ಉತ್ತರ ಕರ್ನಾಟಕದ ಹಲವೆಡೆ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಮೂವರು ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ಹವಾಮಾನ ಸಂಸ್ಥೆಗಳ ಮುನ್ಸೂಚನೆಯಂತೆ, ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಉಂಟಾಗುತ್ತಿರುವುದರಿಂದ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.
ವಿಜಯನಗರ ಜಿಲ್ಲೆಯಲ್ಲಿ ಭಾನುವಾರ ಸಿಡಿಲು ಬಡಿದು ಶನಿವಾರ ಇಬ್ಬರು ಮೃತಪಟ್ಟಿದ್ದಾರೆ. ಮೃತಪಟ್ಟ ನಾರಪ್ಪ ಬಣಕಾರ (55) ಮತ್ತು ಪ್ರಶಾಂತ್ ಬಣಕಾರ (45) ಇಬ್ಬರೂ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ದಾಸನಪುರ ಗ್ರಾಮದವರು. ದಾವಣಗೆರೆ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಮನೆ ಗೋಡೆ ಕುಸಿದು ಬಿದ್ದ ಪರಿಣಾಮ ಕುಳಗಟ್ಟೆ ಬಸವರಾಜಪ್ಪ (81) ಮೃತಪಟ್ಟಿದ್ದಾರೆ. ಘಟನೆಯಲ್ಲಿ ಅವರ ಮಗ ಮತ್ತು ಸೊಸೆ ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವಿಭಜಿತ ಬಳ್ಳಾರಿ ಜಿಲ್ಲೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕೆಲವೇ ಗಂಟೆಗಳಲ್ಲಿ 130 ಮಿ.ಮೀ ಮಳೆ ಸುರಿದಿದ್ದು, ತೀವ್ರ ಪ್ರವಾಹ ಉಂಟಾಗಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ. ರಾಯಚೂರು, ಕೊಪ್ಪಳ, ಯಾದಗಿರಿ, ಕಲಬುರಗಿ ಜಿಲ್ಲೆಗಳಲ್ಲೂ ಭಾರಿ ಮಳೆಯಾಗಿದೆ.
ಪ್ರವಾಹದಲ್ಲಿ ಸಿಲುಕಿಕೊಂಡಿರುವ 55 ಗಣಿಗಾರಿಕೆ ಟ್ರಕ್‌ಗಳು
ಸಂಡೂರು ಗಣಿಗಾರಿಕೆ ಪ್ರದೇಶದಲ್ಲಿ 55ಕ್ಕೂ ಹೆಚ್ಚು ಗಣಿಗಾರಿಕೆ ಟ್ರಕ್‌ಗಳು ಪ್ರವಾಹದಲ್ಲಿ ಸಿಲುಕಿಕೊಂಡಿವೆ. ವಾಹನದೊಳಗೆ ಸಿಲುಕಿಕೊಂಡಿದ್ದ ಸುಮಾರು 25 ಟ್ರಕ್ ಚಾಲಕರನ್ನು ಸ್ಥಳೀಯರು ರಕ್ಷಿಸಿದ್ದಾರೆ. 9,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಬಾಳೆ, ಮೆಣಸಿನಕಾಯಿ ಬೆಳೆಗಳು ಕೊಚ್ಚಿ ಹೋಗಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆರೋಪ-ಪ್ರತ್ಯಾರೋಪಗಳೆಷ್ಟು ಕಾಲ? ಆಡಳಿತ, ಅಭಿವೃದ್ಧಿ, ಕಲ್ಯಾಣಕ್ಕೆಷ್ಟು ಸಮಯ?
ಬಳ್ಳಾರಿ ಮತ್ತು ವಿಜಯನಗರ ಎರಡೂ ಜಿಲ್ಲೆಗಳಲ್ಲಿ ತೀವ್ರ ಹಾನಿ ಸಂಭವಿಸಿದ ಗ್ರಾಮಗಳಿಗೆ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದಾರೆ. ಬಳ್ಳಾರಿ ಸಂಸದ ಇ ತುಕಾರಾಂ ಅವರು ಮಳೆ ಪೀಡಿತ ಪ್ರದೇಶಗಳನ್ನು ಪರಿಶೀಲಿಸಿದರು ಮತ್ತು ಅತಿವೃಷ್ಟಿ ವರದಿಯಾಗಿರುವ ಗ್ರಾಮಗಳಿಗೆ ಭೇಟಿ ನೀಡಿದರು.
ಗದಗ ಜಿಲ್ಲೆಯ ನರಗುಂದ ಹಾಗೂ ಸುತ್ತಮುತ್ತ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ರಸ್ತೆಗಳು ಮಿನಿ ನದಿಗಳಾಗಿ ಮಾರ್ಪಟ್ಟಿವೆ. ಈ ಪ್ರದೇಶದಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಎಡೆಬಿಡದೆ ಮಳೆ ಸುರಿದಿದ್ದು, ಜನರು ನಿದ್ದೆಯಿಲ್ಲದ ರಾತ್ರಿ ಕಳೆಯಬೇಕಾಯಿತು. ಮಳೆ ನೀರು ಚರಂಡಿ ನೀರಿನೊಂದಿಗೆ ಸೇರಿ ಹಲವು ಮನೆಗಳಿಗೆ ನೀರು ನುಗ್ಗಿದೆ.
