ʼಸೀತಾಫಲʼ ಹಣ್ಣು ತಿನ್ನಲು ತುಂಬಾ ರುಚಿಕರವೋ ಅಷ್ಟೇ ಸ್ವಾದಿಷ್ಟವೂ ಹೌದು. ರೋಗ ನಿರೋಧಕ ಶಕ್ತಿ ಹೊಂದಿರುವ ಸೀತಾಫಲ ದಸರಾ ಸೀಜನ್ ನಲ್ಲಿ ಒಮ್ಮೆಯಾದರೂ ತಿನ್ನಲೇಬೇಕೆಂದು ಜನ ಬಹಳ ಇಷ್ಟಪಟ್ಟು ಖರೀದಿಸುತ್ತಾರೆ.
ಬೀದರ್ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಯಥೇಚ್ಛವಾಗಿ ಬೆಳೆಯುವ ಸೀತಾಫಲ ಇದೀಗ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯ ಹಣ್ಣು. ವರ್ಷದಲ್ಲಿ ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಹೆಚ್ಚಾಗಿ ಸಿಗುವ ಸೀತಾಫಲ ಸಿಹಿ ಹೀರಲು ಜನ ನಾ ಮುಂದು ತಾ ಮುಂದೆಂದು ಮುಗಿಬಿದ್ದು ಖರೀದಿಸುತ್ತಿದ್ದಾರೆ.
ಸೀತಾಫಲ ಹೆಚ್ಚಾಗಿ ಬೆಳೆಯುವುದು ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ, ಕಲಬುರಗಿ ಹಾಗೂ ಬೀದರ್ ಜಿಲ್ಲೆಯಲ್ಲಿ, ಉಷ್ಣ ವಲಯದ ಗುಡ್ಡಗಾಡು ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಯುವ ಸೀತಾಫಲ ಮಳೆಗಾಲ ಆರಂಭವಾಗುತ್ತಿದ್ದಂತೆ ಸ್ವಚ್ಛಂದವಾಗಿ ಚಿರುರೊಡೆದು, ಸುವಾಸನೆಯುಕ್ತ ಹೂಗಳಿಂದ ಕಂಗೊಳಿಸಿ ಕಾಯಿ ಬಿಡುತ್ತದೆ. ಕಪ್ಪು ಬಣ್ಣದ ಹೆಚ್ಚಿನ ಬೀಜ ಹೊಂದಿರುವ ಸೀತಾಫಲ ಒಮ್ಮೆ ತಿಂದವರು ಮತ್ತೆ ಮತ್ತೆ ಸವಿಯಬೇಕೆಂಬ ಸ್ವಾದಿಷ್ಟ ಹಣ್ಣು ಇದಾಗಿದೆ. ಇಂಥ ಅಪರೂಪದ ಹಣ್ಣು ಈ ವರ್ಷ ಉತ್ತಮ ಮಳೆಯಾದ ಹಿನ್ನಲೆ ಯಥೇಚ್ಛವಾಗಿ ಬೆಳೆದಿದೆ. ಎಂದಿನಂತೆ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್ ಪಡೆದುಕೊಂಡಿದೆ.
ಅತಿ ಹೆಚ್ಚು ಸೀತಾಫಲ ಬೆಳೆಯುವ ತಾಲೂಕು ಔರಾದ್ :
ಜಿಲ್ಲೆಯ ವಿವಿಧ ತಾಲೂಕಿನ ಗುಡ್ಡುಗಾಡು ಪ್ರದೇಶದಲ್ಲಿ ಸೀತಾಫಲ ಹಣ್ಣು ನೈಸರ್ಗಿಕವಾಗಿ ಬೆಳೆಯುತ್ತದೆ. ಆದರೆ, ಬೀದರ್ ಜಿಲ್ಲೆಯಲ್ಲಿ ಅತೀ ಹೆಚ್ಚು ಸೀತಾಫಲ ಹಣ್ಣು ಬೆಳೆಯುವುದು ಔರಾದ ತಾಲೂಕಿನಲ್ಲಿ ಎಂಬುದು ವಿಶೇಷ. ಹೆಚ್ಚಿನ ಗುಡ್ಡಗಾಡು, ಬಯಲು ಪ್ರದೇಶ ಹೊಂದಿರುವ ಈ ತಾಲೂಕಿನಲ್ಲಿ ಸೀತಾಫಲ ಗಿಡಗಳು ಅಧಿಕವಾಗಿ ಕಾಣಿಸುತ್ತವೆ. ತಾಲೂಕಿನ ಜೊನ್ನೆಕೇರಿ, ಚಿಂತಾಕಿ, ವಡಗಾಂವ್, ಗುಡಪಳ್ಳಿ, ಜಮಗಿ, ದಾಬಕಾ, ಬೊಂತಿ, ಕಂದಗೂಳ, ಠಾಣಾ ಕುಶನೂರ ಸೇರಿದಂತೆ ವಿವಿಧ ತಾಂಡಾ ಬಳಿಯ ಅರಣ್ಯ ಪ್ರದೇಶಗಳಲ್ಲಿ ಸೀತಾಫಲ ಬೆಳೆದು ನಿಂತಿದೆ. ಜಿಲ್ಲೆಯಲ್ಲಿ ಸೀತಾಫಲ ಹಣ್ಣಿಗೆ ‘ಚಿಪ್ಪುಲಕಾಯಿ’ ಎಂದೇ ಕರೆಯುವುದು ವಾಡಿಕೆಯಂತಾಗಿದೆ.

ಸೀತಾಫಲ ಗಿಡಗಳಿಗೆ ಯಾರೂ ನೀರು, ಗೊಬ್ಬರ ಹಾಕಿ ಪೋಷಣೆ ಮಾಡುವುದಿಲ್ಲ. ಪ್ರಾಕೃತಿಕವಾಗಿ ಬೆಳೆಯುವ ಸೀತಾಫಲ ಹಣ್ಣುಗಳನ್ನು ವ್ಯಾಪಾರಿಗಳು ಅರಣ್ಯಕ್ಕೆ ತೆರಳಿ ಕಾಯಿ ಕಿತ್ತು ತಂದು ಒಂದೆರಡು ಅಡಿ ಹಾಕುತ್ತಾರೆ. ಹಣ್ಣಾದ ಹಣ್ಣುಗಳನ್ನು ಪಟ್ಟಣ, ನಗರ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.
ಬೀದಿಯಲ್ಲಿಯೇ ವ್ಯಾಪಾರ :
ಮಾರುಕಟ್ಟೆಯಲ್ಲಿ ದೊರೆಯುವ ಬಹುತೇಕ ಎಲ್ಲಾ ಹಣ್ಣುಗಳು ರಾಸಾಯನಿಕ ಮಿಶ್ರಿತ, ಸೀತಾಫಲ ತೋಟಗಾರಿಕೆ ಬೆಳೆಯಾದರೂ ಬೆಳೆಯುವರ ರೈತರ ಸಂಖ್ಯೆ ತುಂಬಾ ವಿರಳ. ಹೀಗಾಗಿ ರಾಸಾಯನಿಕ ಮಿಶ್ರಣವಲ್ಲದ ದೇಸಿಯಾಗಿ ಸಿಗುವ ಸೀತಾಫಲ ಹಣ್ಣಿಗೆ ಬೇಡಿಕೆ ಸಾಮಾನ್ಯವಾಗಿ ಹೆಚ್ಚಿದೆ. ಆದರೆ, ವ್ಯಾಪಾರಿಗಳಿಗೆ ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆ ದೊರೆಯದರಿಂದ ರಸ್ತೆ ಬದಿಯಲ್ಲಿ ಬುಟ್ಟಿಯಲ್ಲಿ ಇಟ್ಟುಕೊಂಡು ಮಾರಾಟ ಮಾಡಬೇಕಾದ ಪರಿಸ್ಥಿತಿ ಇದೆ.

ಸುಮಾರು 30-40 ಕಿ.ಮೀ. ದೂರದ ಹಳ್ಳಿ-ತಾಂಡಾಗಳಿಂದ ಬೀದರ್ ನಗರಕ್ಕೆ ಬುಟ್ಟಿ ಹೊತ್ತಿಕೊಂಡು ಬರುವ ಮಹಿಳೆಯರು, ಪುರುಷ ವ್ಯಾಪಾರಿಗಳು ನಗರದ ಸಿದ್ದಾರ್ಥ ಕಾಲೇಜು ಮುಂಭಾಗ, ಜನವಾಡ ರಸ್ತೆ, ಅಂಬೇಡ್ಕರ್ ವೃತ್ತ, ಹಳೆ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಬೀದಿ ಬದಿಯಲ್ಲಿ ಕುಳಿತು ಮಾರಾಟ ಮಾಡುತ್ತಿದ್ದಾರೆ. ಬೆಳಿಗ್ಗೆ 7 ರಿಂದ 11 ಗಂಟೆಯವರೆಗೆ ಸೀತಾಫಲ ವಹಿವಾಟ ಭಾರೀ ಜೋರಾಗಿ ನಡೀತಿದೆ.
ಸೀತಾಫಲ ಹಣ್ಣಾದ ನಂತರ ಎರಡ್ಮೂರು ದಿನಗಳ ಕಾಲ ಉಳಿಯುವುದಿಲ್ಲ. ಹೀಗಾಗಿ ಹಣ್ಣಾದ ದಿನವೇ ಮಾರಾಟ ಆಗಲೇಬೇಕು ಎಂಬುವ ಕಾರಣಕ್ಕೆ ಹಣ್ಣಾದ ದಿನವೇ ಮಾರಾಟಕ್ಕೆ ತರುತ್ತಾರೆ. ಸಣ್ಣ ಗಾತ್ರದ ಹಣ್ಣಿಗೆ ₹5, ₹10 ಹಾಗೂ ಮಧ್ಯಮ ಗಾತ್ರದ ಹಣ್ಣಿಗೆ ₹15 ಮಾರಾಟ ಮಾಡುತ್ತಿದ್ದಾರೆ. ಬುಟ್ಟಿಗೆ ₹350, ₹400 ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ. ಸೀತಾಫಲ ಹೆಚ್ಚು ಕಮ್ಮಿ ಎರಡು ತಿಂಗಳು ಸುಗ್ಗಿಯ ಕಾಲ. ಈ ವೇಳೆ ವ್ಯಾಪಾರಿಗಳು ಕನಿಷ್ಠ ₹40-50 ಸಾವಿರ ಆರ್ಥಿಕ ಸ್ವಾಲಂಬನೆ ಸಾಧಿಸುತ್ತಿದ್ದಾರೆ.
ಸೀತಾಫಲಕ್ಕೆ ಅಂತರಾಷ್ಟ್ರೀಯ ಮಾರುಕಟ್ಟೆ ಸಿಗಲಿ :
ಚೀನಾ ದೇಶ ಡ್ರ್ಯಾಗನ್ ಹಣ್ಣು, ಕಾಶ್ಮೀರದ ಸೇಬು ಸೇರಿದಂತೆ ದೇಶ-ವಿದೇಶದ ಹಣ್ಣುಗಳನ್ನು ನಮ್ಮ ಜಿಲ್ಲೆಯವರು ಇಷ್ಟಪಟ್ಟು ಅಧಿಕ ಬೆಲೆಗೆ ಖರೀದಿಸುತ್ತಾರೆ. ಆದರೆ, ನಮ್ಮ ಜಿಲ್ಲೆಯಲ್ಲೇ ಅಧಿಕವಾಗಿ ಬೆಳೆಯುವ ಅಮೂಲ್ಯ ಪ್ರಾಕೃತಿಕ ಸಂಪತ್ತು ಎನಿಸಿಕೊಂಡ ಸೀತಾಫಲ ಪಕ್ಕದ ರಾಜ್ಯಗಳಿಗೆ ತಲುಪಿಸುವ ವ್ಯವಸ್ಥೆ ಇಲ್ಲದಿರುವುದು ಸೋಜಿಗದ ಸಂಗತಿ ಎಂದು ಹಿರಿಯ ಸಾಹಿತಿ ರಮೇಶ ಬಿರಾದರ್ ಕಳವಳ ವ್ಯಕ್ತಪಡಿಸಿದರು.

ʼಸೀತಾಫಲ ತಿಂದರೆ ಹಲವು ಆರೋಗ್ಯ ಪ್ರಯೋಜನಗಳೂ ಇವೆ. ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಅಷ್ಟೇ ಅಲ್ಲದೆ ಸೀತಾಫಲ ಗಿಡದ ಎಲೆ ಸಹ ಹಿರಿಯರು ಮನೆಮದ್ದಾಗಿ ಬಳಸುತ್ತಿದ್ದರು. ಇದೀಗ ಆಧುನಿಕ ತಂತ್ರಜ್ಞಾನ ಬೆಳವಣೆಯಿಂದಾಗಿ ಅದು ಮರೆಯಾಗುತ್ತಿದೆʼ ಎಂದು ನೆನಪಿಸಿದರು.
ಔರಾದ ತಾಲೂಕಿನಲ್ಲಿ ಹೇರಳವಾಗಿ ಬೆಳೆಯುವ ಸೀತಾಫಲಕ್ಕೆ ಸರ್ಕಾರಗಳು ರಾಷ್ಟ್ರ, ಅಂತರಾಷ್ಟ್ರೀಯ ಮಾರುಕಟ್ಟೆ ಸೌಲಭ್ಯ ಒದಗಿಸುವುದು ಅಗತ್ಯವಾಗಿದೆ. ಆದರೆ, ತೋಟಗಾರಿಕೆ, ಕೃಷಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ, ಇಚ್ಚಾಶಕ್ತಿ ಕೊರತೆಯಿಂದ ಜಿಲ್ಲೆಯ ನೈಸರ್ಕಗಿ ಹಣ್ಣಿಗೆ ಮಾರುಕಟ್ಟೆ ಸಿಗದೇ ಇರುವುದು ವಿಪರ್ಯಾಸದ ಸಂಗತಿ. ಸೀತಾಫಲ ಬೆಳೆಯುವ ರೈತರಿಗೆ ಕೊಲ್ಡ್ ಸ್ಟೋರೇಜ್ ನಿರ್ಮಿಸಿ ಇ-ಟೆಂಡರ್ ಮೂಲಕ ಮಾರಾಟ ಮಾಡುವಂತಹ ವ್ಯವಸ್ಥೆಯಾದರೆ ಪಕ್ಕದ ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯ, ದೇಶಗಳಿಗೆ ಸಾಗಾಟ ಮಾಡಬಹುದು. ಇದರಿಂದ ಒಂದಿಷ್ಟು ವ್ಯಾಪಾರಿ, ಕಾರ್ಮಿಕ ರೈತರಿಗೆ ಆದಾಯದ ಮೂಲವಾಗುತ್ತದೆʼ ಎಂದು ಆಗ್ರಹಿಸಿದರು.

ʼಗ್ರಾಮೀಣ ಭಾಗದ ಕೆಲ ಕೂಲಿ ಕಾರ್ಮಿಕರು, ಕೃಷಿಕರು ವರ್ಷದ ಎರಡ್ಮೂರು ತಿಂಗಳು ಸೀತಾಫಲ ಹಣ್ಣಿನ ವ್ಯಾಪಾರ ಮಾಡುತ್ತಾರೆ. ಅರಣ್ಯದಿಂದ ಕಷ್ಟಪಟ್ಟು ಕಿತ್ತು ತಂದು ನಗರಗಳಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವ ವ್ಯಾಪಾರಿಗಳಿಗೆ ಶ್ರಮಕ್ಕೆ ತಕ್ಕ ಲಾಭ ಸಿಗುತ್ತಿಲ್ಲ. ಸೂಕ್ತ ಮಾರುಕಟ್ಟೆ ಹಾಗೂ ನಿಗದಿತ ಬೆಲೆ ದೊರೆತರೆ ಹೆಚ್ಚಿನ ಆದಾಯ ಗಳಿಸಲು ಸಾಧ್ಯ. ಹಲವು ರೋಗರುಜಿನಿಗಳಿಗೆ ರಾಮಬಾಣದಂತಿರುವ ಈ ಹಣ್ಣು ಹೊರ ರಾಜ್ಯ, ವಿದೇಶಕ್ಕೂ ರಫ್ತಾದರೆ ಅಧಿಕ ಆದಾಯ ಗಳಿಸುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಹಣ್ಣು ಬಹುಬೇಡಿಕೆ ಪಡೆಯುವುದುʼ ಎಂದು ರೈತ ಮುಖಂಡರೊಬ್ಬರು ಅಭಿಪ್ರಾಯಪಡುತ್ತಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತದ ಅಪೌಷ್ಟಿಕತೆಯ ಗಂಭೀರತೆ ಕೇಂದ್ರಕ್ಕೆ ಅರಿವಾಗುವುದು ಯಾವಾಗ?
ʼಬೀದರ್ ನಗರಕ್ಕೆ ಔರಾದ ತಾಲೂಕಿನ ವ್ಯಾಪಾರಿಗಳೇ ಹೆಚ್ಚಿನ ಸೀತಾಫಲ ಹಣ್ಣು ಮಾರಾಟಕ್ಕೆ ತರುತ್ತಾರೆ. ದೂರದ ಹಳ್ಳಿಗಳಿಂದ ನಸುಕಿನ ಜಾವದಲ್ಲೇ ಆಗಮಿಸುವ ವ್ಯಾಪಾರಿಗಳಿಗೆ ಸಾರಿಗೆ ವೆಚ್ಚ ಅಧಿಕ ಹೋಗುತ್ತಿದೆ. ಒಂದು ಬುಟ್ಟಿಗೆ ಇಂತಿಷ್ಟು ಎಂದು ಸೀತಾಫಲ ಹಣ್ಣಿನ ರುಚಿ, ಗಾತ್ರ ಹಾಗೂ ಸಂಖ್ಯೆ ಆಧರಿಸಿ ಬೆಲೆ ನಿಗದಿಯಾಗುತ್ತದೆ. ಬುಟ್ಟಿ ಲೆಕ್ಕದಲ್ಲಿ ಮಾರಾಟ ಮಾಡುವ ನಮಗೆ ದಿನಕ್ಕೆ 500, 600 ಆದಾಯ ಸಿಗುತ್ತದೆ. ಆದರೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲದ ಕಾರಣ ಬಿಸಿಲಿನಲ್ಲೇ ಕುಳಿತುಕೊಳ್ಳಬೇಕಾಗಿದೆʼ ಎಂದು ಸೀತಾಫಲ ವ್ಯಾಪಾರಿ ರವೀಂದ್ರ ಹೇಳುತ್ತಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.