ಕೆಲಸದ ಸ್ಥಳದಲ್ಲಿ ಕಾರ್ಮಿಕರ ಮೇಲೆ ನಡೆಯುವ ಹಿಂಸೆಗಳಿಗೆ ನೆರವು ನೀಡುವ ಉದ್ದೇಶದಿಂದ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಹೆಲ್ಪ್‌ಲೈನ್ ಆರಂಭಿಸಿದ್ದು, ಬೆಂಗಳೂರಿನಲ್ಲಿ ಇಲ್ಲಿಯವರೆಗೆ ಸುಮಾರು 2,780 ದೂರುಗಳು ದಾಖಲಾಗಿದ್ದು, ಈ ಪೈಕಿ 1,160 ದೂರುಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಸಂಘಟನೆ ಹೇಳಿದೆ.
“ಇಂಡಿಯಾ ಲೇಬರ್ ಲೈನ್ ವಲಸೆ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರ ಕೂಲಿ ವಂಚನೆ, ಪಿ.ಎಫ್. ಗ್ರಾಚ್ಯುಟಿ, ಕೆಲಸದ ಸ್ಥಳದಲ್ಲಿ ಕಾರ್ಮಿಕರ ಮೇಲೆ ನಡೆಯುವ ಹಿಂಸೆಗೆ ಸಂಬಂಧಿಸಿದಂತೆ ಮಧ್ಯಸ್ಥಿಕೆಯ ಮೂಲಕ ಕಾರ್ಮಿಕರಿಗೆ ನೆರವು ನೀಡುವ ಉದ್ದೇಶದಿಂದ ಈ ಹೆಲ್ಪ್‌ಲೈನ್ ಆರಂಭವಾಗಿದೆ. ಈ ಕೆಲಸವು ಜುಲೈ 2021 ರಿಂದ ಪ್ರಾರಂಭವಾಗಿದ್ದು, ಪ್ರಸ್ತುತ ಬೆಂಗಳೂರು, ಹುಬ್ಬಳಿ-ಧಾರವಾಡ, ಮುಂಬೈ, ದೆಹಲಿ ಸೇರಿದಂತೆ ದೇಶದ 16 ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ” ಎಂದು ಹೇಳಿದೆ.
“ಬೆಂಗಳೂರಿನಲ್ಲಿ ದಾಖಲಾದ ದೂರಗಳನ್ನು ಇತ್ಯರ್ಥಪಡಿಸಿ ಕಾರ್ಮಿಕರಿಗೆ ₹2.62 ಕೋಟಿ ಕೊಡಿಸಲಾಗಿದೆ. ಇದರಿಂದ ಸುಮಾರು 3,068 ವಲಸೆ ಕಾರ್ಮಿಕ ಕುಟುಂಬಗಳಿಗೆ ಅನುಕೂಲವಾಗಿದೆ” ಎಂದು ತಿಳಿಸಿದೆ.
ದೇಶದ ಬೇರೆ ಬೇರೆ ರಾಜ್ಯಗಳಿಂದ ಹಾಗೂ ಕರ್ನಾಟಕದ ನಾನಾ ಜಿಲ್ಲೆಗಳಿಂದ ಜೀವನ ನಡೆಸಲು ಕೆಲಸಕ್ಕಾಗಿ ಲಕ್ಷಾಂತರ ಕಾರ್ಮಿಕರು ವಲಸೆ ಬರುತ್ತಾರೆ. ಇವರು ಅಸಂಘಟಿತ ವಲಯಗಳಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸ, ಮನೆಗೆಲಸ, ಹೌಸ್ ಕೀಪಿಂಗ್, ಗಾರ್ಮೆಂಟ್, ಸಣ್ಣ-ಸಣ್ಣ ಕಾರ್ಖಾನೆಗಳು, ಸೆಕ್ಯೂರಿಟಿ ಗಾರ್ಡ್, ಸೇವಾ ವಲಯಗಳಾದ ನರ್ಸಿಂಗ್, ಹೋಮ್ ನರ್ಸಿಂಗ್, ಟ್ರಾನ್ಸ್‌ಪೋರ್ಟ್, ಗಿಗ್ ವರ್ಕರ್ಸ್ ಹೀಗೆ ಇನ್ನಿತರ ಅಸಂಘಟಿತ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಂಗಳವಾರ ಬೆಳ್ಳಂಬೆಳಿಗ್ಗೆ ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಐಟಿ ದಾಳಿ
ಇಂತಹ ಕಾರ್ಮಿಕರು ಮಾಲೀಕರಿಂದ/ಗುತ್ತಿಗೆದಾರರ ಕಡೆಯಿಂದ ಕೂಲಿ ವಂಚನೆ, ಪಿ.ಎಫ್, ಅಪಘಾತ ಪರಿಹಾರ ಕೆಲಸದ ಸ್ಥಳದಲ್ಲಿ ಕಿರುಕುಳ ಅನುಭವಿಸುತ್ತಿದ್ದಲ್ಲಿ, ಅವರು ಇಂಡಿಯಾ ಲೇಬರ್ ಲೈನ್ ಉಚಿತ ಸಹಾಯವಾಣಿ ಸಂಖ್ಯೆ 1-800-833-9020 ಕರೆ ಮಾಡಿ ದೂರು ಸಲ್ಲಿಸಬಹುದು.