ಹಂಪಿ ಕನ್ನಡ ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವ ಜನವರಿ 10ರಂದು ನಡೆಯಲಿದೆ. ಸಮಾಜದಲ್ಲಿ ಸಾಧನೆಗೈದ ಮೂವರಿಗೆ ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಲಾಗಿದೆ ಎಂದು ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.
32ನೇ ನುಡಿಹಬ್ಬದ ಘಟಿಕೋತ್ಸವದ ನಿಮಿತ್ತ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ, “ನಾಡೋಜ ಗೌರವಕ್ಕೆ ಬೀದರ್ ಜಿಲ್ಲೆಯ ಬಾಲ್ಕಿ ಹೀರೆಮಠದ ಡಾ.ಬಸವಲಿಂಗ ಪಟ್ಟದೇವರು ಅವರು ಸಮಾಜ ಸೇವೆಯಲ್ಲಿ ಕನ್ನಡ ಸ್ವಾಮಿ ಎಂದು ಪ್ರಖ್ಯಾತಿಯಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಆಂಧ್ರಪ್ರದೇಶದ ಬುಡಕಟ್ಟು ವಿವಿಯ ಕುಲಪತಿ ಡಾ.ತೇಜಸ್ವಿ ವಿ.ಕಟ್ಟೀಮನಿ, ವಿಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ನ್ಯಾನೋ ಟೆಕ್ನಾಲಜಿ ವಿದ್ವಾಂಸ, ನ್ಯಾಕ್ ನಿವೃತ್ತ ನಿರ್ದೇಶಕ ಡಾ.ಎಸ್.ಸಿ.ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜನರೇ ನಮ್ಮ ಪಾಲಿನ ದೇವರು, ಜನರ ಸೇವೆಗೆ ಸದಾ ಬದ್ಧ: ಡಿಸಿಎಂ ಡಿ.ಕೆ. ಶಿವಕುಮಾರ್
“ಜ.10ರಂದು ಸಂಜೆ 5 ಗಂಟೆಗೆ ಕುಲಾಧಿಪತಿ ಥಾವರ್ ಚಂದ್ ಗೆಹಲೋತ್ ಅವರು ಪದವಿ ಪ್ರದಾನ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಡಿ.ಲಿಟ್ ಹಾಗೂ ಪಿಎಚ್.ಡಿ ಪ್ರದಾನ ಮಾಡಲಿದ್ದಾರೆ. ಆಂಧ್ರಪ್ರದೇಶದ ಅನಂತಪುರ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಎ. ಕೋರಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ” ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯ ತೀವ್ರ ಸಂಕಷ್ಟದಲ್ಲಿದ್ದು, ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅಗತ್ಯವಾದ ಅನುದಾನ ನೀಡುವ ವಿಶ್ವಾಸ ಇದೆ ಎಂದು ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.