ಲೋಕಸಭಾ ಚುನಾವಣಾ ಕಾವು ರಂಗೇರಿದೆ. ಕರ್ನಾಟಕದ 28 ಸ್ಥಾನಗಳ ಪೈಕಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕೆಂದು ಕಾಂಗ್ರೆಸ್ ಭಾರೀ ಕಸರತ್ತು ನಡೆಸುತ್ತಿದೆ. ಇತ್ತ, ಬಿಜೆಪಿ-ಜೆಡಿಎಸ್ ಮೈತ್ರಿಯು ರಾಜ್ಯದ ಎಲ್ಲ ಕ್ಷೇತ್ರಗಳನ್ನು ಗೆಲ್ಲುತ್ತದೆ. ರಾಜ್ಯದಲ್ಲಿ ‘ಸ್ವೀಪ್’ ಮಾಡುತ್ತೇವೆಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಅದು ಅಷ್ಟು ಸುಲಭವಲ್ಲ ಎಂಬುದನ್ನು ರಾಜಕೀಯ ಇತಿಹಾಸ ಹೇಳುತ್ತಿದೆ.
ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕರ್ನಾಟಕದಲ್ಲಿ ಪಕ್ಷವೊಂದಕ್ಕೆ ಅಂತಹ ‘ಸ್ವೀಪ್’ ಮಾಡಲು ಸಾಧ್ಯವಾಗಿದ್ದು ಒಮ್ಮೆ ಮಾತ್ರ. 1971ರಲ್ಲಿ ತೀವ್ರ ವಿರೋಧದ ನಡುವೆ ಕಾಂಗ್ರೆಸ್ ಈ ಸಾಧನೆಯನ್ನು ಒಮ್ಮೆ ಮಾತ್ರ ಸಾಧಿಸಿದೆ. ಅದಾದ ಬಳಿಕ, ರಾಜ್ಯದ ಜನರು ಒಂದೇ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿಲ್ಲ.
ಕರ್ನಾಟಕದಲ್ಲಿ ಈ ಬಾರಿ ಗೆಲುವು ನಮ್ಮದೇ, ಎಲ್ಲ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಹೇಳಿಕೊಂಡಿದೆ. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಈ ಎರಡೂ ಪಕ್ಷಗಳಿಗೆ ಆ ದಿಗ್ವಿಜಯ ಸಾಧ್ಯವೇ? ಅದೂ, ಬಿಜಪಿ ನೇತೃತ್ವದ ಎನ್‌ಡಿಎ ಸರ್ಕಾರ 10 ವರ್ಷಗಳ ಕಾಲ ಅಧಿಕಾರ ನಡೆಸಿರುವ ಇಂತಹ ಸಮಯದಲ್ಲಿ ಎಂಬುದು ಗಮನಾರ್ಹ.
1951ರಿಂದ ಈವರೆಗಿನ ಚುನಾವಣಾ ಅಂಕಿಅಂಶಗಳ ಪ್ರಕಾರ, ಒಂದು ಪಕ್ಷ ಒಂದು ಬಾರಿ ಮಾತ್ರವೇ ರಾಜ್ಯದಲ್ಲಿ ಎಲ್ಲ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆ ಸಾಧನೆಯನ್ನು 1971ರಲ್ಲಿ ಕಾಂಗ್ರೆಸ್ ಮಾಡಿದೆ. ಇಂದಿರಾ ಗಾಂಧಿಯವರ ನಾಯಕತ್ವದಲ್ಲಿ ಕಾಂಗ್ರೆಸ್ ಬಡತನವನ್ನು ಕಡಿಮೆ ಮಾಡುವತ್ತ ಗಮನಹರಿಸುವ ಅಭಿಯಾನ ನಡೆಸಿತ್ತು. ಪಕ್ಷದಲ್ಲಿನ ವಿಭಜನೆಯನ್ನು ನಿವಾರಿಸಿಕೊಂಡಿತ್ತು. ಪರಿಣಾಮವಾಗಿ, ಹಿಂದಿನ ಚುನಾವಣೆಯಲ್ಲಿ ಕಳೆದುಕೊಂಡ ಅನೇಕ ಸ್ಥಾನಗಳನ್ನು ಮರಳಿ ಗಳಿಸುವ ಮೂಲಕ ಕಾಂಗ್ರೆಸ್ ಪ್ರಚಂಡ ವಿಜಯವನ್ನು ಗಳಿಸಿತು. ಕರ್ನಾಟಕದಲ್ಲಿ (ಮೈಸೂರು ರಾಜ್ಯ) 27ಕ್ಕೆ 27 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದು ಬೀಗಿತ್ತು. ಆಗ 70.87% ಮತಗಳು ಕೈ ಪಕ್ಷದ ಪಾಲಾಗಿದ್ದವು.
ಆ ಚುನಾವಣೆಯಲ್ಲಿಯೂ ಕಾಂಗ್ರೆಸ್ – ತಮಿಳುನಾಡಿನ ಕೆ ಕಾಮರಾಜ್ ಮತ್ತು ಕರ್ನಾಟಕದಲ್ಲಿ ಎಸ್ ನಿಜಲಿಂಗಪ್ಪ ಅವರಂತಹ ಪ್ರಭಾವಿ ನಾಯಕ ತೀವ್ರ ವಿರೋಧವನ್ನು ಎದುರಿಸಿತ್ತು. 1969ರಲ್ಲಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆದ ಸಭೆಯಲ್ಲಿ ಇಂದಿರಾ ಗಾಂಧಿ ವಿರುದ್ಧ ನಿರ್ಣಯ ಕೈಗೊಳ್ಳಲಾಗಿತ್ತು.
ಆದರೂ, ‘ಗರೀಬಿ ಹಟಾವೋ’ ಘೋಷಣೆಯೊಂದಿಗೆ ಇಂದಿರಾ ಗಾಂಧಿ ಭಾರತದಾದ್ಯಂತ ಗೆಲ್ಲುವಲ್ಲಿ ಯಶಸ್ವಿಯಾದರು. ಆದರೆ, ಕೆಲವು ವರ್ಷಗಳ ನಂತರ ತುರ್ತುಪರಿಸ್ಥಿತಿ ಹೇರುವ ಮೂಲಕ ಚುನಾವಣಾ ದುರುಪಯೋಗದ ಆರೋಪಕ್ಕೆ ಗುರಿಯಾದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೂರು ವರ್ಷಗಳ ಬಳಿಕ ಏಪ್ರಿಲ್‌ನಲ್ಲಿ 37.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು
ಕರ್ನಾಟಕವು ತನ್ನ ನೆರೆಯ ಆಂಧ್ರ ಮತ್ತು ತಮಿಳುನಾಡುಗಳಿಗಿಂತ ಭಿನ್ನವಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರಬಲ್ಲ ಪ್ರಬಲ ಪ್ರಾದೇಶಿಕ ಪಕ್ಷವನ್ನು ಕಟ್ಟುವಲ್ಲಿ ವಿಫಲವಾಗಿದೆ ಎಂಬುದು ರಹಸ್ಯವಲ್ಲ. ಆದರೆ, ಯಾವುದೇ ರಾಷ್ಟ್ರೀಯ ಪಕ್ಷ – ಕಾಂಗ್ರೆಸ್ ಅಥವಾ ಬಿಜೆಪಿ – ಚುನಾವಣೆಗಳನ್ನು ‘ಸ್ವೀಪ್’ ಮಾಡಲು ಅವಕಾಶ ಕೊಟ್ಟಿಲ್ಲ. ಅದರಲ್ಲಿ, ಪ್ರಾದೇಶಿಕ ಪಕ್ಷಗಳ ಪಾಲೂ ಗಮನಾರ್ಹವಾಗಿದೆ ಎಂಬುದು ಸತ್ಯ. ಇದೀಗ, ಪ್ರಮುಖ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ರಾಷ್ಟ್ರೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡ ಹೊರತಾಗಿಯೂ ಅಂತಹ ಗೆಲುವು ಸಾಧ್ಯವಿಲ್ಲ ಎಂಬುದನ್ನು ಸದ್ಯದ ರಾಜಕೀಯ ಪರಿಸ್ಥಿತಿಗಳು ಸೂಚಿಸುತ್ತಿವೆ.