ಬಿಸಿಲಿನ ತಾಪಮಾನದ ಹೆಚ್ಚಳ ಹಿನ್ನೆಲೆ ಕಿತ್ತೂರು ಕರ್ನಾಟಕದ ಎರಡು ಜಿಲ್ಲೆ, ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಎರಡು ತಿಂಗಳು ಸರ್ಕಾರಿ ಕಚೇರಿ ಸಮಯ ಬದಲಾವಣೆ ಮಾಡಲಾಗಿದೆ.
ಕಲಬುರಗಿ ವಿಭಾಗದ 7 ಜಿಲ್ಲೆ ಹಾಗೂ ಬೆಳಗಾವಿ ವಿಭಾಗದ ಎರಡು ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಕೆಲಸದ ಸಮಯ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಳಗ್ಗೆ 8 ರಿಂದ ಮಧ್ಯಾಹ್ನ 1:30ರ ತನಕ ಸರ್ಕಾರಿ ಕಚೇರಿಗಳ ಕೆಲಸದ ಸಮಯ ನಿಗದಿ ಮಾಡಿದ್ದು, ಏಪ್ರಿಲ್, ಮೇ ತಿಂಗಳ ಅಂತ್ಯದವರೆಗೆ ಸರ್ಕಾರಿ ಕಚೇರಿ ಸಮಯ ಬದಲಾವಣೆ ಜಾರಿಯಲ್ಲಿ ಇರಲಿದೆ.
ಕಲಬುರಗಿ, ಯಾದಗಿರಿ, ಬೀದರ್, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆ ಆಗಲಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿ ಮೇರೆಗೆ ಸರ್ಕಾರದ ಆದೇಶ ಹೊರಡಿಸಿದೆ.
ಈ 9 ಜಿಲ್ಲೆಗಳಲ್ಲಿ ಸರ್ಕಾರಿ ನೌಕರರು ಬದಲಾದ ಸಮಯದಲ್ಲಿ ತಮ್ಮ ಕರ್ತವ್ಯವನ್ನು ಎಂದಿನಂತೆ ಯಾವುದೇ ಲೋಪ/ಅಡೆತಡೆಯಿಲ್ಲದೆ ಕರ್ತವ್ಯ ನಿರ್ವಹಿಸತಕ್ಕದ್ದು. ಸಾರ್ವಜನಿಕರಿಗೆ ಯಾವುದೇ ರೀತಿ ಅನಾನುಕೂಲ ಆಗದಂತೆ ಮತ್ತು ಜಿಲ್ಲಾಧಿಕಾರಿಗಳು/ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ತುರ್ತು ಸಂದರ್ಭದಲ್ಲಿ ಯಾವುದೇ ಕಾರ್ಯವನ್ನು ನಿರ್ವಹಿಸಲು ನಿರ್ದೇಶಿಸಿದಲ್ಲಿ ಕರ್ತವ್ಯ ನಿರ್ವಹಿಸತಕ್ಕದ್ದು ಎಂಬ ಷರತ್ತನ್ನು ಸಹ ಹಾಕಲಾಗಿದೆ.