ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ವಿವಿಧ ಕ್ರೀಡಾಕೂಟಗಳಲ್ಲಿ ಭಾರತೀಯ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪದಕ ವಿಜೇತರಾಗಬೇಕೆಂಬ ಅಭಿಲಾಷೆ ಎಲ್ಲರದೂ ಆಗಿರುತ್ತದೆ. ದೇಶದ ಕ್ರೀಡಾ ಬೆಳವಣಿಗೆಗೆ ಅಗತ್ಯವಾದ ಪೂರಕ ಯೋಜನೆಗಳು ಇವೆ. ಆದರೆ ಕಾಲೇಜುಗಳಲ್ಲಿ ಕ್ರೀಡೆಯಲ್ಲಿ ಆಸಕ್ತಿ ಇರುವ ಪ್ರತಿಭೆಗಳನ್ನು ರೂಪಿಸುವ ದೈಹಿಕ ಶಿಕ್ಷಣ ಉಪನ್ಯಾಸಕರೇ ಇಲ್ಲದಿದ್ದರೆ ಕ್ರೀಡಾಸಕ್ತಿ ಮೂಡಿಸಲು ಸಾಧ್ಯವೇ?
ರಾಜ್ಯದ ಶೇ.99%ರಷ್ಟು ಸರ್ಕಾರಿ ಪಿಯು ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಬೋಧಿಸಲು ಹಾಗೂ ತರಬೇತಿ ನೀಡಲು ಪ್ರತ್ಯೇಕವಾಗಿ ದೈಹಿಕ ಶಿಕ್ಷಣ ಉಪನ್ಯಾಸಕರೇ ಇಲ್ಲ. ಇದರಿಂದಾಗಿ ನಗರ, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಆಸಕ್ತಿಯಿದ್ದರೂ, ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
ಕ್ರೀಡೆ ಬದುಕಿನ ಅವಿಭಾಜ್ಯ ಅಂಗವಾಗಬೇಕು. ದೈಹಿಕ ಸಾಮರ್ಥ್ಯ, ಮಾನಸಿಕ ಜಾಗೃತಿ ಮತ್ತು ವ್ಯಕ್ತಿತ್ವ ವರ್ಧಿಸುವ ಕ್ರೀಡೆ ಸದೃಢ ಬದುಕಿಗೆ ಅಗತ್ಯವಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಮೌಲ್ಯಗಳು, ಜ್ಞಾನ ಬೋಧನೆ ಜೊತೆ ಜೊತೆಗೆ ದೈಹಿಕ ಶಿಕ್ಷಣವು ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ. ಹೀಗಾಗಿ, ಕ್ರೀಡಾಪಟುಗಳಿಗೆ ಉತ್ತಮ ಮಾರ್ಗದರ್ಶನ ಸಿಗಬೇಕೆಂದು ಸರ್ಕಾರ ಪದೇ ಪದೇ ಹೇಳುತ್ತದೆ. ಆದರೆ, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಲ್ಲಿ ವಿಫಲವಾಗುತ್ತದೆ ಎಂಬುದಕ್ಕೆ ಪಿಯು ಕಾಲೇಜುಗಳ ದೈಹಿಕ ಶಿಕ್ಷಕರ ಕೊರತೆಯೇ ತಾಜಾ ಉದಾಹರಣೆ ಎನ್ನಬಹುದು.
ರಾಜದಲ್ಲಿ ಒಬ್ಬರೇ ದೈಹಿಕ ಶಿಕ್ಷಣ ಉಪನ್ಯಾಸಕರು !
ರಾಜ್ಯದಲ್ಲಿ ಪ್ರಸ್ತುತ ಒಟ್ಟು 1,237 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿವೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸರ್ಕಾರಿ ಪಿಯು ಕಾಲೇಜುವೊಂದರಲ್ಲಿ ಮಾತ್ರ ದೈಹಿಕ ಶಿಕ್ಷಣ ಉಪನ್ಯಾಸಕರಿದ್ದಾರೆ. ಅದೊಂದು ಕಾಲೇಜು ಹೊರತುಪಡಿಸಿದರೆ ರಾಜ್ಯದ ಯಾವುದೇ ಪಿಯು ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರೇ ಇಲ್ಲ ಎನ್ನುವಂತಾಗಿದೆ.
ಮಾದರಿಯಾಗಬೇಕಾದ ಸರ್ಕಾರಿ ಪಿಯು ಕಾಲೇಜುಗಳಲ್ಲಿಯೇ ದೈಹಿಕ ಶಿಕ್ಷಣ ಉಪನ್ಯಾಸಕರ ಕೊರತೆಯಿದ್ದು, ಹುದ್ದೆಗಳ ನೇಮಕಕ್ಕೆ ಸರ್ಕಾರ ಕ್ರಮ ಕೈಗೊಳ್ಳದ ಪರಿಣಾಮ ಗ್ರಾಮೀಣ ಪ್ರದೇಶದ ಅದೆಷ್ಟೋ ಕ್ರೀಡಾ ಪ್ರತಿಭೆಗಳು ಮಸುಕಾಗುತ್ತಿವೆ.
ಶಾಲಾ ಹಂತದಲ್ಲಿ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಇನ್ನಷ್ಟು ಉನ್ನತ್ತ ಹಂತಕ್ಕೇರಲು ಪಿಯುಸಿ ಪ್ರಮುಖ ಘಟ್ಟ. ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಯ ಜೊತೆಗೆ ಉತ್ತಮ ಗುಣಮಟ್ಟದ ದೈಹಿಕ ಶಿಕ್ಷಣ ಮತ್ತು ಇತರ ಬಗೆಯ ದೈಹಿಕ ಚಟುವಟಿಕೆಗಳಲ್ಲಿ ನಿಯಮಿತ ಭಾಗವಹಿಸುವಿಕೆ ಏಕಾಗ್ರತೆಯು ಸುಧಾರಿಸುತ್ತದೆ. ಅರಿವಿನ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತದೆ. ಆದರೆ, ಬಹುತೇಕ ವಿದ್ಯಾರ್ಥಿಗಳು ಪಿಯು ಹಂತದಲ್ಲಿ ಹೆಚ್ಚಿನ ದೈಹಿಕ ಚಟುವಟಿಕೆಗಳಿಲ್ಲದ ಕಾರಣ ಕ್ರೀಡಾಸಕ್ತಿ ಕಳೆದುಕೊಳ್ಳುವಂತಾಗಿದೆ.
ಖಾಸಗಿ, ಅನುದಾನಿತ ಕಾಲೇಜುಗಳ ಕಥೆ ಏನು?
ಸರ್ಕಾರಿ ಕಾಲೇಜುಗಳ ಕಥೆ ಇದಾಗಿದ್ದರೆ, ಅನುದಾನಿತ ಹಾಗೂ ಅನುದಾನ ರಹಿತ ಬಹುತೇಕ ಪಿಯು ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅಲ್ಲಿನ ವಿದ್ಯಾರ್ಥಿಗಳಿಗೆ ಕ್ರೀಡಾ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ದೊರೆಯುತ್ತದೆ. ಆದರೆ, ಗ್ರಾಮೀಣ ಪ್ರದೇಶ ಬಡ ವಿದ್ಯಾರ್ಥಿಗಳು ದುಬಾರಿ ಶುಲ್ಕ ಪಾವತಿಸಲು ಸಾಧ್ಯವಾಗದೇ ಸರ್ಕಾರಿ ಕಾಲೇಜಿಗೆ ದಾಖಲಾಗುತ್ತಾರೆ. ಇಲ್ಲಿ ಪ್ರತ್ಯೇಕ ದೈಹಿಕ ಶಿಕ್ಷಣ ಉಪನ್ಯಾಸಕರ ಕೊರತೆಯಿಂದ ವಿದ್ಯಾರ್ಥಿಗಳ ಪ್ರತಿಭೆ ಕಮರಿ ಹೋಗುತ್ತಿದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯ.
ಸರ್ಕಾರಿ ಪಿಯು ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಂತೂ ಇದ್ದೇ ಇದೆ. ಕೆಲವು ಕಾಲೇಜುಗಳಿಗೆ ಅರ್ಧದಷ್ಟು ʼಅತಿಥಿʼ ಉಪನ್ಯಾಸಕರೇ ಆಧಾರವಾಗಿದ್ದಾರೆ. ಇನ್ನು ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಗ್ರಂಥಪಾಲಕರು ಇಲ್ಲದ ಕಾರಣ ಇರುವ ಉಪನ್ಯಾಸಕರು, ಪ್ರಾಚಾರ್ಯರೇ ಎಲ್ಲ ಕೆಲಸಕ್ಕೂ ʼಸೈʼ ಎನ್ನಬೇಕಾಗಿದೆ. ಕಾಲೇಜಿನ ಸಣ್ಣಪುಟ್ಟ ಕೆಲಸಗಳಿಗೆ ಡಿ ದರ್ಜೆ ನೌಕರರು ಇಲ್ಲದಕ್ಕೆ ಉಪನ್ಯಾಸಕರು, ಪ್ರಾಚಾರ್ಯರೇ ಬೆಳಿಗ್ಗೆ ಬೇಗ ಕಾಲೇಜಿಗೆ ಹಾಜರಾಗಿ ತರಗತಿ ಕೋಣೆಗಳು ತೆರೆಯಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಬೀದರ್ ಜಿಲ್ಲೆಯ ಪ್ರಾಂಶುಪಾಲರೊಬ್ಬರು.
ʼಸರ್ಕಾರಿ ಪಿಯು ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರೇ ಇಲ್ಲ. ತಾಲೂಕು, ಜಿಲ್ಲಾ ಮಟ್ಟದ ಕ್ರೀಡಾಕೂಟಗಳು ನಡೆಯುವ ವೇಳೆ ಇರುವ ಉಪನ್ಯಾಸಕರಿಗೆ ಕ್ರೀಡಾ ಜವಾಬ್ದಾರಿ ನೀಡಲಾಗುತ್ತದೆ. ಇದು ಕೆಲವರಿಗೆ ಹೊರೆಯಾದರೆ, ಕೆಲವರಿಗೆ ಸಂಪೂರ್ಣ ಜ್ಞಾನವಿಲ್ಲದ ಶಿಕ್ಷಣ ಮಾಡಿಸಿದಂತಾಗುತ್ತದೆ. ಅಂತಿಮವಾಗಿ ಕ್ರೀಡಾ ಆಸಕ್ತಿ ಇರುವ ವಿದ್ಯಾರ್ಥಿಗಳು ಇದರ ಪರಿಣಾಮ ಎದುರಿಸುವಂತಾಗಿದೆʼ ಎಂದು ಹೆಸರು ಬಹಿರಂಗಪಡಿಸದ ಯಾದಗಿರಿ ಜಿಲ್ಲೆಯ ಪಿಯು ಕಾಲೇಜಿನ ಉಪನ್ಯಾಸಕರೊಬ್ಬರು ಹೇಳುತ್ತಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’
ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಜ್ಯ ಕ್ರೀಡಾ ವಿಭಾಗದ ಸಂಯೋಜಕ ರಮೇಶ ಗುಬ್ಬಿಗುಡು ಈ ದಿನ.ಕಾಮ್ ಜೊತೆ ಮಾತನಾಡಿ, “ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರು ಇಲ್ಲದಿರುವುದು ನಿಜ. ಈ ಬಗ್ಗೆ ರಾಜ್ಯ ವಿಧಾನ ಪರಿಷತ್‌ನಲ್ಲಿ ಚರ್ಚೆ ನಡೆದಿದೆ. ಸಿಇಟಿ ಮೂಲಕ ದೈಹಿಕ ಶಿಕ್ಷಣ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ” ಎಂದು ಮಾಹಿತಿ ನೀಡಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.