ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ 10 ವರ್ಷ ಜೈಲು ಹಾಗೂ ₹7 ಲಕ್ಷ ದಂಡ ವಿಧಿಸುವ ಕೇಂದ್ರ ಸರ್ಕಾರದ ಕಾನೂನು ವಿರೋಧಿಸಿ ಲಾರಿ ಮಾಲೀಕರ ಸಂಘ ಜನವರಿ 17ರಿಂದ ರಾಜ್ಯದಲ್ಲಿ ಮುಷ್ಕರ ಕೈಗೊಂಡಿದೆ.
ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಲಾರಿ ಚಾಲಕರಿಗೆ ಶಿಕ್ಷೆ ಹಾಗೂ ದಂಡ ವಿಧಿಸುವ ಕಾನೂನು ಜಾರಿಯ ಜತೆಗೆ, ಸಾರಿಗೆ ಇಲಾಖೆಯಿಂದ ಲಾರಿ ಮಾಲೀಕರಿಗೆ ಆಗುತ್ತಿರುವ ಕಿರುಕುಳದ ವಿರುದ್ಧ ಕರ್ನಾಟಕ ಲಾರಿ ಮಾಲೀಕರ ಸಂಘ ಮುಷ್ಕರ ನಡೆಸಲು ತೀರ್ಮಾನಿಸಿದೆ. ಲಾರಿ ಮುಷ್ಕರದಿಂದ ರಾಜ್ಯದಲ್ಲಿ ಅಗತ್ಯವಸ್ತುಗಳ ಸಾಗಾಟದ ಮೇಲೆ ಪರಿಣಾಮವಾಗುವ ಸಾಧ್ಯತೆ ಇದೆ.
ಈ ಕಾನೂನು ವಿರೋಧಿಸಿ ಉತ್ತರದ ಭಾರತದ ನಾನಾ ರಾಜ್ಯಗಳಲ್ಲಿ ಲಾರಿ ಮಾಲೀಕರು ಮುಷ್ಕರ ಕೈಗೊಂಡಿದ್ದಾರೆ. ಈ ಹಿನ್ನೆಲೆ ಕಾನೂನು ಜಾರಿ ಮಾಡುವುದರಿಂದ ಹಿಂದೆ ಸರಿದಿರುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಘೋಷಣೆ ಮಾಡಿದೆ. ಆದರೆ, ಈ ಬಗ್ಗೆ ಸ್ಪಷ್ಟ ಆದೇಶ ಪ್ರಕಟಿಸಬೇಕು ಎಂದು ಸಂಘ ಒತ್ತಾಯಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕರವೇ ಟಿ.ಎ.ನಾರಾಯಣಗೌಡ ಸೇರಿ 29 ಕಾರ್ಯಕರ್ತರ ಬಿಡುಗಡೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ
“ಅಫಘಾತಗಳು ಸಂಭವಿಸಿದಾಗ ಅಥವಾ ಲಾರಿಯ ಹಿಂದಿನ ಚಕ್ರಕ್ಕೆ ಬೈಕ್ ಸಿಕ್ಕಿದಾಗ ಕೂಡಲೇ ಭಾರಿ ಪ್ರಮಾಣದ ವಾಹನ ನಿಲ್ಲಿಸುವುದು ಸುಲಭವಿಲ್ಲ. ಒಂದು ವೇಳೆ, ಲಾರಿ ನಿಲ್ಲಿಸಿದರೂ ಕೂಡ ಚಾಲಕರ ಮೇಲೆ ಜನರಿಂದ ಹಲ್ಲೆಯಾಗುತ್ತದೆ. ಹಾಗಾಗಿ, ಲಾರಿ ಚಾಲಕರು ಆತ್ಮರಕ್ಷಣೆಗಾಗಿ ಸ್ಥಳೀಯ ಪೊಲೀಸ್ ಠಾಣೆಗಳಿಗೆ ತೆರಳುತ್ತಾರೆ. ಈ ತರಹದ ಪ್ರಕರಣಗಳಿಗೆ ಹಿಟ್ ಆಂಡ್ ರನ್ ದಾಖಲು ಮಾಡುವುದು ಎಷ್ಟು ಸರಿ. ಹಾಗಾಗಿ ಸರ್ಕಾರ ಈ ಕೂಡಲೇ ಈ ಕಾನೂನನ್ನು ರದ್ದು ಮಾಡಬೇಕು” ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ನವೀನ್ ರೆಡ್ಡಿ ಹೇಳಿದರು.
ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಹಿಮಾಚಲ, ರಾಜಸ್ಥಾನಗಳಲ್ಲಿಯೂ ಪ್ರತಿಭಟನೆಗಳು ನಡೆಯುತ್ತಿವೆ.