ಈಗ ಪ್ರಗತಿಪರರು ಸಾಮಾಜಿಕ ಜಾಲತಾಣಗಳಲ್ಲಿ ನಡೆಸುತ್ತಿರುವ ಹನುಮಂತನ ಸಂಭ್ರಮಾಚರಣೆ ನೋಡಿದರೆ ಬಿಗ್ ಬಾಸ್‌ನಂತಹ ರಿಯಾಲಿಟಿ ಶೋಗಳಿಗೆ ಇವರಿಂದ ಒಂದು ಕ್ಲೀನ್ ಸರ್ಟಿಫಿಕೇಟ್ ಸಿಕ್ಕಿಬಿಟ್ಟಿರುವಂತೆ ಕಾಣುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ.
ಬಿಗ್ ಬಾಸ್ ಬಗ್ಗೆ ಪ್ರಗತಿಪರ ಗೆಳೆಯರ ವಲಯದಿಂದ ವಿನ್ನರ್ ಹನುಮಂತುಗೆ ಅಭಿನಂದನೆಗಳ ಸುರಿಮಳೆಯಾಗುತ್ತಿದೆ.
ಈ ಬಿಗ್ ಬಾಸನ್ನು ಅಪರೂಪಕ್ಕೆ ನೋಡಿದರೂ ಹೆಚ್ಚು ಹೊತ್ತು ನೋಡಬೇಕು ಎನಿಸುತ್ತಿರಲಿಲ್ಲ. ಇಲ್ಲಿ ನಡೆಸುವ ಮಂಗಾಟಗಳು, ಈ ಸ್ಪರ್ಧಿಗಳ ಮನೋಭಾವಗಳು, ಪರಸ್ಪರ ಜಗಳಕ್ಕೆ ನಿಲ್ಲುವ, ನಿಲ್ಲಿಸುವಂತೆ ಮಾಡುವ ಆಯೋಜಕರು ಇದನ್ನು ನೋಡುವ ಎಳೆಯ ಮನಸ್ಸನ್ನು ಹೇಗೆ ಪ್ರಭಾವಿಸಬಹುದು ಎಂದು ಗಾಬರಿಯಾಗುತ್ತಿತ್ತು. ಇಲ್ಲಿ ನಗು, ಅಳು ಎಲ್ಲವೂ ನೋಡುಗರ ಮನಸ್ಸನ್ನು ಆವರಿಸಿಕೊಳ್ಳಬಯಸುವ ಮಾರಾಟದ ಸರಕುಗಳು.
ರಿಯಾಲಿಟಿ ಶೋ ನಡೆಸುವ ಟಿವಿ ವಾಹಿನಿಗಳು ಪ್ರಗತಿಪರರಲ್ಲದಿರಬಹುದು, ಆದರೆ ಸಂದರ್ಭ ಬಂದರೆ ಅವುಗಳಷ್ಟು ಜಾತ್ಯತೀತರು, ಮಾನವತಾವಾದಿಗಳು ಯಾರೂ ಇಲ್ಲ. ಏಕೆಂದರೆ ಅವರ ಏಕಮೇವ ಗುರಿ ಇಂತಹ ಕಾರ್ಯಕ್ರಮಗಳ ಮೂಲಕ ತಮ್ಮ ಟಿಆರ್‍ಪಿ ರೇಟು ಹೆಚ್ಚಿಸಿಕೊಂಡು ಹಣ ಮಾಡುವುದು. ನಮ್ಮ ದೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಪ್ರವೇಶವಾಗಿ ಅವು ಎಲ್ಲ ಕಡೆ ಇಂಗ್ಲಿಷಿನಲ್ಲಿ ಕಾರ್ಯಾಚರಿಸುತ್ತ ಕನ್ನಡವನ್ನು ಕೊಲ್ಲುತ್ತಿವೆ ಎಂದು ಆರೋಪಿಸುತ್ತಿದ್ದೆವು. ಮೈಕ್ರೋಸಾಫ್ಟ್ ಕಂಪನಿ ಸೇರಿದಂತೆ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಈಗ ಕೆಲವು ವರ್ಷಗಳಿಂದ ಇಂಗ್ಲಿಷಿನ ಜತೆಜತೆಗೆ ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಕನ್ನಡವೂ ಸೇರಿದಂತೆ ಭಾರತದ ಸ್ಥಳೀಯ ಭಾಷೆಗಳಲ್ಲಿಯೂ ಕಾರ್ಯಾಚರಿಸುತ್ತಿವೆ. ಸ್ಟಾರ್ ಪ್ಲಸ್‌ನಂತಹ ಚಾನಲ್ಲುಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯ ವೀಕ್ಷಕ ವಿವರಣೆ ಈಗ ಕನ್ನಡದಲ್ಲಿಯೂ ಬರುತ್ತಿದೆ. ಅಂದರೆ ನಾವು ಅಂದುಕೊಂಡಂತೆ ಈ ಬಹುರಾಷ್ಟ್ರೀಯ ಕಂಪನಿಗಳ ಉದ್ದೇಶ ಇಂಗ್ಲಿಷನ್ನು ಒಳಗೊಂಡಂತೆ ಯಾವುದೇ ನಿರ್ದಿಷ್ಟ ಭಾಷೆಯನ್ನು ಬೆಳೆಸುವುದಲ್ಲ. ಇಂಗ್ಲಿಷೊಂದು ಅವರ ಮಾರುಕಟ್ಟೆಯಲ್ಲಿ ಬಳಸುವ ಒಂದು ಟೂಲ್ ಆಗಿತ್ತಷ್ಟೆ. ತಮ್ಮ ಮಾರುಕಟ್ಟೆಯ ವಿಸ್ತರಣೆಗೆ ಕನ್ನಡವೂ ಒಂದು ಟೂಲ್ ಆಗಬಹುದು ಎಂದು ಅನ್ನಿಸಿದ ಕ್ಷಣ ಅವು ಕನ್ನಡದಲ್ಲಿಯೂ ಕಾರ್ಯಾಚರಿಸಲು ತೊಡಗಿದವು.
ರಿಯಾಲಿಟಿ ಶೋಗಳನ್ನು ನಡೆಸುವ ಟಿವಿಗಳ ಪ್ರಮುಖ ಬಂಡವಾಳವೇ ನೋಡುಗ ಜನರ ಭಾವನಾಜಗತ್ತು. ಕಡುಕಷ್ಟದ ಹಿನ್ನೆಲೆಯಿಂದ ಬಂದ ಕುರಿ ಕಾಯುವ ಹಾಡುಗಾರ, ತಂದೆ ತಾಯಿ ಇಲ್ಲದ ಹೂಮಾರುವ ಹಾಡುಗಾರರನ್ನು ವೇದಿಕೆಗೆ ಕರೆತಂದು ಅವರೆಡೆಗಿನ ನಮ್ಮ ಭಾವನೆಗಳನ್ನು ಬಂಡವಾಳ ಮಾಡಿಕೊಳ್ಳುವ ರಿಯಾಲಿಟಿ ಶೋಗಳು ಟಿಆರ್‍ಪಿ ರೇಟು ಹೆಚ್ಚಿಸಿಕೊಳ್ಳುತ್ತವೆ. ಇಂತಹ ಟಿಆರ್‍ಪಿ ಹೆಚ್ಚಳಕ್ಕೆ ಹನುಮಂತು ಒಂದು ಟೂಲ್ ಅಷ್ಟೆ.
ಇದನ್ನು ಓದಿದ್ದೀರಾ?: ಸಿದ್ಧಲಿಂಗಯ್ಯನವರ ಕಾವ್ಯ: ಸಾಮಾಜಿಕ ಕ್ರೋಧದ ನೆಲೆಯಿಂದ ಆಧ್ಯಾತ್ಮಿಕ ಅನ್ವೇಷಣೆಯ ಕಡೆಗೆ
ಸಮಯ ಬಂದರೆ ಹನುಮಂತುವನ್ನು ಗೆಲ್ಲಿಸುವ ಈ ಟಿವಿ ವಾಹಿನಿಗಳ ಹಿಂದೆ ಇರುವುದು ವಾಸ್ತವವನ್ನು ಮರೆಸಿ ಕಂಪನಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು. ಇದಕ್ಕೆ ಅವರಿಗೆ ಸಮಾಜದ ಎಲ್ಲಾ ಜಾತಿಜನಾಂಗದ ಜನರೂ ಬೇಕು. ಏಕೆಂದರೆ ಅವರೆಲ್ಲ ಇವರ ಗ್ರಾಹಕರು. ಜನರಲ್ಲಿ ಸಾಂಪ್ರದಾಯಿಕ ನಂಬಿಕೆಗಳನ್ನು ಉಳ್ಳ ಜನರಿದ್ದಾರೆ, ಸುಪ್ತವಾಗಿ ಜಾತಿಪ್ರಜ್ಞೆ ಹೊಂದಿದ ಜನರಿದ್ದಾರೆ. ಬಲಪಂಥೀಯ ರಾಜಕಾರಣದಿಂದ ಪ್ರಭಾವಿತರಾದ ಇನ್ನೊಂದು ಧರ್ಮದ ಜನರನ್ನು ದ್ವೇಷಿಸುವ ಜನರಿದ್ದಾರೆ. ಇವರೆಲ್ಲ ಸಂಖ್ಯೆಯಲ್ಲಿ ಕೋಟಿ ಕೋಟಿಯಿದ್ದಾರೆ. ಇವರೆಲ್ಲ ಗ್ರಾಹಕರು. ಈ ರಿಯಾಲಿಟಿ ಶೋಗಳು ಈ ಎಲ್ಲ ಜನರ ಭಾವನೆಗಳನ್ನು ಉದ್ರೇಕಿಸಿ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುತ್ತದೆ. ಹಾಗಾಗಿಯೇ ಈ ಕಾರ್ಯಕ್ರಮಗಳಿಗೆ ಹಳ್ಳಿಯ ಮುಗ್ದ ಜನರು ಬೇಕಾಗುವಂತೆ ಸಮಾಜದ ವಿಕಾರವ್ಯಕ್ತಿತ್ವಗಳನ್ನು ಹೊಂದಿದ ಜನರೂ ಬೇಕಾಗುತ್ತಾರೆ. ಆದ್ದರಿಂದ ಮಹಿಳೆಯರನ್ನು ಕೀಳಾಗಿ ನೋಡುವ, ಇನ್ನೊಂದು ಜಾತಿಯ ಜನರನ್ನು, ಇನ್ನೊಂದು ಧರ್ಮದ ಜನರನ್ನು ಉಗ್ರವಾಗಿ ದ್ವೇಷಿಸುವ ಜನರಿಗೂ ಇಲ್ಲಿ ಸ್ಪರ್ಧಿಗಳಾಗಿ ಮುಕ್ತ ಪ್ರವೇಶವಿದೆ. ಇಂತಹ ಜನರು ಪ್ರವೇಶ ಪಡೆದಾಗ ಈ ರಿಯಾಲಿಟಿ ಶೋಗಳನ್ನು ಬಹಿಷ್ಕರಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಗುಟುರು ಹಾಕುವ ಪ್ರಗತಿಪರರು ಹನುಮಂತು ಗೆದ್ದಾಕ್ಷಣ ಎಲ್ಲವನ್ನೂ ಮರೆತು ‘ಇದು ಜನತಂತ್ರದ ಗೆಲುವು’ ಎನ್ನುವಂತೆ ಪುಟಗಟ್ಟಳೆ ಬರೆಯುತ್ತಿದ್ದಾರೆ.
ಇದರ ಪರಿಣಾಮವೇನು ಎಂದರೆ ಈ ರಿಯಾಲಿಟಿ ಶೋಗಳು ಎಷ್ಟೇ ಜನಪ್ರಿಯವಾಗಿದ್ದರೂ ಇದರ ಬಗೆಗಿನ ಪ್ರಗತಿಪರರ ಗಾಢ ಎಚ್ಚರಿಕೆಯ ಮಾತುಗಳು ಇವುಗಳನ್ನು ಒಂದಿಷ್ಟು ಅನುಮಾನದಿಂದ ಗಮನಿಸುವಂತೆ ಮಾಡುತ್ತಿದ್ದವು. ಈಗ ಪ್ರಗತಿಪರರು ಸಾಮಾಜಿಕ ಜಾಲತಾಣಗಳಲ್ಲಿ ನಡೆಸುತ್ತಿರುವ ಹನುಮಂತನ ಸಂಭ್ರಮಾಚರಣೆ ನೋಡಿದರೆ ಬಿಗ್ ಬಾಸ್‌ನಂತಹ ರಿಯಾಲಿಟಿ ಶೋಗಳಿಗೆ ಇವರಿಂದ ಒಂದು ಕ್ಲೀನ್ ಸರ್ಟಿಫಿಕೇಟ್ ಸಿಕ್ಕಿಬಿಟ್ಟಿರುವಂತೆ ಕಾಣುತ್ತಿದೆ.
ಇದು ಅಪಾಯಕಾರಿ ಬೆಳವಣಿಗೆ.

ಡಾ. ಸರ್ಜಾಶಂಕರ್ ಹರಳಿಮಠ
ಲೇಖಕರು