ಕರ್ನಾಟಕ ರಾಜ್ಯದ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರು ನಾಡಿನ ಸಮಸ್ತ ಜನತೆಗೆ 75ನೇ ಗಣರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ.
ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, “ಸಂವಿಧಾನ ಅನುಷ್ಠಾನಗೊಂಡ 75ನೇ ವರ್ಷದಲ್ಲಿ ಕರ್ನಾಟಕ ಹಾಗೂ ಭಾರತವು ಅಭೂತಪೂರ್ವ ಪ್ರಗತಿಯನ್ನು ಸಾಧಿಸಿವೆ. ಇದು ನಾವು 1950ರಲ್ಲಿ ನಮ್ಮ ಅದ್ಭುತ ಲಿಖಿತ ಸಂವಿಧಾನವನ್ನು ಅಳವಡಿಸಿಕೊಂಡ ಕಾರಣದಿಂದಾಗಿ ಸಾಧ್ಯವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಅವರ ತಂಡದ ಸದಸ್ಯರ ದೂರದೃಷ್ಟಿಗೆ ನಾವು ಅಭಾರಿಯಾಗಿದ್ದೇವೆ. ಅವರು ನಮಗೆ ಪ್ರಗತಿಯ ದಾರಿಯಲ್ಲಿ ನಡೆಯುವುದಕ್ಕೆ ದಾರಿದೀಪವಾಗಿದ್ದಾರೆ” ಎಂದರು.
“ಯುಗಯುಗಾಂತರಗಳಿಂದ ಮಾನವೀಯತೆ ನೆಲೆಸಿರುವ ರಾಷ್ಟ್ರ ನಮ್ಮ ಭಾರತ. ಇದು ವಿಭಿನ್ನ ಧರ್ಮ, ಸಮಾಜ, ಸಂಸ್ಕೃತಿ ಮತ್ತು ಭಾಷೆಗಳಿಂದ ಆಶೀರ್ವದಿಸಲ್ಪಟ್ಟಿರುವ ದೇಶವಾಗಿದೆ. ಎಲ್ಲವೂ ಪರಸ್ಪರ ಸೌಹಾರ್ದತೆಯಿಂದ ಪರಸ್ಪರ ಸಂಬಂಧ ಹೊಂದಿದೆ. ಇಡೀ ಜಗತ್ತಿಗೆ ‘ವಿವಿಧತೆಯಲ್ಲಿ ಏಕತೆ’ ಎಂಬ ಸಂದೇಶವನ್ನು ನೀಡುವ ಎಲ್ಲರ ನಡುವೆ ನಾವು ಶಾಂತಿ ಮತ್ತು ಸಾಮರಸ್ಯವನ್ನು ಸ್ಥಾಪಿಸಬೇಕು. ನಮ್ಮ ರಾಷ್ಟ್ರೀಯ ಏಕತೆಯ ಬಲವರ್ಧನೆ ಮತ್ತು ಐಕ್ಯಮತ್ಯಕ್ಕಾಗಿ ಶ್ರಮಿಸಬೇಕು. ಕರ್ನಾಟಕದ ಎಲ್ಲ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಒಳಗೊಳ್ಳುವಿಕೆಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಣ್ಣ ಕುರುಬನೆಂದು ಗೌರವಿಸದೆ, ದೇಶಪ್ರೇಮಿಯೆಂದು ಸ್ಮರಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ
“ಈ ಐತಿಹಾಸಿಕ ದಿನದಂದು ಭಾರತದ ಸಂವಿಧಾನವು ಜಾರಿಗೆ ಬಂದಿತು. ಸಂವಿಧಾನವು ಭಾರತದ ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ ಹಾಗೂ ಸಮಾನತೆಯ ಅವಕಾಶವನ್ನು ಒದಗಿಸುವುದರೊಂದಿಗೆ ದೇಶದ ಸಮಗ್ರತೆ, ಏಕತೆಯನ್ನು ಕಾಪಾಡುವ ಜತೆಗೆ ಸ್ವಾಭಿಮಾನದ ಜೀವನ ಒದಗಿಸುವ ಧ್ಯೇಯವನ್ನು ಹೊಂದಿದೆ. ಆ ಮೂಲಕ ನಾಗರಿಕರು ತಮ್ಮ ಏಳಿಗೆಯೊಂದಿಗೆ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಅವಕಾಶ ಕಲ್ಪಿಸಿದೆ. ಸಂವಿಧಾನದ ಈ ಆಶಯಗಳನ್ನು ಸಾಕಾರಗೊಳಿಸಲು ನನ್ನ ಸರ್ಕಾರ ಶ್ರಮಿಸುತ್ತಿದೆ” ಎಂದರು.
“ನನ್ನ ಸರ್ಕಾರವು ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಅದರಂತೆ, ಎಲ್ಲ ಐದು ಗ್ಯಾರಂಟಿಗಳಾದ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಮತ್ತು ಯುವನಿಧಿ ಯೋಜನೆಗಳನ್ನು ನಾವು ರಾಜ್ಯದಲ್ಲಿ ಅನುಷ್ಠಾನಗೊಳಿಸಿದ್ದೇವೆ ಎಂದು ಹರ್ಷಿಸುತ್ತೇನೆ” ಎಂದು ತಿಳಿಸಿದರು.
“2023ರ ಜೂನ್ 11ರಂದು ಮಹತ್ವಾಕಾಂಕ್ಷಿ ಯೋಜನೆಯಾದ ‘ಶಕ್ತಿ ಯೋಜನೆ’ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಜಾರಿಗೊಳಿಸಿ ಮಹಿಳಾ ಸಬಲೀಕರಣದತ್ತ ಹೊಸ ಹೆಜ್ಜೆಯಿಟ್ಟಿದೆ. ರಾಜ್ಯದ 3.5 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಈ ಯೋಜನೆ ಪ್ರಾರಂಭವಾದಂದಿನಿಂದ ಇಲ್ಲಿಯವರೆಗೆ 134.34 ಕೋಟಿ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯಡಿ ಪ್ರಯಾಣ ಮಾಡಿದ್ದಾರೆ” ಎಂದು ಹೇಳಿದರು.
“ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ” ಎಂದರು.
“ಡಾ. ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಸಾರ್ವಜನಿಕ ಸ್ಥಳಗಳಲ್ಲಿ ಹಠಾತ್ ಹೃದಯಾಘಾತದಿಂದ ಸಂಭವಿಸುವ ಮರಣಗಳನ್ನು ತಡೆಗಟ್ಟಲು ಸಾರ್ವಜನಿಕ ದಟ್ಟಣೆಯ ಸ್ಥಳ, ಬಸ್ ನಿಲ್ದಾಣ, ರೈಲು ನಿಲ್ದಾಣ ಮತ್ತು ಸರ್ಕಾರಿ ಕಚೇರಿಗಳಲ್ಲಿ ಎಇಡಿ ಅಟೋಮೇಟೆಡ್ ಸಾಧನಗಳನ್ನು ರೂಪಿಸಲಾಗುತ್ತಿದೆ” ಎಂದು ಹೇಳೀದರು.
“ಬೆಂಗಳೂರು ನಗರದ ಸರ್ವತೋಮುಖ ಅಭಿವೃದ್ಧಿ ಮತ್ತು ಬೆಂಗಳೂರನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುವ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಬ್ರಾಂಡ್ ಬೆಂಗಳೂರು’ ಸಾರ್ವಜನಿಕರ ಧ್ವನಿ ಸರ್ಕಾರದ ಧ್ವನಿ ಎಂಬ ಮನೋಭಾವದಿಂದ ರೂಪಿಸಲಾಗಿದೆ” ಎಂದರು.
“ಬೆಂಗಳೂರಿನ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸುಗಮ ಸಂಚಾರಕ್ಕೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯತೆಯನ್ನು ಮನಗಂಡು ಬೆಂಗಳೂರಿನ ಮುಖ್ಯ ರಸ್ತೆಗಳ ಸುಸ್ಥಿರ ಅಭಿವೃದ್ಧಿಗಾಗಿ ಸುಮಾರು 2,000 ರೂಪಾಯಿಗಳ ಯೋಜನೆಯನ್ನು ರೂಪಿಸಿ ಪ್ರಮುಖ ರಸ್ತೆಗಳ ವೈಟ್ ಟಾಪಿಂಗ್‌ಗಾಗಿ ಟೆಂಡರ್ ಕರೆಯುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ” ಎಂದರು.
“ರಾಜ್ಯದ ಎಲ್ಲ ಶಾಲೆಗಳಲ್ಲಿ ‘ಭಾರತ ಸಂವಿಧಾನ’ ಪೀಠಿಕೆ ವಿನ್ಯಾಸದ ಫೋಟೋವನ್ನು ತೂಗು ಹಾಕಲು ಹಾಗೂ ಪ್ರತಿನಿತ್ಯ ಪ್ರಾರ್ಥನಾ ಸಮಯದಲ್ಲಿ ಸಂವಿಧಾನ ಪೀಠಿಕೆಯನ್ನು ಓದಲು ಕ್ರಮವಹಿಸಲಾಗಿದೆ. ಪರಿಶಿಷ್ಟ ಜಾತಿಯ 69,190 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ₹133.82 ಕೋಟಿ ಮೊತ್ತದ ಪ್ರೋತ್ಸಾಹ ಧನ ನೀಡಲಾಗಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ನಿರುದ್ಯೋಗಿಗಳಿಗೆ ‘ಸ್ವಾವಲಂಬಿ ಸಾರಥಿ’ ಎಂಬ ಯೋಜನೆಯನ್ನು ಜಾರಿಗೆ ತಂದಿದ್ದು, ನಾಲ್ಕು ಚಕ್ರಗಳ ವಾಹನಗಳಿಗೆ ಶೇ.75 ರಷ್ಟು ಗರಿಷ್ಠ ₹4 ಲಕ್ಷಗಳ ಸಹಾಯಧನ ನೀಡಲು ಕ್ರಮವಹಿಸಲಾಗುತ್ತಿದೆ” ಎಂದರು.