಣೆ ಮಾಡಿದ್ದೇವೆ” ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಮಾರ್ಚ್ 2ರಂದು ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಆವಾಸ್ ಯೋಜನೆ ಸರ್ವರಿಗೂ ಸೂರು ಯೋಜನೆಯಡಿ ನೀಡಲಾಗುವ ಮನೆಗಳ ಹಂಚಿಕೆ ಹಾಗೂ ಹಕ್ಕುಪತ್ರಗಳ ವಿತರಣಾ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.
ಮುಂದುವರೆದು ಮಾತನಾಡಿದ ಅವರು, “ಕೊಳಗೇರಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಒತ್ತು ನೀಡಲಾಗಿದೆ. ಬಡ ವರ್ಗದ ಜನರಿಗೆ ನಮ್ಮ ಗ್ಯಾರಂಟಿಗಳು ನೆರವಾಗಿದ್ದು, ಅವರ ಏಳಿಗೆಗಾಗಿ ಹಲವು ಕಾರ್ಯಕ್ರಮ ರೂಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ತಿಳಿಸಿದರು.
“ಅಸಹಾಯಕರ, ಬಡವರ ಏಳಿಗೆಯೇ ನಮ್ಮ ಆದ್ಯತೆ. ಉದ್ಯೋಗ, ಕುಡಿಯುವ ನೀರಿಗೆ ಮೊದಲು ಪ್ರಾಶಸ್ತ್ಯ ನೀಡುತ್ತೇವೆ. ಈ ದೇಶದ ಬಡವರಿಗೆ ಮನೆ ನೀಡಬೇಕು ಎಂದು ಮೊದಲು ಕಾನೂನು ತಂದಿದ್ದು, ಇಂದಿರಾಗಾಂಧಿ ಅವರು” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
“ಮನೆ ಬಾಗಿಲಿಗೆ ಬಂತು ಸರ್ಕಾರ ಕಾರ್ಯಕ್ರಮದಲ್ಲಿ ಸಾಕಷ್ಟು ಜನ ರಾಜೀವ್ ಗಾಂಧಿ ವಸತಿ ನಿಗಮದ ಮನೆಗಳಿಗೆ ಸರ್ಕಾರ ನಿಗದಿ ಮಾಡಿರುವಷ್ಟು ಹಣ ನೀಡಲು ಆಗುವುದಿಲ್ಲ ಎಂದು ಮನವಿ ಸಲ್ಲಿಸಿದ್ದರು. ವಸತಿ ಸಚಿವರಾದ ಜಮೀರ್ ಅವರು ಕ್ಯಾಬಿನೆಟ್ ಮುಂದೆ ಇಟ್ಟು ₹5 ಲಕ್ಷವನ್ನು ಸರ್ಕಾರವೇ ನೀಡಿ ಬಡವರಿಗೆ ಮನೆ ನೀಡುವಂತೆ ಮಾಡಿದ್ದಾರೆ. ಇದು ಕರ್ನಾಟಕದ ಇತಿಹಾಸದಲ್ಲೇ ಐತಿಹಾಸಿಕ ತೀರ್ಮಾನ” ಎಂದರು.
“ಬಡವರ ಮನೆ ಮೇಲೆಯೂ ಕೇಂದ್ರ ಸರ್ಕಾರ ಜಿಎಸ್‌ಟಿ ಹಾಕಿದೆ. ಇದು ದುರ್ದೈವದ ಸಂಗತಿ. ಪ್ರಧಾನ ಮಂತ್ರಿಗಳು, ಕೇಂದ್ರ ಸಚಿವರಿಗೆ ಇಲ್ಲಿಂದಲೇ ಮನವಿ ಮಾಡುತ್ತೇನೆ. ಬಡವರ ಮನೆ ಮೇಲೆ ಜಿಎಸ್‌ಟಿ ಹಾಕಬೇಡಿ. ಸುಮಾರು 1 ಲಕ್ಷದ 26 ಸಾವಿರ ಜಿಎಸ್‌ಟಿಯನ್ನು ಬಡವರು ನೀಡಲು ಸಾಧ್ಯವೇ?” ಎಂದು ಪ್ರಶ್ನಿಸಿದರು.
“ದೇವರು ವರ, ಶಾಪ ಏನನ್ನೂ ನೀಡುವುದಿಲ್ಲ ಬದಲಾಗಿ ಅವಕಾಶ ನೀಡುತ್ತಾನೆ. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡು ₹5 ಲಕ್ಷವನ್ನು ಸರ್ಕಾರವೇ ನೀಡಿ ಮನೆ ನೀಡುತ್ತಿದೆ. ಬೆಂಗಳೂರು ನಗರದಲ್ಲಿ ಕೊಳೆಗೇರಿಗಳನ್ನು ಕಡಿಮೆ ಮಾಡಬೇಕು ಎನ್ನುವ ಸಂಕಲ್ಪ ಕೈಗೊಂಡಿದ್ದೇವೆ. ಈ ಬಾರಿಯ ಬಜೆಟ್‌ನಲ್ಲಿ ಕೂಡ ಬಡವರಿಗೆ ಮನೆ ನೀಡುವ ಯೋಜನೆಯನ್ನು ಮುಂದುವರೆಸಿದ್ದೇವೆ. 1 ಲಕ್ಷ 26 ಸಾವಿರ ಹಣ ಕಟ್ಟುವುದನ್ನು ಶಾಸಕ ಬಸವರಾಜು ಅವರು ಕೇಂದ್ರ ಸರ್ಕಾರದ ಬಳಿ ಮಾತನಾಡಿ ಮನ್ನಾ ಮಾಡಿಸಲಿ” ಎಂದರು.
“ಈ ದೇಶದ ಬಡವರಿಗೆ ಅಕ್ಕಿ, ಮನೆ, ಭೂಮಿ ನೀಡುವ ಕಾರ್ಯಕ್ರಮ ಪ್ರಾರಂಭ ಮಾಡಿದ್ದೇ ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ನೋಡಿ ಮೋದಿಯವರು ಪ್ರತಿ ದಿನ ನಮ್ಮ ಗ್ಯಾರಂಟಿ ಯೋಜನೆಗಳು ಎಂದು ಜಾಹಿರಾತು ನೀಡುತ್ತಿದ್ದಾರೆ. ಬಿಜೆಪಿ ಗ್ಯಾರಂಟಿ ಎಂದು ಹೇಳದೆ ಮೋದಿ ಗ್ಯಾರಂಟಿ ಎಂದು ಕರೆಯುತ್ತಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿ ಕುಟುಂಬಗಳಿಗೂ ತಲುಪಿದೆ. ಭಾರತದ ಯಾವುದೇ ರಾಜ್ಯದಲ್ಲು ಇಂತಹ ಯೋಜನೆಯಿಲ್ಲ. ಐದು ಗ್ಯಾರಂಟಿ ಯೋಜನೆಗಳು ಸೇರಿ ಕೈ ಗಟ್ಟಿಯಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ಪ್ರಕರಣ: ಸಿಸಿಬಿ ತನಿಖೆಗೆ ವರ್ಗಾಯಿಸಿ ಆದೇಶ
ಈ ವೇಳೆ, ವಸತಿ, ಅಲ್ಪಸಂಖ್ಯಾತ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್, ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಭೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಹಾಗೂ ಗೋವಿಂದ ರಾಜು, ಶಾಸಕ ಬೈರತಿ ಬಸವರಾಜು, ವಸತಿ ಇಲಾಖೆ ಅಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು, ಫಲಾನುಭವಿಗಳು, ಸಾರ್ವಜನಿಕರು ಹಾಜರಿದ್ದರು.