ಕರ್ನಾಟಕದಾದ್ಯಂತ 2024-25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಮೇ 29ರಿಂದ ಆರಂಭವಾಗಿವೆ. ಬೇಸಿಗೆ ರಜೆ ಮುಗಿಸಿ ಮಕ್ಕಳು ಶಾಲೆ ಕಡೆಗೆ ಮುಖ ಮಾಡಿದ್ದಾರೆ. ಶಾಲೆಗಳನ್ನು ಸ್ವಚ್ಛಗೊಳಿಸಿ, ಮೂಲಭೂತ ಸೌಕರ್ಯದ ಬಗ್ಗೆ ಕಾಳಜಿವಹಿಸಿ ‘ಶಾಲಾ ಪ್ರಾರಂಭೋತ್ಸವ’ ಆಚರಣೆ ಮಾಡಿ ಮಕ್ಕಳಿಗೆ ಸಿಹಿ ನೀಡಿ ಅವರನ್ನು ಬರಮಾಡಿಕೊಳ್ಳಬೇಕು. ಆದರೆ, ವಿದ್ಯಾರ್ಥಿಗಳಿಗೆ ಬೆಳಕು ನೀಡಬೇಕಾದ ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭದ ದಿನವೇ ಕತ್ತಲೇ ಆವರಿಸಿತ್ತು. ಶಾಲೆಗಳಲ್ಲಿ ವಿದ್ಯುತ್ ಕಡಿತವಾಗಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಘೋಷಣೆ ಮಾಡಿದ್ದ ಸರ್ಕಾರಿ ಶಾಲೆಗೆ ಉಚಿತ ನೀರು, ವಿದ್ಯುತ್ ಇನ್ನು ಜಾರಿಯಾಗದೇ ಇರುವುದೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
ಸರ್ಕಾರಿ ಶಾಲೆ ಆರಂಭದ ದಿನವಾದ ಮೇ 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರದ ಸರ್ಕಾರಿ ಶಾಲೆಗೆ ಕತ್ತಲೆ ಭಾಗ್ಯ ದೊರೆತಿದೆ. ವರುಣಾದ ಹಳ್ಳಿಯೊಂದರ ಸರ್ಕಾರಿ ಶಾಲೆಯಲ್ಲಿ ವಿದ್ಯುತ್ ಬಿಲ್ ಪಾವತಿ ಬಾಕಿ ಇದೆ ಎಂಬ ಕಾರಣಕ್ಕೆ ಚೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು. ಪರಿಣಾಮ, ಶಾಲಾ ಆರಂಭದ ಮೊದಲ ದಿನವೇ ಮಕ್ಕಳು ಕತ್ತಲೆಯಲ್ಲಿ ಕಳೆಯುವಂತಾಯಿತು.
2023ರ ನವೆಂಬರ್ 1ರಂದು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ, “2023ರ ನವೆಂಬರ್ 1ರಿಂದಲೇ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಹಾಗೂ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಕರ್ನಾಟಕದ ಎಲ್ಲ ಸರ್ಕಾರಿ ಶಾಲೆಗಳಲ್ಲಿ 2024ರ ಮಾರ್ಚ್ ವರೆಗೆ ವಿದ್ಯುತ್ ಮತ್ತು ನೀರಿನ ಶುಲ್ಕವನ್ನು ಸರ್ಕಾರವೇ ಭರಸುತ್ತದೆ” ಎಂದು ಹೇಳಿದ್ದರು.
ಇದಾದ ಬಳಿಕ, ಶಾಲೆಗಳೇ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ (ಎಸ್ಎಸ್ಕೆ) ಅನುದಾನ ಬಳಸಿಕೊಂಡು ವಿದ್ಯುತ್, ಕುಡಿಯುವ ನೀರಿನ ಶುಲ್ಕ ಭರಿಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಬಳಿಕ, ಮತ್ತೊಂದು ಆದೇಶದಲ್ಲಿ, ಸರ್ಕಾರಿ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ 2024-2025ನೇ ಆರ್ಥಿಕ ವರ್ಷದಲ್ಲಿ ಏಪ್ರಿಲ್ 1ರಿಂದ ಉಚಿತ ವಿದ್ಯುತ್ ಹಾಗೂ ನೀರು ಪೂರೈಕೆಯ ವಾರ್ಷಿಕ ವೆಚ್ಚವನ್ನು ಇಂಧನ ಹಾಗೂ ನಗರಾಭಿವೃದ್ಧಿ ಇಲಾಖೆಗಳೇ ನೇರವಾಗಿ ಪಾವತಿಸಲಿವೆ ಎಂದು ಹೇಳಲಾಗಿತ್ತು.
ಪ್ರಸ್ತುತ ಲಭ್ಯವಿರುವ ಮಾಹಿತಿಗಳ ಪ್ರಕಾರ, ಸರ್ಕಾರಿ ಶಾಲಾ ಕಾಲೇಜುಗಳ ವಿದ್ಯುತ್ ಮತ್ತು ನೀರಿನ ಶುಲ್ಕ ಭರಿಸಲು ವಾರ್ಷಿಕ ₹24 ಕೋಟಿ ಅವಶ್ಯಕತೆ ಇದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಮೊತ್ತವನ್ನು ಪಾವತಿಸಲು ಶಾಲೆಗಳ ಬಳಿ ಹಣ ಇರಲಿಲ್ಲ. ವಿದ್ಯುತ್ ಮತ್ತು ನೀರು ಅತ್ಯಾವಶ್ಯಕವಾಗಿದ್ದು, ಅದೆಷ್ಟೋ ಶಾಲೆಗಳಲ್ಲಿ ಶಿಕ್ಷಕರೇ ತಮ್ಮ ಸಂಬಳದಿಂದ ಭರಿಸುತ್ತಿದ್ದ ನಿದರ್ಶನಗಳಿವೆ. ಪ್ರತಿ ಶಾಲೆಗೆ ವಾರ್ಷಿಕ 8000-40,000 ರೂವರೆಗೆ ಶುಲ್ಕದ ಅವಶ್ಯಕತೆ ಇದೆ.
ಸರ್ಕಾರದ ಆದೇಶ ಸರಿಯಾಗಿ ಜಾರಿಗೆ ಬಾರದ ಕಾರಣ, ಸರ್ಕಾರಿ ಶಾಲೆಗಳ ವಿದ್ಯುತ್ ಶುಲ್ಕ ಪಾವತಿ ಆಗದೇ ಉಳಿದಿದೆ. ಪರಿಣಾಮವಾಗಿ ಸರ್ಕಾರಿ ಶಾಲೆಗಳು ಕತ್ತಲೆಯಲ್ಲಿ ನಡೆಯುವಂತಾಗಿದೆ. ಇದಕ್ಕೆ, ವರುಣಾ ಕ್ಷೇತ್ರದ ಶಾಲೆಯೇ ಉದಾಹರಣೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಫಾರ್ಮ್‌ಹೌಸ್‌ನಲ್ಲಿ ರೇವ್ ಪಾರ್ಟಿ; ಹೆಚ್ಚಿನ ಜನರಿಗೆ ನೋಟಿಸ್ ಜಾರಿ ಮಾಡಿದ ಸಿಸಿಬಿ
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಸ್ಥಳೀಯರೊಬ್ಬರು ಮಾತನಾಡಿ, “ಸಿದ್ಧರಾಮಯ್ಯ ಅವರ ವರುಣಾ ಕ್ಷೇತ್ರದಲ್ಲಿರುವ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯುತ್ ಬಿಲ್ ಬಾಕಿ ಇದೆ ಎಂದು ಶಾಲೆ ಆರಂಭದ ದಿನವಾದ ಮೇ 29ರಂದು ಕರೆಂಟ್ ಕಟ್ ಮಾಡಿದ್ದಾರೆ. ಬಿಲ್ ಕಟ್ಟಿದ ಮೇಲೆ ನಂತರ ವಿದ್ಯುತ್ ಪೂರೈಕೆ ಮಾಡಿದರು. ಆಗ ಶಾಲಾ ಸಿಬ್ಬಂದಿಯೊಬ್ಬರು ಸಿಎಂ ಸಿದ್ಧರಾಮಯ್ಯ ಅವರು ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಮತ್ತು ನೀರು ಪೂರೈಕೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ ಎಂದು ಕೇಳಿದಾಗ, ಚೆಸ್ಕಾಂ ಸಿಬ್ಬಂದಿಯೊಬ್ಬರು ನಮಗಿನ್ನು ಈ ಬಗ್ಗೆ ಆದೇಶ ಬಂದಿಲ್ಲ ಎಂದು ಹೇಳಿದ್ದಾರೆ. ಶಾಲೆಗಳಲ್ಲಿ ಕರೆಂಟ್ ಇಲ್ಲದ ಕಾರಣ ನೀರು ಕೂಡ ಇರಲಿಲ್ಲ” ಎಂದು ವಿವರಿಸಿದರು.
ಸರ್ ಹಗಲು ಲೈಟ್ ಬೇಕಾಗುತ್ತೆ ಸರ್ಕಾರಿ ಶಾಲೆಗಳಲ್ಲಿ ನನ್ನ ಗಮನಕ್ಕೆ ಅವಶ್ಯಕತೆ ಇಲ್ಲ ಅಂತ ಅನಿಸುತ್ತೆ