“ಇಂದು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಯಾವ ಚಟುವಟಿಕೆ ನಡೆಯುತ್ತಿದೆ ಮತ್ತು ಅದಕ್ಕೆ ಎಷ್ಟು ದುಡ್ಡು ಖರ್ಚಾಗಿದೆ ಅನ್ನೋದರ ಕುರಿತು ಏನೂ ಗೊತ್ತಾಗುತ್ತಿಲ್ಲ. ಈಗ ಅದನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಬೇಕು. ಕನ್ನಡ ಶಾಸ್ತ್ರೀಯ ಸ್ಥಾನಮಾನದ ಕಚೇರಿಯು ಮೈಸೂರಿನ ಭಾಷಾಸಂಸ್ಥಾನದ ಅಡಿಯಲ್ಲಿ ಕೆಲಸ ಮಾಡುತ್ತಿದೆ. ಅದಕ್ಕೊಂದು ಸ್ವತಂತ್ರ ಅಸ್ತಿತ್ವ ಕೊಡುವುದಕ್ಕೆ ಸರ್ಕಾರ ಮುಂದಾಗಬೇಕು. ರಚನಾತ್ಮಕ ಮತ್ತು ಕ್ರಿಯಾತ್ಮಕ ಕೆಲಸಗಳನ್ನು ಸರ್ಕಾರ ಮಾಡಬೇಕಾಗಿದೆ” ಎಂದು ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಹೇಳಿದರು.
ಈ ದಿನ.ಕಾಮ್ ಜೊತೆ ಮಾತನಾಡಿದ ಅವರು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವೇನೋ ಸಿಕ್ಕಿದೆ, ಆದರೆ, ಆ ಶಾಸ್ತ್ರೀಯ ಸ್ಥಾನಮಾನ ದೊರಕಿದ ಭಾಷೆಗಳ ಚಟುವಟಿಕೆ ಹೇಗಿರಬೇಕೆಂಬುದೇ ಕನ್ನಡಿಗರಿಗೆ ಸರಿಯಾಗಿ ಗೊತ್ತಾಗುತ್ತಿಲ್ಲ. ಅದರ ಅಸ್ತಿತ್ವವೇ ಗೋಚರವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
“ಭಾರತ ಸರ್ಕಾರ, ಸಂಸೃತ ಮತ್ತು ತಮಿಳಿಗೆ ಮಾತ್ರ ಶಾಸ್ತ್ರೀಯ ಸ್ಥಾನಮಾನ ಕೊಟ್ಟ ಸಂದರ್ಭದಲ್ಲಿ ಬೇರೆ ಭಾಷೆಗಳಂತೆ ಕನ್ನಡಕ್ಕೂ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂದು ಅನೇಕರು ಪಟ್ಟು ಹಿಡಿದರು. ಅನೇಕ ಹೋರಾಟಗಳು ಕೂಡ ನಡೆದವು. ಆಗ ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಶಾಸ್ತ್ರೀಯ ಸ್ಥಾನಮಾನದ ಕುರಿತು ಸಭೆ ನಡೆಸಲು ಕೇಂದ್ರ ಸರ್ಕಾರ ಸೂಚಿಸಿತ್ತು. ನಾನು ಆಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಆಗಿದ್ದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು ಎಂದು ಅನೇಕ ಸಭೆಗಳನ್ನು ಮಾಡುವ ಜವಾಬ್ದಾರಿ ನನ್ನದೇ ಆಗಿತ್ತು. ಎಷ್ಟೋ ವರ್ಷಗಳ ಕಾಲ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕೊಡುವಂತಹ ಸಭೆಯ ದಾಖಲೆಗಳನ್ನೆಲ್ಲ ಕೋಲ್ಡ್ ಸ್ಟೋರೇಜ್‌ಗೆ ಹಾಕಿದ್ದರು. ಆಗ ನಾನು ಆ ದಾಖಲೆಗಳನ್ನೆಲ್ಲ ಹೊರತೆಗೆದು, ಸಭೆಗಳನ್ನ ಶುರು ಮಾಡಿಸಿ, ಅದಕ್ಕೆ ಒಂದು ಸ್ಪಷ್ಟವಾದ ಅಂತಿಮ ಸ್ವರೂಪ ಬರುವ ರೀತಿಯಲ್ಲಿ ಕೆಲಸ ಮಾಡಿದೆ. ನಂತರ ಆ ವರದಿಯನ್ನ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟೆ. ಆಗ ಅಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಘೋಷಿಸಿದರು” ಎಂದು ನೆನಪು ಮಾಡಿಕೊಂಡರು.
ದುಬಾರಿ ವೆಚ್ಚದ ಭುವನೇಶ್ವರಿ ಪ್ರತಿಮೆ ಅಗತ್ಯವಿರಲಿಲ್ಲ
“ಸರ್ಕಾರ 21ಕೋಟಿ ರೂಪಾಯಿ ವೆಚ್ಚದಲ್ಲಿ ಭುವನೇಶ್ವರಿದೇವಿ ಪ್ರತಿಮೆ ಮಾಡುವ ಅಗತ್ಯ ಇರಲಿಲ್ಲ. ಆದರೆ ಕನ್ನಡದೇವಿ ಅಂತ ಕನ್ನಡಿಗರಲ್ಲಿ ಒಂದು ಭಾವನೆ ಇದೆ. ಇದು ಸಿದ್ದರಾಮಯ್ಯ ಮಾಡಿದ್ದು ಅಲ್ಲ. ಜನರು ಇದನ್ನ ಸುಮಾರು ನೂರು ವರ್ಷಗಳಿಂದ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಕನ್ನಡ ಏಕೀಕರಣದ ಸಮಯದಲ್ಲಿ ಆಲೂರು ವೆಂಕಟರಾಯರು ಕನ್ನಡ ಭುವನೇಶ್ವರಿ ಅಂತ ಒಂದು ಪ್ರತಿಮೆಯ ರೂಪದಲ್ಲಿ ಕನ್ನಡತನವನ್ನ ಪ್ರತಿಷ್ಠಾಪನೆ ಮಾಡಿದ್ದರು. ಆದರೆ ಈಗ ಇಷ್ಟು ಹಣ ವೆಚ್ಚ ಮಾಡಿ ವಿಧಾನಸೌಧದಲ್ಲಿ ಪ್ರತಿಮೆ ಸ್ಥಾಪಿಸುವ ಅಗತ್ಯ ಇರಲಿಲ್ಲ” ಎಂದು ಕೃಷ್ಣಮೂರ್ತಿ ಹೇಳಿದರು.
“ಕನ್ನಡಪರ ಹೋರಾಟ ಮತ್ತು ಏಕೀಕರಣದ ಸಂದರ್ಭದಲ್ಲಿ ಕನ್ನಡ ಭುವನೇಶ್ವರಿ ಎಂದು ಹುಟ್ಟುಹಾಕಿದ್ದು. ಕನ್ನಡಿಗರಲ್ಲಿ ಒಗ್ಗಟ್ಟು ಮೂಡಲಿ ಎಂದು ಅಂದು ಕನ್ನಡತನ ಅನ್ನೋ ಭಾವನಾತ್ಮಕತೆಗೆ ಮೂರ್ತ ಸ್ವರೂಪ ಕೊಡಲಾಯಿತು. ಕನ್ನಡದ ಅನೇಕ ಮುಖ್ಯ ಚೇತನಗಳು, ಹೋರಾಟಗಾರರು, ಕವಿಗಳು, ದಾರ್ಶನಿಕರು, ಏಕೀಕರಣಕ್ಕೆ ದುಡಿದವರು ಅದನ್ನ ಒಪ್ಪಿಕೊಂಡುಬಿಟ್ಟಿದ್ದಾರೆ. ಕುವೆಂಪು ಅವರೇ ಕರ್ನಾಟಕವನ್ನ ಭಾರತ ಜನನೀಯ ತನುಜಾತೆ ಅಂತ ಕರೆದಿದ್ದಾರೆ. ಕರ್ನಾಟಕವನ್ನು ಮಾತೆ ಎನ್ನುವ ಫೆಮಿನೈನ್ ದೃಷ್ಟಿಯಲ್ಲಿ ನೋಡುವಂತಹದು ಪರಂಪರೆಯಿಂದ ಬಂದಿದೆ.
ಭುವನೇಶ್ವರಿ ಕನ್ನಡಿಗರ ಅಸ್ಮಿತೆಯ ಸ್ವರೂಪ. ಬಸವಣ್ಣರ ಪ್ರತಿಮೆಯನ್ನು ಚಾರಿತ್ರಿಕ ವ್ಯಕ್ತಿಯಾಗಿ ನಿಲ್ಲಿಸಿದರೆ, ಭುವನೇಶ್ವರಿದೇವಿಯನ್ನು ಭಾವನಾತ್ಮಕ ಮೂರ್ತಿಯಾಗಿ ನಿಲ್ಲಿಸಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಮುಂದೆ ಇದೇ ರೀತಿಯಲ್ಲಿ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಕಾವೇರಿ ಭವನದಲ್ಲೂ ಕೂಡ ಕಾವೇರಿ ನದಿಗೆ ದೇವಿಯ ಭಾವನಾತ್ಮಕ ಸ್ವರೂಪ ಕೊಟ್ಟು ಪ್ರತಿಮೆ ಮಾಡಿ ನಿಲ್ಲಿಸಲಾಗಿದೆ” ಎಂದು ವಿವರಿಸಿದರು.
