ರಾಜ್ಯದ ಜನರಿಗೆ ವಿಧಾನಸಭಾ ಚುನಾವಣೆ ಪೂರ್ವ ನೀಡಿದ ಗ್ಯಾರಂಟಿಗಳನ್ನು ಅಸ್ತಿತ್ವಕ್ಕೆ ತರುವಲ್ಲಿ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿದೆ. ಐದು ಗ್ಯಾರಂಟಿ ಯೋಜನೆಗಳ ಪೈಕಿ ಗೃಹಜ್ಯೋತಿ ಯೋಜನೆಯ ಲಾಭವನ್ನು ಕೋಟ್ಯಾಂತರ ಜನರು ಉಪಯೋಗಿಸುತ್ತಿದ್ದಾರೆ. ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ನೀಡುವುದು ಈ ಯೋಜನೆಯಾಗಿದೆ.
ಜನರು ಈ ಯೋಜನೆಯ ಲಾಭ ಪಡೆಯಲು ಕಡ್ಡಾಯವಾಗಿ ಪ್ರತಿ ಬೆಸ್ಕಾಂ ಖಾತೆಗೂ ತಮ್ಮ ಆಧಾರ್ ಲಿಂಕ್ ಮಾಡಿಸಲೇಬೇಕು. ಆಗ ಮಾತ್ರ ಗ್ರಾಹಕರು ‘ಗೃಹ ಜ್ಯೋತಿ’ ಯೋಜನೆಯ ಲಾಭ ಪಡೆಯಬಹುದು. ಮನೆ ಮಾಲೀಕರು ಹೀಗೆ ಲಾಭ ಪಡೆದರೇ, ಸಮಸ್ಯೆಇಲ್ಲ. ಆದರೆ, ಬಾಡಿಗೆದಾರರು ಸಾಮಾನ್ಯವಾಗಿ ಒಂದು-ಮನೆಯಿಂದ ಬೇರೆ ಮನೆಗೆ ಸ್ಥಳಾಂತರವಾಗುತ್ತಾರೆ. ಅವರು ಒಂದು ಬಾರಿ ಬಾಡಿಗೆ ಇರುವ ಮನೆಗೆ ಆಧಾರ ಲಿಂಕ್ ಮಾಡಿಸಿ, ಗೃಹಜ್ಯೋತಿ ಯೋಜನೆ ಪಡೆದುಕೊಂಡರೆ, ಮುಂದೆ ಈ ಮನೆ ಬಿಟ್ಟು ಬೇರೆ ಮನೆಗೆ ಹೋದಮೇಲೆ ಹೇಗೆ ಮತ್ತೆ ಯೋಜನೆಯ ಲಾಭ ಪಡೆಯುವುದು ಎಂಬುದು ಚಿಂತೆಗೀಡು ಮಾಡಿತ್ತು.
ಇದೇ, ವಿಚಾರವಾಗಿ ಬಹಳಷ್ಟು ಬಾಡಿಗೆದಾರರು ಪರಿತಪಿಸುತ್ತಿದ್ದಾರೆ. ಇದೀಗ, ಗ್ರಾಹಕರ ಚಿಂತೆಗೆ ಒಂದು ಪರಿಹಾರ ದೊರತಿದೆ.
ಬಾಡಿಗೆದಾರರ ಸಮಸ್ಯೆಗಳ ಬಗ್ಗೆ ಅರಿತಿರುವ ಸರ್ಕಾರ ಮತ್ತು ಎಸ್ಕಾಂ ಗೃಹಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಬಿಲ್‌ನಿಂದ ಆಧಾರ್ ಲಿಂಕ್ ಅನ್ನು ಡೀಲಿಂಕ್ ಮಾಡುವ ಅವಕಾಶ ಕಲ್ಪಿಸಿದೆ.
ಆಧಾರ ಲಿಂಕ್ ಅನ್ನು ಡೀಲಿಂಕ್ ಮಾಡಲು ಗ್ರಾಹಕರು ನೇರವಾಗಿ ಎಸ್ಕಾಂ ಕಚೇರಿಗೆ ತೆರಳಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಡೀಲಿಂಕ್ ಮಾಡಿಕೊಳ್ಳಬಹುದು. ಇನ್ನು ಆನ್ಲೈನ್ನಲ್ಲಿಯೂ ಕೂಡ ಗ್ರಾಹಕರು ಸೇವಾ ಸಿಂಧು ಪೋರ್ಟಲ್ನ ಮೂಲಕ ಡೀಲಿಂಕ್ ಮಾಡಿಕೊಳ್ಳುವ ಅವಕಾಶ ಆದಷ್ಟೂ ಬೇಗ ಸಿಗಲಿದೆ ಎನ್ನಲಾಗಿದೆ.
ಗ್ರಾಹಕರು ನೇರವಾಗಿ ತಮ್ಮ ಮನೆಯ ಸಮೀಪವಿರುವ ಎಸ್ಕಾಂ ಕಚೇರಿಗೆ ತೆರಳಿ ಆಧಾರ ಡೀಲಿಂಕ್ ಮಾಡಲು ಮನೆಯ ವಿದ್ಯುತ್ ಬಿಲ್, ಲಿಂಕ್ ಆಗಿರುವ ಆಧಾರ್ ಕಾರ್ಡ್ ಪ್ರತಿ, ನಿಮ್ಮ ಭಾವಚಿತ್ರ, ಬಾಡಿಗೆ ಕರಾರು ಪತ್ರಗಳನ್ನು ತೆಗೆದುಕೊಂಡು ಹೋಗಬೇಕು.
ಹಾಗೆಯೇ, ಗೃಹಜ್ಯೋತಿ ಸ್ಕೀಮ್ಗೆ ಅರ್ಜಿ ಸಲ್ಲಿಸಲಾಗಿದ್ದ ಅಪ್ಲಿಕೇಶನ್ ನಂಬರ್ ಮತ್ತು ಮೊಬೈಲ್ ನಂಬರ್ನ ಮಾಹಿತಿಯನ್ನು ಕಚೇರಿಯಲ್ಲಿ ತಿಳಿಸಬೇಕಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಉತ್ತಮ ನಡೆ | ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ತರಗತಿ
ಸದ್ಯ ಸೇವಾ ಸಿಂಧು ಪೋರ್ಟ್‌ನಲ್ಲಿ ಅಥವಾ ಆನ್‌ಲೈನ್‌ನಲ್ಲಿ ಈ ಯೋಜನೆಯಲ್ಲಿ ಆಧಾರ ಡೀಲಿಂಕ್ ಮಾಡುವ ಸೌಲಭ್ಯ ಸಧ್ಯಕ್ಕೆ ಇಲ್ಲ. ಶೀಘ್ರದಲ್ಲೇ ಇದು ಲಭ್ಯವಾಗಲಿದೆ.
ಆನ್‌ಲೈನ್‌ಲ್ಲಿ ಮುಂದಿನ ದಿನಗಳಲ್ಲಿ ಆಧಾರ ಡೀಲಿಂಕ್ ಆಡಿಸುವುದಾದರೇ, ಆಗ ಸೇವಾ ಸಿಂಧು ವೆಬ್ಸೈಟ್ sevasindhugs1.karnataka.gov.in/gruhajyothi ಗೆ ತೆರಳಿ ಯೋಜನೆ ಕ್ಯಾನ್ಸಲ್ ಮಾಡಬಹುದು.