ಮೈಸೂರಿನ ಮೂಲನಿವಾಸಿ ದೊರೆ ಎಂದೇ ಖ್ಯಾತವಾಗಿರುವ ಮಹಿಷಾಸುರನ ಪ್ರತಿಮೆಯ ಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಫೋಟೋ ಹಾಕಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ’ಸೀನಾ ಹಿಂದೂಸ್ಥಾನ’ ಫೇಸ್ಬುಕ್ ಫೇಜ್ ಅಡ್ಮಿನ್ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು ವಿಭಾಗದ ಸೂರ್ಯ ಮುಕುಂದರಾಜ್ ಅವರು ನೀಡಿದ ದೂರನ್ನು ಆಧರಿಸಿ, ‘ಸೀನಾ ಹಿಂದೂಸ್ತಾನಿ’ ಪೇಜ್ ನಿರ್ವಹಣೆ ಮಾಡುತ್ತಿರುವವರ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
‘ಮಹಿಷಾಸುರ ಉತ್ಸವ ಆಚರಣೆ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಕಟಿಸಲಾಗಿತ್ತು. ಜತೆಗೆ ಮಹಿಷಾಸುರ ಪ್ರತಿಮೆಗೆ ಮುಖ್ಯಮಂತ್ರಿ ಅವರ ಚಿತ್ರವನ್ನು ಮಾರ್ಫಿಂಗ್ ಮಾಡಿ ಸೇರಿಸಲಾಗಿತ್ತು. ಈ ಮೂಲಕ ಮಹಿಷಾಸುರ ಪ್ರತಿಮೆಯನ್ನು ವಿರೂಪಗೊಳಿಸಿ, ಜನರ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದ್ದಾರೆ’ ಎಂದು ದೂರು ನೀಡಲಾಗಿತ್ತು.
‘ದಸರಾ ಹಬ್ಬದ ಸಂದರ್ಭದಲ್ಲಿಯೇ ಈ ಅವಹೇಳನಕಾರಿ ಪೋಸ್ಟ್ ಪ್ರಕಟಿಸಲಾಗಿದೆ. ಈ ಮೂಲಕ ಸಮಾಜದ ಶಾಂತಿಗೆ ಧಕ್ಕೆ ತರಲು ಆರೋಪಿಗಳು ಯತ್ನಿಸಿದ್ದಾರೆ. ಪೇಜ್ನ ಅಡ್ಮಿನ್ ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಈ ಸಂಬಂಧ ಫೇಸ್ಬುಕ್ ಕಂಪನಿಯವರಿಗೂ ಇ-ಮೇಲ್ ಕಳುಹಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಷ ದಸರಾವು ಸಾಂಸ್ಕೃತಿಕ ಪ್ರತಿರೋಧವಾಗಿ ಹೊಮ್ಮಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಮಹಿಷಾಸುರ ದೊರೆಯನ್ನು ಆರಾಧಿಸಲಾಗಿದೆ. ಮೈಸೂರಿನಲ್ಲಿ ಮಹಿಷ ದಸರಾ ಆಚರಿಸದಂತೆ ಸಂಸದ ಪ್ರತಾಪ ಸಿಂಹ ಬೆದರಿಕೆ ಒಡ್ಡಿದ ಬಳಿಕ ಬಿಜೆಪಿಯ ಸ್ಥಳೀಯ ಮುಖಂಡರೇ ಸಂಸದರ ನಿಲುವನ್ನು ವಿರೋಧಿಸಿದ್ದರು.
ಅಕ್ಟೋಬರ್ 13ರಂದು ಮೈಸೂರಿನ ಪುರಭವನದ ಅಂಗಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನರು ಮಹಿಷ ದಸರಾ ಆಚರಿಸಿದ್ದರು.