ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ನಿವೃತ್ತಿ ವಯಸ್ಸನ್ನು 60ರಿಂದ 65ಕ್ಕೆ ಏರಿಸುವ ಚಿಂತನೆಯನ್ನು ಸರ್ಕಾರ ನಡೆಸಿದೆ. ಜಯದೇವ ಹೃದಯ ರಕ್ತನಾಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರೊಂದಿಗೆ ನಡೆಸಿದ ಸಂವಾದದ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಈ ಮಾಹಿತಿಯನ್ನು ನೀಡಿದ್ದಾರೆ.
ಸಂವಾದದ ವೇಳೆ ಹಿರಿಯ ವೈದ್ಯರುಗಳು ಸೇವಾವಧಿ ವಿಸ್ತರಿಸಬೇಕು ಎಂದು ಪ್ರಸ್ತಾಪಿಸಿದರು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಲೆಂದು ಹಲವು ವರ್ಷಗಳು ಕಷ್ಟಪಟ್ಟು ಕೆಲಸ ಮಾಡಲಾಗಿರುತ್ತದೆ. ಆದರೆ 20-25 ವರ್ಷ ಕಾಲ ಮಾತ್ರ ಈ ಸೇವೆ ಸಲ್ಲಿಸಲು ಅವಕಾಶ ಸಿಗುತ್ತದೆ. ಈ ನಿಟ್ಟಿನಲ್ಲಿ ಸೇವಾವಧಿ ವಿಸ್ತರಿಸಬೇಕು ಎಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಕಳ್ಳರಾದರೇ ಸರ್ಕಾರಿ ವೈದ್ಯರು; ವೈದ್ಯರಿಗೆ 4 ಬಾರಿ ಬಯೋಮೆಟ್ರಿಕ್ ಅಸ್ತ್ರವೇಕೆ?
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಸೇವಾವಧಿಯನ್ನು ಐದು ವರ್ಷಗಳ ಕಾಲ ವಿಸ್ತರಿಸುವ ನಿರ್ಧಾರ ಮಾಡಲಾಗುವುದು. ಅನುಭವಿ ವೈದ್ಯರನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ ಎಂದಿದ್ದಾರೆ. ಆದರೆ ಸದ್ಯ ರಾಜ್ಯ ಸಚಿವರ ಈ ದ್ವಂದ್ವ ನಿಲುವು ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗಷ್ಟೇ ಸರ್ಕಾರಿ ವೈದ್ಯರು ತಮ್ಮ ಕೆಲಸದ ಅವಧಿಯಲ್ಲಿ 4 ಬಾರಿ ಬಯೋಮೆಟ್ರಿಕ್ ನೀಡಬೇಕು ಎಂದು ಸರ್ಕಾರ ನಿಯಮ ರೂಪಿಸಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಕಾರ್ಯನಿರ್ವಹಿಸಲ್ಲ, ಬೆಳಿಗ್ಗೆ ಹಾಜರಾತಿ ಹಾಕಿ ಬಳಿಕ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ಆರೋಪಗಳಿವೆ. ಈ ಆರೋಪ ನಿಜವೂ ಹೌದು. ಸರ್ಕಾರಿ ವೈದ್ಯರ ಸೇವೆಯ ಮೇಲೆ ನಿಗಾ ವಹಿಸುವ ನಿಟ್ಟಿನಲ್ಲಿ ಸರ್ಕಾರ ನಾಲ್ಕು ಬಾರಿ ಬಯೋಮೆಟ್ರಿಕ್ ನೀಡಬೇಕು ಎಂದು ಸೂಚಿಸಿದೆ.
ಇದನ್ನು ಓದಿದ್ದೀರಾ? ಮಂಗಳೂರು | ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನ ಗರಿ ಹೊರತೆಗೆದು ಜೀವ ಉಳಿಸಿದ ವೆನ್ಲಾಕ್ ಆಸ್ಪತ್ರೆಯ ವೈದ್ಯರು
ಈಗ ಅದೇ ಸರ್ಕಾರ ಈ ವೈದ್ಯರುಗಳ ಸೇವಾವಧಿಯನ್ನು ವಿಸ್ತರಿಸುವ ನಿರ್ಧಾರವನ್ನು ಮಾಡಿದೆ. ಒಂದೆಡೆ ಸರ್ಕಾರಿ ವೈದ್ಯರು ವೇತನ ಪಡೆಯುತ್ತಾರೆ, ಆದರೆ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂಬ ಕಾರಣಕ್ಕೆ ಕ್ರಮ ಕೈಗೊಳ್ಳುವುದು. ಮತ್ತೊಂದೆಡೆ ಅದೇ ವೈದ್ಯರಿಗೆ ಇನ್ನೂ ಐದು ವರ್ಷಗಳ ಕಾಲ ವೇತನ ಪಡೆಯಲು ಅವಕಾಶ ನೀಡಿ ಸೇವಾವಧಿ ವಿಸ್ತರಣೆ ಮಾಡುವುದು!
ವೃತ್ತಿಪರರಿಗೆ, ನುರಿತರಿಗೆ ಅವಕಾಶ ನೀಡಬೇಕೆಂಬುದು ಸರಿ. ಆದರೆ ಯುವಜನರಿಗೆ, ಮುಂದಿನ ಪೀಳಿಗೆಗೆ ಕಲಿಕೆಯ ಅವಕಾಶ ಎಲ್ಲಿದೆ? ವೈದ್ಯಕೀಯ ಶಿಕ್ಷಣ ಪಡೆದ ಲಕ್ಷಾಂತರ ವಿದ್ಯಾರ್ಥಿಗಳು ಇಂದಿಗೂ ಉದ್ಯೋಗದ ಹುಡುಕಾಟದಲ್ಲಿದ್ದಾರೆ. ಈ ಯುವಜನರಿಗೆ ಸರಿಯಾದ ತರಬೇತಿ ನೀಡಿ, ಉದ್ಯೋಗವಕಾಶ ಕಲ್ಪಿಸಬೇಕಾಗಿದ್ದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಯುವಜನರಿಗೆ ಅವಕಾಶ ನೀಡದೆ 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಮತ್ತಷ್ಟು ಅವಕಾಶ ನೀಡುವುದು ಹೇಗೆ ಸರಿ? ಈ ಹಿರಿಯ ವೈದ್ಯರನ್ನು ಯುವಕರಿಗೆ ತರಬೇತಿ ನೀಡಲು ನೇಮಿಸಬಹುದಲ್ಲವೇ?
